ಕಡೂರು : (ನ್ಯೂಸ್ ಮಲ್ನಾಡ್ ವರದಿ) ರೈಲಿನ ಇಂಜಿನ್ ನ್ನು ಪರೀಕ್ಷೆ ನಡೆಸುತ್ತಿದ್ದ ಸಂದರ್ಭದಲ್ಲಿ ವೃದ್ಧೆಯೋರ್ವರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವೃದ್ದೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಳೆದ ಕೆಲ ತಿಂಗಳುಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿರುವ ಕೋಟೆ ಶ್ರೀ ಪತಾಳಾಂಜನೇಯ ಸ್ವಾಮಿ ದೇವಾಲಯದಲ್ಲಿರುವ ಆಂಜನೇಯನಿಗೆ ಬೆಳ್ಳಿಯ ಮುಖವಾಡ ಮಾಡಲೆಂದು ಭಿಕ್ಷಾಟನೆ ನಡೆಸಿ ಇಪ್ಪತ್ತು ಸಾವಿರ ರೂಪಾಯಿ ಹಣವನ್ನು ನೀಡಿದ್ದ 85 ವರ್ಷ ಪ್ರಾಯದ ವೃದ್ದೆ ಕೆಂಪಜ್ಜಿ ರೈಲಿನ ಇಂಜಿನ್ ಗೆ ಸಿಲುಕಿ ಸಾವನ್ನಪ್ಪಿರುವ ಮೃತ ದುರ್ದೈವಿ.
ಮೃತ ಕೆಂಪಜ್ಜಿಯು ಪ್ರತಿದಿನ ಬೆಳಗ್ಗೆ ದೇವಾಲಯದಲ್ಲಿ ಪ್ರಸಾದ ಸೇವಿಸಿ ಬೇರೆಡೆಗೆ ತೆರಳಿ ರೈಲ್ವೇ ಗೇಟ್ ನ ಮೂಲಕ ತಮ್ಮ ಸ್ಥಳಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ, ಹಿಮ್ಮುಖವಾಗಿ ರೈಲಿನ ಇಂಜಿನ್ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಅಜ್ಜಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಅಜ್ಜಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.
ಅಜ್ಜಿಯ ಬಳಿ ದೊರೆತ ಲಕ್ಷ ಲಕ್ಷ ಹಣ :
ಮೃತ ಕೆಂಪಜ್ಜಿಯು ಭಿಕ್ಷಾಟನೆ ನಡೆಸಿ ಕೂಡಿಟ್ಟಿದ್ದ 146,520 ರೂಪಾಯಿ ಹಣ ಆಕೆಯು ವಾಸಮಾಡುತ್ತಿದ್ದ ಸ್ಥಳದಲ್ಲಿ ದೊರೆತಿದೆ. 10, 20, 50, 100, 200, 500, 2000 ರೂಪಾಯಿ ನೋಟುಗಳು ಆಕೆಯು ವಾಸಮಾಡುತ್ತಿದ್ದ ಮನೆಯಲ್ಲಿ ಲಭ್ಯವಾಗಿದ್ದು , ಡಿಸಿಸಿ ಬ್ಯಾಂಕ್ ನಲ್ಲಿರಿಸಿದ್ದ 70 ಸಾವಿರ ರೂಪಾಯಿ ಮೌಲ್ಯದ ಬಾಂಡ್ ಕೂಡ ದೊರೆತಿದೆ.
ಈ ಹಣವನ್ನು ತಹಸೀಲ್ದಾರ್ ಅವರಿಗೆ ಪೊಲೀಸರ ಮೂಲಕ ಕೊಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೃತ ಅಜ್ಜಿಯ ಅಂತ್ಯಕ್ರಿಯೆಯನ್ನು ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳೇ ನಡೆಸಲಿದ್ದಾರೆ, ಅಜ್ಜಿಯ ಮರಣೋತ್ತರ ಪರೀಕ್ಷೆಯ ನಂತರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.



0 Comments