ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗದ ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದ್ದು ಕಾಂಗ್ರೆಸ್ ನ ಕಿಮ್ಮನೆ ರತ್ನಾಕರ್ ಬಣದ ಕಾರ್ಯಕರ್ತರು ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಆರಂಭವಾಗಿದ್ದ ಪಾದಯಾತ್ರೆಯು ಶಿವಮೊಗ್ಗ ತಲುಪಿ ನಿನ್ನೆ ಸಮಾವೇಶ ಆರಂಭವಾಗಿತ್ತು. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಅನೇಕ ಕಡೆಗಳಿಂದ ಕಾರ್ಯಕರ್ತರು ಆಗಮಿಸಿದ್ದರು ಅಂತೆಯೇ ಕಿಮ್ಮನೆ ರತ್ನಾಕರ್ ಅವರ ಬೆಂಬಲಿಗರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು ಆದರೆ ವೇದಿಕೆಗೆ ಹಾಕಿದ್ದ ಬ್ಯಾನರ್ ಗಳಲ್ಲಿ ಕಿಮ್ಮನೆ ಅವರ ಫೋಟೋಗಳು ಕಾಣದೇ ಒಂದೆಡೆ ಬೆಂಬಲಿಗರು ಅಸಮಾಧಾನಕ್ಕೀಡಾಗಿದ್ದರೆ ಇನ್ನೊಂದೆಡೆ ಸಭಾ ಕಾರ್ಯಕ್ರಮದಲ್ಲಿ ಕೊನೆಯ ಸಾಲಿನಲ್ಲಿ ಅವರಿಗೆ ಮಾತನಾಡಲು ಅವಕಾಶ ನೀಡಿ ಹಿರಿಯ ಮುಖಂಡನಿಗೆ ಅಗೌರವ ತೋರಲಾಗಿದೆ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅನೇಕ ಸಮಯಗಳಿಂದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಂಜುನಾಥ್ ಗೌಡ ಹಾಗೂ ಕಿಮ್ಮನೆ ರತ್ನಾಕರ್ ನಡುವೆ ಹಾಗೂ ಬೆಂಬಲಿಗರ ಮಧ್ಯೆ ಉಂಟಾಗಿದ್ದ ಬಿರುಕು ಜಿಲ್ಲಾಮಟ್ಟದಲ್ಲೂ ಎದ್ದು ಕಾಣುತ್ತಿರುವುದು ಕಾರ್ಯಕರ್ತರಲ್ಲಿ ಆಕ್ರೋಶ ಉಂಟಾಗುವಂತೆ ಮಾಡಿದೆ.
ನಡೆದ ಸಭಾಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷದ ನಾಯಕರಾದ ಹರಿಪ್ರಸಾದ್, ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್, ಸುಂದರೇಶ್ ಮಂಜುನಾಥ್ ಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಖ್ಯ ಸ್ಥಂಭವಾಗಿದ್ದ ಕಿಮ್ಮನೆ ರತ್ನಾಕರ್ ಅವರಿಗೆ ಎಲ್ಲರ ಭಾಷಣದ ನಂತರ ಜನರು ತೆರಳಿದ ಮೇಲೆ ಅವಕಾಶ ಕಲ್ಪಿಸಲಾಗಿತ್ತು, ಇದರಿಂದಾಗಿ ಆಕ್ರೋಶಕ್ಕೀಡಾಗಿದ್ದ ಕಿಮ್ಮನೆ ಅವರು ಕೇವಲ ವಂದನೆಗಳನ್ನು ತಿಳಿಸಿ ವೇದಿಕೆಯಿಂದ ಕೆಳಗಿಳಿದಿದ್ದರು. ಇದನ್ನು ಕಂಡು ಸಿಟ್ಟಿಗೆದ್ದ ಕಿಮ್ಮನೆ ಬೆಂಬಲಿಗರು ಶಿವಮೊಗ್ಗದ ಕಾಂಗ್ರೆಸ್ ಕಛೇರಿ ಎದುರು ಕಿಮ್ಮನೆ ಪರವಾದ ಘೋಷಣೆಗಳನ್ನು ಕೂಗುತ್ತ ಪ್ರತಿಭಟಿಸಿ ಒಳಗಿದ್ದ ಆಕ್ರೋಶವನ್ನು ಹೊರಹಾಕಿದರು. ಈ ಸಂದರ್ಭದಲ್ಲಿ ಎರಡು ಬಣದವರ ನಡುವೆ ಮಾತಿನ ಚಕಮಕಿ ನಡೆಯಿತು ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಒಟ್ಟಾರೆಯಾಗಿ ಇಷ್ಟು ದಿನಗಳ ಕಾಲ ಕೇವಲ ವಿಧಾನಸಭಾ ಕ್ಷೇತ್ರದಲ್ಲಿದ್ದ ಅಸಮಾಧಾನ ಇದೀಗ ಜಿಲ್ಲಾಮಟ್ಟಕ್ಕೆ ಬಂದಿರುವುದು ಎರಡು ಬಣದ ಬೆಂಬಲಿಗರಲ್ಲಿ ಹೆಚ್ಚಿನ ಚರ್ಚೆ ಉಂಟಾಗುವಂತೆ ಮಾಡಿದೆ. ಚುನಾವಣೆಯ ಸಂದರ್ಭದಲ್ಲಿ ಏನಾಗಲಿದೆಯೋ ಎಂದು ಕಾದುನೋಡಬೇಕಿದೆ.




0 Comments