ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಚಾರ್ಮಾಡಿ ಘಾಟ್ ನಲ್ಲಿ ಅಪಘಾತಕ್ಕೀಡಾಗಿ ನಿಂತಿದ್ದ ಕಾರಿನಲ್ಲಿದ್ದ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿ ಅವರ ವಸ್ತುಗಳನ್ನು ದೋಚಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

03 ಮೇ 2022 ರಂದು ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ಸಮೀಪದಲ್ಲಿ  ಬೆಂಗಳೂರಿನ ದೇವನಹಳ್ಳಿ ಮೂಲದ ಇಬ್ಬರು ಸ್ನೇಹಿತರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅವರ ಕಾರು ನಿಯಂತ್ರಣ ತಪ್ಪಿ ಚಾರ್ಮಾಡಿ ಘಾಟ್ ನ ತಿರುವಿನಲ್ಲಿ ಅಪಘಾತಕ್ಕೀಡಾಗಿತ್ತು, ನೆಟ್ವರ್ಕ್ ಸಮಸ್ಯೆ ಇದ್ದುದರಿಂದ ಹಾಗೂ ಗಾಯಗೊಂಡಿದ್ದರಿಂದ ಏನೂ ಮಾಡಲಾರದ ಪರಿಸ್ಥಿತಿಯಲ್ಲಿದ್ದ ಸ್ನೇಹಿತರು ಕಾರಿನಲ್ಲಿಯೇ ಇದ್ದರು. ಈ ಸಂದರ್ಭದಲ್ಲಿ ಆ ಸ್ಥಳಕ್ಕೆ ಆಗಮಿಸಿದ ಮೂವರು ಯುವಕರು ಬೆಂಗಳೂರು ಮೂಲದ ಇಬ್ಬರ ಮೇಲೆ ಹಲ್ಲೆ ನಡೆಸಿ ಅವರ ಬಳಿ ಇದ್ದ 600 ರೂಪಾಯಿ ಹಣ, ಒನ್ ಪ್ಲಸ್ ಮೊಬೈಲ್ ಫೋನ್, ಹಾಗೂ ಕೈ ಬೆರಳಿನಲ್ಲಿದ್ದ ಚಿನ್ನದ ಉಂಗುರವನ್ನು ದೋಚಿದ್ದರು.

ಪೊಲೀಸರು ಕಾರ್ಯಾಚರಣೆಯ ಮೂಲಕ ಆರೋಪಿಗಳನ್ನು ಸೆರೆ ಹಿಡಿದಿರುವುದು ಶ್ಲಾಘನೀಯ. ಈ ಕೃತ್ಯ ಎಸಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಚಾರ್ಮಾಡಿ ಮಾರ್ಗದಲ್ಲಿ ಪೊಲೀಸ್ ನೈಟ್ ಬೀಟ್ ಹೆಚ್ಚಿಸಬೇಕು ಮತ್ತು ರಾತ್ರಿಯ ವೇಳೆಯಲ್ಲಿ ವಾಹನ ಸಂಚಾರ ಮಾಡುವವರು ಹೆಚ್ಚಿನ ಜಾಗರೂಕತೆ ವಹಿಸಿ ಪ್ರಯಾಣಿಸಬೇಕು - ಸಂಜಯ್ ಕೊಟ್ಟಿಗೆಹಾರ

ಈ ಕುರಿತು ಯಾರಿಗಾದರೂ ತಿಳಿಸಿದಲ್ಲಿ ಸುಮ್ಮನೆ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿ ಅಲ್ಲಿಂದ ತೆರಳಿದ್ದರು ಎಂಬುದಾಗಿ ಹಲ್ಲೆಗೀಡಾದ ಬೆಂಗಳೂರು ಮೂಲದ  ಪ್ರಯಾಣಿಕರು ಬಣಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ದೂರು ದಾಖಲು ಮಾಡಿಕೊಂಡಿದ್ದ ಬಣಕಲ್ ಠಾಣೆಯ ಪೊಲೀಸರು ಕಳ್ಳರ ಪತ್ತೆಗಾಗಿ ತನಿಖೆ ಆರಂಭಿಸಿದ್ದರು. ಹಾಗೂ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಮೊಹಮ್ಮದ್ ರಮೀಜ್, ಪರ್ಣೆ ಗ್ರಾಮದ ಮೊಹಮ್ಮದ್ ರಜೀಮ್, ಕೆದಿಲ ಗ್ರಾಮದ ಸವಾದ್ ಎಂದು ಗುರುತಿಸಲಾಗಿದೆ. 

ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು ಸಂಪೂರ್ಣ ತನಿಖೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.