ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರಿನ ಶೃಂಗೇರಿ ಶಾರದಾ ಪೀಠಕ್ಕೆ ಇಂದು ಸಚಿವ ವಿ.ಸುನೀಲ್ ಕುಮಾರ್ ಭೇಟಿ ನೀಡಿ ಶಾರದಾಂಬೆ ಹಾಗೂ ಜಗದ್ಗುರುಗಳ ಆಶೀರ್ವಾದವನ್ನು ಪಡೆದರು.


ಈ ಸಂದರ್ಭದಲ್ಲಿ ನ್ಯೂಸ್ ಮಲ್ನಾಡ್ ನೊಂದಿಗೆ ಮಾತನಾಡಿದ ಅವರು ಮಲೆನಾಡು ಭಾಗದ ಜನರಿಗೆ ಪ್ರಮುಖ ಸಮಸ್ಯೆಯಾಗಿ ವಿದ್ಯುತ್ ಕೊರತೆಯು ಕಾಡುತ್ತಿದೆ, ಕೃಷಿ ಸಂಬಂಧಿತ ಮೋಟಾರ್ ಹಾಗೂ ಪಂಪ್ಸೆಟ್ ಗಳ ಚಾಲನೆಗೆ ಅತ್ಯಾವಶ್ಯಕವಾಗಿರುವುದು ವಿದ್ಯುತ್. ಈ ನಿಟ್ಟಿನಲ್ಲಿ ಅಗತ್ಯವಾಗಿ ದೊರೆಯಬೇಕಿರುವ 110 ಕೆ.ವಿ ವಿದ್ಯುತ್ ಸ್ಥಾವರಕ್ಕೆ ಈಗಾಗಲೇ ಅನುಮೋದನೆ ದೊರೆತಿದ್ದು, ಮೂರು ತಿಂಗಳ ಒಳಗಾಗಿ ತಲೆದೋರಿರುವ ಜಾಗದ ಸಮಸ್ಯೆಯನ್ನು ಬಗೆಹರಿಸಿ ತ್ವರಿತಗತಿಯಲ್ಲಿ ಈ ಕಾರ್ಯ ನಡೆಸಲಾಗುವುದು ಎಂದರು. 

ದತ್ತಪೀಠ ಹೋರಾಟದ ವಿಚಾರದಲ್ಲಿ ಅಂದಿನಿಂದ ಇಂದಿನವರೆಗೂ ನಾನೊಬ್ಬ ಹೋರಾಟಗಾರ, ಹೋರಾಟದಿಂದ ಹಿಂದೆ ಸರಿಯುವ ಮಾತಿಲ್ಲ. ಈ ಕುರಿತಾಗಿ ಬೇಕಿರುವ ಅಗತ್ಯ ಕ್ರಮಗಳನ್ನು ಕಾನೂನು ತಜ್ಞರ ಸಲಹೆಯಂತೆ ಕೈಗೊಂಡು ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಹಾಗೂ ನಮ್ಮ ಪರಂಪರೆಯಂತೆ ಪೂಜೆ-ಪುನಸ್ಕಾರಗಳು ನಡೆಯುವ ರೀತಿಯಲ್ಲಿ ಮಾಡುತ್ತೇವೆ - ವಿ. ಸುನೀಲ್ ಕುಮಾರ್, ಇಂಧನ ಸಚಿವರು, ಕರ್ನಾಟಕ ಸರ್ಕಾರ
ಚಿಕ್ಕಮಗಳೂರಿನ ದತ್ತಾತ್ರೇಯ ಪೀಠದ ಹೋರಾಟದ ಕುರಿತು ಮಾತನಾಡಿದ, ಅವರು ಸರ್ಕಾರದ ಮಟ್ಟದಲ್ಲಿ ಕಾನೂನಿನ ಅನ್ವಯ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಬಿಜೆಪಿ ಸರ್ಕಾರ ಕೈಗೊಂಡಿದೆ. ದತ್ತಪೀಠ ಹಿಂದೂಗಳದ್ದಾಗಬೇಕು ಎಂದು ಅನೇಕ ವರ್ಷಗಳಿಂದ ನಿರಂತರವಾಗಿ ಹೋರಾಟಗಳು ನಡೆದುಕೊಂಡು ಬಂದಿದೆ. ಶೀಘ್ರವೇ ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಹಾಗೂ ಪೂಜೆ ನಡೆಯಲಿದೆ ಎಂದರು.

ಈ ಬಳಿಕ ಮಳೆ ದೇವರು ಎಂದೇ ಖ್ಯಾತಿ ಪಡೆದಿರುವ ಶೃಂಗೇರಿ ತಾಲೂಕಿನ ಕಿಗ್ಗಾ ಋಷ್ಯಶೃಂಗೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್, ಬಿಜೆಪಿ ತಾಲೂಕು ಅಧ್ಯಕ್ಷ ತಲಗಾರು ಉಮೇಶ್, ಟಿ.ಕೆ ಪರಾಶರ, ನೂತನ್ ಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಹರೀಶ್ ವಿ ಶೆಟ್ಟಿ, ಮುಖಂಡರಾದ ವೇಣುಗೋಪಾಲ್, ನಾಗರಾಜ್, ಅರುಣ ಆರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



ಕೊಪ್ಪದಲ್ಲಿ ನೂತನ ಮೆಸ್ಕಾಂ ಕಛೇರಿ ಉದ್ಘಾಟನೆ

ಕೊಪ್ಪದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮೆಸ್ಕಾಂ ವಿಭಾಗೀಯ ಕಚೇರಿ ಕಟ್ಟಡ ಹಾಗೂ ವಿಭಾಗೀಯ ಉಗ್ರಾಣ ಕಟ್ಟಡದ ಉದ್ಘಾಟನೆ ನಡೆಸಿದರು.

ಮಲೆನಾಡು ಭಾಗದ ಮನೆಗಳಿಗೆ ಅರಣ್ಯ ಇಲಾಖೆಯ ಕಾನೂನುಗಳಿಂದ ವಿದ್ಯುತ್ ಸಂಪರ್ಕ ನೀಡಲು ತೊಡಕಾಗಿದ್ದಲ್ಲಿ ಅಂತಹ ಮನೆಗಳಿಗೆ ಸೋಲಾರ್ ಅಳವಡಿಕೆಯ ಮೂಲಕ ವಿದ್ಯುತ್ ಸಂಪರ್ಕ ನೀಡುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಈ ಭಾಗದ ಅನೇಕ ಮನೆಗಳಿಗೆ ವಿದ್ಯುತ್ ನೀಡುವಲ್ಲಿ ಅಡೆತಡೆಗಳು ಎದುರಾಗಿವೆ. ಸೆಕ್ಷನ್ 4, ಡೀಮ್ಡ್ ಫಾರೆಸ್ಟ್, ಮೀಸಲು ಅರಣ್ಯ ಸೇರಿದಂತೆ ಅನೇಕ ಸಮಸ್ಯೆಗಳು ಈ ಭಾಗದಲ್ಲಿ ಎದುರಾಗಿವೆ ಈ ಕಾರಣದಿಂದಾಗಿ ವಿದ್ಯುತ್ ಸೌಲಭ್ಯ ನೀಡಲು ಸಾಧ್ಯವಾಗದ ಮನೆಗಳಿಗೆ ಪರ್ಯಾಯವಾಗಿ ಸೋಲಾರ್ ದೀಪಗಳನ್ನು ನೀಡುವ ಭರವಸೆ ನೀಡಿದರು.