ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯ ತಾಲೂಕು ಕಛೇರಿಯಲ್ಲಿ ನಡೆದ ದೊಡ್ಡಮಟ್ಟದ ಹಕ್ಕುಪತ್ರ ಹಗರಣದಲ್ಲಿ ಈ ಹಿಂದೆ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಂಬುಜಾ ಕೂಡ ಆರೋಪಿಯಾಗಿದ್ದ ಹಿನ್ನೆಲೆ ಅಧಿಕಾರಿಗಳು ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. 

ಇದನ್ನೂ ಓದಿ : ಚಿಕ್ಕಮಗಳೂರು : ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕಾರಿನ ನಡುವೆ ರಸ್ತೆ ಅಪಘಾತ

ಅವರ ಬಂಧನದ ನಂತರ ಚಿಕ್ಕಮಗಳೂರಿನ ಚುನಾವಣಾ ತಹಸೀಲ್ದಾರ್ ಎಸ್. ಎ ಪ್ರಸಾದ್ ಅವರು ಶೃಂಗೇರಿ ತಹಸೀಲ್ದಾರ್ ಆಗಿ ತಾತ್ಕಾಲಿಕವಾಗಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದ್ದು ಬೆಂಗಳೂರಿನ ಕೆ.ಯು.ಎಫ್.ಡಿ.ಐ.ಸಿ ಗ್ರೇಡ್ 2 ತಹಸೀಲ್ದಾರ್ ಡಾ.ಎಸ್.ವಿ ಲೋಕೇಶ್ ಅವರನ್ನು ಶೃಂಗೇರಿಯ ತಹಸಿಲ್ದಾರ್ ಆಗಿ ನೇಮಕಗೊಳಿಸಿ ಆದೇಶಿಸಿದೆ. 

ತಾಲೂಕಿನ ಜನತೆ ಕಳೆದ ಅನೇಕ ಸಮಯಗಳಿಂದ ತಾಲೂಕು ಕಛೇರಿಯಲ್ಲಿ ಎದುರಿಸಿದ ಕಷ್ಟಗಳು ಹೊಸ ತಹಸೀಲ್ದಾರ್ ನೇಮಕದಿಂದ ಅಂತ್ಯ ಕಾಣುವ ನಿರೀಕ್ಷೆಯಲ್ಲಿ ಜನರಿದ್ದಾರೆ. ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿ ಹಾಗೂ ಅವಶ್ಯಕವಾಗಿ ಬೇಕಾಗಿರುವ 110 ಕೆವಿ ವಿದ್ಯುತ್ ಘಟಕದ ನಿರ್ಮಾಣಕ್ಕೆ ಜಾಗ ಮಂಜೂರಾತಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಮಂಜೂರಾತಿ ಸೇರಿದಂತೆ ಅನೇಕ ಸಮಸ್ಯೆಗಳ ಪರಿಹಾರ ನೂತನ ತಹಸೀಲ್ದಾರ್ ರಿಂದ ಆಗಬೇಕಾದ ನಿರೀಕ್ಷೆಯಲ್ಲಿ ತಾಲೂಕಿನ ಜನ ಕಾಯುತ್ತಿದ್ದಾರೆ.