ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಕಳೆದ ಭಾನುವಾರ ಚಿಕ್ಕಮಗಳೂರಿನ ಕಟ್ಟಡವೊಂದರ ಮೇಲ್ಭಾಗದಲ್ಲಿ ಪ್ರಾರ್ಥನೆಯ ನೆಪದಲ್ಲಿ ಅಕ್ರಮವಾಗಿ ಮತಾಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಆ ಸ್ಥಳಕ್ಕೆ ತೆರಳಿ ಭಜರಂಗದಳದ ಕಾರ್ಯಕರ್ತರು ತೆರಳಿ ಪ್ರಶ್ನಿಸಿದ್ದರು. ಘಟನಾ ಸಂಬಂಧ ಪ್ರಾರ್ಥನೆಗೆಂದು ತೆರಳಿದ ವ್ಯಕ್ತಿ ಹಾಗೂ ಫಾಸ್ಟರ್ ಎರಡೂ ಕಡೆಯವರು ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. 

ಇದನ್ನೂ ಓದಿ : ಗಬ್ಬಾನೆ ಭೂತರಾಯನ ಸನ್ನಿಧಿಯಲ್ಲಿ ಹರಕೆ ಹೊತ್ತ ಹಿಂದೂ ಬ್ರಿಗೇಡ್ ಪದಾಧಿಕಾರಿಗಳು

ಚಿಕ್ಕಮಗಳೂರು ನಗರದ ಬಾರ್ ಲೈನ್ ರಸ್ತೆಯಲ್ಲಿರುವ ಕಠಾರಿ ಕಂಫರ್ಟ್ ಮುಂಭಾಗದಲ್ಲಿ ತೆರಳುತ್ತಿರುವಾಗ ಪರಿಚಯಸ್ಥನಾದ ವಿಶ್ವ ಎಂಬಾತ ಕಟ್ಟಡದ ಮೇಲ್ಭಾಗದಲ್ಲಿ ಪ್ರಾರ್ಥನೆ ನಡೆಯುತ್ತಿದೆ, ಒಂದು ವೇಳೆ ನೀನು ಬಂದಲ್ಲಿ ನಿನ್ನ ಕಷ್ಟಗಳು ಪರಿಹಾರವಾಗುತ್ತದೆ ಎಂದು ತಿಳಿಸಿ ತನ್ನನ್ನು ಪ್ರಾರ್ಥನೆಗೆ ಆಹ್ವಾನಿಸಿ ಅಲ್ಲಿಗೆ ತೆರಳಿ ಆ ಪ್ರಾರ್ಥನೆಯಲ್ಲಿ ಭಾಗಿಯದಾಗ ಹಿಂದೂ ದೇವರುಗಳ ಮೇಲೆ ಅವಹೇಳನ ನಡೆಸಲಾಗಿದೆ ಎಂದು ಆರೋಪಿಸಿ ಪ್ರಾರ್ಥನೆಗೆ ತೆರಳಿದ ನವೀನ್ ಕುಮಾರ್ ಎಂಬುವವರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದಲ್ಲದೇ ಎಲ್ಲಾರೂ ಕ್ರೈಸ್ತರಾಗಿ ಏಸುವಿನ ಕೃಪೆಗೆ ಪಾತ್ರರಾಗಬೇಕು, ನಿಮ್ಮ ದೇವರಾದ ಗಣಪತಿ, ಮಾರಿ, ಈಶ್ವರ ಈ ದೇವರಿಂದ ಮುಕ್ತಿ ದೊರೆಯುವುದಿಲ್ಲ ಎಂಬೆಲ್ಲಾ ಮಾತುಗಳನ್ನಾಡಿದಾಗ ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ನನ್ನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಹಾಗೂ ಈ ಕೃತ್ಯದಲ್ಲಿ ಭಾಗಿಯಾದ ಪಾಸ್ಟರ್ ರಾಮಕೃಷ್ಣ, ವಿಶ್ವ ಮತ್ತು ಅಲ್ಲಿದ್ದ ಇತರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. 

ಇದಕ್ಕೆ ಪ್ರತಿಯಾಗಿ ದೂರು ದಾಖಲು ಮಾಡಿರುವ ಪಾಸ್ಟರ್ ರಾಮಕೃಷ್ಣ 25 ವರ್ಷಗಳ ಹಿಂದೆ ತಮ್ಮ ಕುಟುಂಬವರ್ಗದವರೊಂದಿಗೆ ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರಗೊಂಡಿದ್ದೆವು, ಕಳೆದ 15 ವರ್ಷಗಳಿಂದ ನಾನು ಸಭಾಪಾಲಕನಾಗಿ ಧರ್ಮ ಬೋಧನೆ ನಡೆಸುತ್ತಾ ಬಂದಿದ್ದೇನೆ, ಭಾನುವಾರ ಬೆಳಗ್ಗಿನ ಸಮಯದಲ್ಲಿ ವಿಶೇಷ ಪ್ರಾರ್ಥನೆ ನಡೆಸುತ್ತಿದ್ದ ಸಂದರ್ಭದಲ್ಲಿ ಶಾಮ್ ವಿ.ಗೌಡ,  ಸುನೀಲ್, ನವೀನ್, ಪಾರ್ಥಿಬನ್, ಜಗದೀಶ್ ಸೇರಿದಂತೆ ಇತರರು ಏಕಾಏಕಿಯಾಗಿ ಬಂದು ನಿಮಗೆ ನಾಚಿಕೆಯಾಗುವುದಿಲ್ಲವಾ, ನೀವು ಇತರರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿದ್ದೀರ ಎಂದು ಹೇಳಿ ನಿಮಗೆ ಮತಾಂತರ ಮಾಡಲು ಬಿಡುವುದಿಲ್ಲ ಎಂದು ಹೇಳುತ್ತಾ ವೀಡಿಯೋ ಮಾಡಿಕೊಂಡು ನಮ್ಮ ಧಾರ್ಮಿಕ ಭಾವನೆಗಳನ್ನು ಹಾಗೂ ನಮ್ಮ ಆಚರಣೆಗಳಿಗೆ ಅವಮಾನ ಮಾಡಿ ನಮ್ಮ ಭಾವನೆಗೆ ಧಕ್ಕೆ ಉಂಟುಮಾಡಿದ್ದಾರೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಹಲ್ಲೆ ಮಾಡಿದ್ದಾರೆ. ಈ ಕೃತ್ಯ ಎಸಗಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಾಸ್ಟರ್ ರಾಮಕೃಷ್ಣ ದೂರು ದಾಖಲಿಸಿದ್ದಾರೆ. 

ಘಟನಾ ಸಂಬಂಧ ದೂರು ಹಾಗೂ ಪ್ರತಿದೂರುಗಳು ದಾಖಲಾಗಿದ್ದು ಪೊಲೀಸರು ಇಬ್ಬರ ದೂರನ್ನು ತೆಗೆದುಕೊಂಡು ಘಟನಾ ಸಂಬಂಧ ಪರಿಶೀಲನೆ ನಡೆಸುತ್ತಿದ್ದಾರೆ.

ಏರ್ಪೋರ್ಟ್ ನಿರ್ಮಾಣದ ವೇಳೆ ಅವಘಡ ; ರೋಡ್ ರೋಲರ್ ಹರಿದು ಕಾರ್ಮಿಕನ ದುರ್ಮರಣ

ಶಿವಮೊಗ್ಗ : ರೋಡ್ ರೋಲರ್ ಚಾಲಕನ ನಿಯಂತ್ರಣ ತಪ್ಪಿ ಕಾರ್ಮಿಕನ ಮೇಲೆ ಹರಿದ ಪರಿಣಾಮ ಕಾರ್ಮಿಕ ಸಾವನ್ನಪ್ಪಿರುವ ದುರ್ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 

ಶಿವಮೊಗ್ಗದ ಸೋಗಾನೆಯಲ್ಲಿ ನಡೆಯುತ್ತಿರುವ ವಿಮಾನ ನಿಲ್ದಾಣದ ಕೆಲಸದಲ್ಲಿ ತೊಡಗಿಕೊಂಡಿದ್ದ ಕಾರ್ಮಿಕ ಕಾಮಗಾರಿ ನಡೆಸುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.  

ಮೃತ ವ್ಯಕ್ತಿಯನ್ನು ಹಾವೇರಿ ಜಿಲ್ಲೆಯ ಮಲ್ಲಿಕಾರ್ಜುನ್​​ ಹರಿಜನ ಎಂದು ಗುರುತಿಸಲಾಗಿದೆ. ನೆಲ ಸಮತಟ್ಟು ಮಾಡುವ ಸಣ್ಣ ರೋಲರ್ ಕಾರ್ಮಿಕನ ಮೈಮೇಲೆ ಹರಿದು ದುರ್ಘಟನೆ ಸಂಭವಿಸಿದೆ ಹಾಗೂ ರೋಡ್ ರೋಲರ್ ಚಾಲನೆ ಮಾಡುತ್ತಿದ್ದ ಬಿಹಾರ ಮೂಲದ ಚಾಲಕನ ನಿರ್ಲಕ್ಷ್ಯವೇ ಈ ಘಟನೆಗೆ ಮುಖ್ಯ ಕಾರಣ ಎನ್ನಲಾಗಿದೆ. 

ಘಟನಾ ಸಂಬಂಧ ಮೃತನ ಪೋಷಕರು ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಪೊಲೀಸರು ಈ ಸಂಬಂಧ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.