ಮೂಡಿಗೆರೆ ಶಾಸಕರಾದ ಎಂ.ಪಿ ಕುಮಾರಸ್ವಾಮಿ ಅವರು ಯಾಕೋ ತನ್ನದೇ ಕೋಟೆ ಕಟ್ಟಿಕೊಂಡು ಸಾಮ್ರಾಜ್ಯ ನಡೆಸುವ ಕಥೆ ಇರುವ ಕೆ.ಜಿ.ಎಫ್ ಸಿನಿಮಾ ನೋಡಿ ಅದರ ಗುಂಗಿಂದ ಹೊರಬಂದತೆ ಕಾಣುತ್ತಿಲ್ಲ.
ಡ್ಯೂಟಿ ರಿಪೋರ್ಟ್ ಮಾಡಲು ಬಂದ ಪಿಎಸ್ಐ ಒಬ್ಬರಿಗೆ ನನ್ನನ್ನು ಕೇಳದೇ ನಮ್ಮ ಕ್ಷೇತ್ರದ ಗಡಿ ದಾಟಿದ್ದು ಹೇಗೆ ಎಂಬಂತೆ ಯಾರನ್ನು ಕೇಳಿ ಬಂದೆ? ಎಂದು ಅವಾಜ್ ಹಾಕಿ ಈಗ ನಾನು ಹೇಳಿದ್ದು ಸರಿ ಎಂಬಂತೆ ಸಮರ್ಥನೆ ಮಾಡಿಕೊಳ್ಳುತ್ತಿರುವುದು ನೋಡಿದರೆ ಶಾಸಕರು ಪಾಳೆಗಾರಿಕೆ ಮಾನಸಿಕತೆಯಲ್ಲಿ ಇದ್ದಂತೆ ಕಾಣುತ್ತಿದೆ.
ಚಿಕ್ಕಮಗಳೂರಿನ ಮೂಡಿಗೆರೆಯ ಪೊಲೀಸ್ ಸ್ಟೇಷನ್ ಒಂದಕ್ಕೆ ಪಿಎಸ್ಐ ಆಗಿ ನೇಮಕ ಆಗಿರುವ ಪೊಲೀಸ್ ಅಧಿಕಾರಿ ರವೀಶ ಅವರಿಗೆ ಎಂಎಲ್ಎ, ಎಂ.ಪಿ ಕುಮಾರಸ್ವಾಮಿ ಆವಾಜ್ ಹಾಕಿದ ಆಡಿಯೋ ಒಂದು ವೈರಲ್ ಆಗಿತ್ತು.
‘ನೀನು ಯಾರನ್ನು ಕೇಳಿ ಚಾರ್ಜ್ ತೆಗೆದುಕೊಂಡಿದ್ದೀಯಾ?’, ‘ನಿನ್ನನ್ನು ಬೇಡ ಅಂತ ಹೇಳಿದ್ದೆ ತಾನೇ?’, ‘ಮರ್ಯಾದೆಯಿಂದೆ ಬಂದ ಜಾಗಕ್ಕೆ ವಾಪಾಸ್ ಹೋಗು’, ‘ಐಜಿಗೆ ಎಷ್ಟು ಲಂಚ ಕೊಟ್ಟಿದ್ದೀಯಾ? ಯಾವನು ಐಜಿ.. ಮೂಡಿಗೆರೆಗೆ ನಾನೇ’, ‘ನನ್ನನ್ನು ನೋಡಲು ಬಂದ್ರೆ ಒದ್ದು ಓಡಿಸುತ್ತೇನೆ’ ಎಂದು ಅವಾಝ್ ಹಾಕಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಬಾರೀ ಸದ್ದು ಮಾಡಿದ್ದರ ಬೆನ್ನಲ್ಲೇ ಫೇಸ್ಬುಕ್ ನಲ್ಲಿ ಶಾಸಕ ಎಂ ಪಿ ಕುಮಾರಸ್ವಾಮಿ ಇದಕ್ಕೆ ಸಂಬಂಧಿಸಿದಂತೆ ಫೇಸ್ಬುಕ್ ಮೂಲಕ ಸ್ಪಷ್ಟನೆ ನೀಡಿದ್ದರು, ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದರು.
ಅದಷ್ಟೇ ಅಲ್ಲದೆ ಮಾಧ್ಯಮಗಳ ಎದುರು ಪ್ರತಿಕ್ರಿಯೆ ನೀಡಿದ ಶಾಸಕರು, ಎಲ್ಲಾ ಕ್ಷೇತ್ರದ ಶಾಸಕರು ಅವರವರಿಗೆ ಬೇಕಾದವರನ್ನು ಹುದ್ದೆಗೆ ಹಾಕಿಕೊಳ್ಳುತ್ತಾರೆ, ಆದರೆ ಈ ಸ್ಟೇಷನ್ ಗೆ ಐಜಿ ಆದೇಶದ ಮೇರೆಗೆ ನೇಮಕ ಮಾಡಿದ್ದಾರೆ. ಅವರ್ಯಾರು ಐಜಿ ನನ್ನ ಕ್ಷೇತ್ರಕ್ಕೆ ಪೋಸ್ಟಿಂಗ್ ಹಾಕಲು. ಎಲ್ಲಾ ಕ್ಷೇತ್ರಗಳಿಗೆ ನೇಮಕ ಮಾಡಲು ಐಜಿಗೆ ಹಕ್ಕಿಲ್ಲ, ಅವರೇನು ಸೀಮೆಗೆ ಇಲ್ಲದವರಾ? ಐಜಿ ದೊಡ್ಡ ವ್ಯಕ್ತಿ ಎಂದು ನಾನು ಒಪ್ಪಲು ಆಗುವುದಿಲ್ಲ. ದುಡ್ಡು ತೆಗೆದುಕೊಂಡು ಪೋಸ್ಟಿಂಗ್ ಹಾಕಿರಬಹುದು.
ನನ್ನ ಅನುಮತಿ ಇಲ್ಲದೇ ನನ್ನ ಕ್ಷೇತ್ರಕ್ಕೆ ಬಂದಿದ್ದಾನೆ, ನನಗೆ ಚುನಾವಣೆ ವರ್ಷ ಹಾಗಾಗಿ ಬೇಡ ಎಂದಿದ್ದೆ. ಎಂದೆಲ್ಲಾ ಲಂಗು ಲಗಾಮು ಇಲ್ಲದೆ ಸಮರ್ಥನೆಗೆ ಇಳಿದಿದ್ದು ನೋಡಿದರೆ ಶಾಸಕರಿಗೆ ಮಾಹಿತಿ ಕೊರತೆಯಿಂದ ಹೀಗೆಲ್ಲಾ ಮಾತನಾಡುತ್ತಿದ್ದಾರಾ ಅಥವಾ ತಾನು ಪಾಳೆಗಾರಿಕೆ ಆಡಳಿತ ನಡೆಸುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಇದ್ದಾರ ಎಂಬ ಅನುಮಾನ ಮೂಡುತ್ತಿದೆ. ಇದಲ್ಲದೇ ಮಾಧ್ಯಮದವರಿಗೆ ನನ್ನನ್ನು ಶಾಸಕ ಎಂದು ಏಕೆ ಕರೆಯುತ್ತೀರಾ ಶಾಸಕರು ಎಂದು ಕರೆಯಬೇಕು ಎಂದು ಮಾಧ್ಯಮದವರಿಗೆ ಕನ್ನಡ ವ್ಯಾಕರಣ ಪಾಠ ಮಾಡಿದ್ದಾರೆ
ತಮ್ಮ ತೋಟಕ್ಕೆ ಕೂಲಿಯವರನ್ನು ತಮಗೆ ಬೇಕಾದವರನ್ನು ಆಯ್ಕೆ ಮಾಡಿ ನೇಮಿಸಿಕೊಳ್ಳಬಹುದು, ಪೋಲೀಸ್ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು, ಅಥವಾ ಇನ್ನಾವುದೇ ಸರ್ಕಾರಿ ಇಲಾಖೆಯ ಅಧಿಕಾರಿಗಳಲ್ಲಿ ಯಾರು ನೇಮಕ ಆಗಬೇಕು ಎಂಬ ಸಂಪೂರ್ಣ ತೀರ್ಮಾನ ಅಲ್ಲಿನ ಶಾಸಕರು ತೆಗೆದುಕೊಳ್ಳುವುದಾದರೆ ಸಂವಿಧಾನ, ನೀತಿ ನಿಯಮಗಳ ಅವಶ್ಯಕತೆ ಏನಿದೆ. ಎಲ್ಲಾ ಅಧಿಕಾರಿಗಳು ತಮ್ಮ ಹಿಡಿತದಲ್ಲಿ ಇರಬೇಕು ಎಂಬುದು ಅದೇನು ಸರ್ವಾಧಿಕಾರಿ ಆಡಳಿತದ ಮಾನಸಿಕತೆಯೇ. ಜನಸಾಮಾನ್ಯರಿಗೆ ನ್ಯಾಯ ಒದಗಿಸಲು ಹೇಗೆ ಸಾಧ್ಯ.
ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಜಾಂನ್ ನಿಂದ ಪ್ರೇರಣೆಗೊಂಡು ಶಾಸಕರು ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದು ಜನರು ತಮಾಷೆ ಮಾಡುತ್ತಿದ್ದಾರೆ. ಶಾಸಕರು ಇನ್ನಾದರೂ ತಾವು ಆಯ್ಕೆಗೊಂಡಿರುವ ಸಾಂವಿಧಾನಿಕ ಸ್ಥಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು.





0 Comments