ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಇನ್ನೇನು ಒಂದು ವರ್ಷಗಳಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಯ ತಯಾರಿಯನ್ನು ಎಲ್ಲಾ ಪಕ್ಷಗಳು ಕೂಡ ಬಹಳ ಉತ್ಸುಕತೆಯಿಂದ ನಡೆಸುತ್ತಿದೆ. ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲೂ ಕೂಡ ಎಲ್ಲಾ ಪಕ್ಷಗಳು ತಯಾರಿ ಆರಂಭಿಸಿದ್ದು ಗ್ರಾಮ ಪಂಚಾಯತ್ ಅಧ್ಯಕ್ಷರೋರ್ವರು ಬಿಜೆಪಿ ತ್ಯಜಿಸಿ ಜೆಡಿಎಸ್ ಪಕ್ಷಕ್ಕೆ ಇಂದು ಸೇರ್ಪಡೆಗೊಂಡಿದ್ದಾರೆ.

ಇದನ್ನೂ ಓದಿ : ಗಬ್ಬಾನೆ ಭೂತರಾಯನ ಸನ್ನಿಧಿಯಲ್ಲಿ ಹರಕೆ ಹೊತ್ತ ಹಿಂದೂ ಬ್ರಿಗೇಡ್ ಪದಾಧಿಕಾರಿಗಳು

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಂತೆ ಕಾಣಿಸುತ್ತಿದ್ದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಸುಧಾಕರ್ ಎಸ್ ಶೆಟ್ಟಿ ನೇತೃತ್ವದಲ್ಲಿ ಕೊಪ್ಪ ತಾಲೂಕಿನ ನರಸೀಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪವಿತ್ರ ಕಾಡಪ್ಪ, ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯ,  ಭಾರತೀಯ ಜನತಾ ಪಾರ್ಟಿಯ ಮುಖಂಡರಾದ ವಾಸು ಇಂದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.  

ಪಕ್ಷದಮೇಲಿದ್ದ ಅಸಮಾಧಾನದ ಕಾರಣ ಜೆಡಿಎಸ್ ಸೇರ್ಪಡೆ ಗೊಂಡಿದ್ದೇನೆ, ಸುಧಾಕರ್ ಶೆಟ್ಟಿ ಅವರ ಉತ್ತಮ ಹಾಗೂ ಜನಸ್ನೇಹಿ ನಡತೆ ಮತ್ತು ಎಲ್ಲರೊಂದಿಗೆ ಬೆರೆಯುವ ನಿಷ್ಕಲ್ಮಶ ಗುಣವನ್ನು ಬಹಳ ಹತ್ತಿರದಿಂದ ಕಂಡು ಜೆಡಿಎಸ್ ಸೇರ್ಪಡೆಗೊಂಡಿದ್ದೇನೆ. ಕ್ಷೇತ್ರದ ಬದಲಾವಣೆಗೆ ಜೆಡಿಎಸ್ ಸಾಕ್ಷಿಯಾಗಲಿದೆ - ಪವಿತ್ರ ಕಾಡಪ್ಪ, ಅಧ್ಯಕ್ಷರು ನರಸೀಪುರ ಗ್ರಾಮ ಪಂಚಾಯತ್

ಜೆಡಿಎಸ್ ಸೇರ್ಪಡೆಯ ಕುರಿತು ಮಾತನಾಡಿದ ಅವರು ಕಳೆದ ಹಲವಾರು ವರ್ಷಗಳಿಂದ ನಾನು ಸಕ್ರಿಯನಾಗಿ ಬಿಜೆಪಿಯಲ್ಲಿ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದೇನೆ, ಪಕ್ಷ ಸಂಘಟನಾ ದೃಷ್ಟಿಯಿಂದ ಎಲ್ಲಾ ಕಡೆಗೆ ತೆರಳಿ ಬಿಜೆಪಿಯ ಕುರಿತು ಜನರಲ್ಲಿ ವಿಚಾರ ಹಂಚಿಕೊಂಡಿದ್ದೇನೆ. ಆದರೆ ನನ್ನನು ಎಲ್ಲೂ ಜೀವರಾಜ್ ಅವರು ಗುರುತಿಸಿಲ್ಲ, ಅವರ ಸೋಲಿನ ಸಮಯದಲ್ಲೂ ನಾವು ಅವರ ಜೊತೆಗಿದ್ದೆವು ಆದರೆ ಅವರು ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದವರಿಗೆ ಮಣೆಹಾಕಿ ಜಿಲ್ಲಾ ಕೆಡಿಪಿ ಸದಸ್ಯರನ್ನಾಗಿ ಮಾಡಿದ್ದಾರೆ ಇದು ನನ್ನ ಮನಸ್ಸಿಗೆ ಬೇಸರ ಉಂಟುಮಾಡಿತು ಆದ ಕಾರಣ ಜೆಡಿಎಸ್ ಸೇರ್ಪಡೆಗೊಂಡಿರುವುದಾಗಿ ತಿಳಿಸಿದ್ದಾರೆ. 

ತಳಮಟ್ಟದಿಂದ ಪಕ್ಷವನ್ನು ಕಟ್ಟುವಲ್ಲಿ ಸುಧಾಕರ್ ಶೆಟ್ಟಿ ಅವರ ನೇತೃತ್ವದ ನಮ್ಮ ತಂಡವು ಯಶಸ್ವಿಯಾಗಿದೆ. ಕ್ಷೇತ್ರದಲ್ಲಿ ಇಂದು ಚುನಾವಣೆ ನಡೆದರೂ ಕೂಡ ಜೆಡಿಎಸ್ ತ್ರಿಕೋನ ಸ್ಪರ್ಧೆಯನ್ನು ನೀಡಲು ಸಮರ್ಥವಾಗಿದೆ. ಸಾಮಾನ್ಯ ಜನರೂ ಕೂಡ ಜೆಡಿಎಸ್ ನ ಪರವಾಗಿದ್ದಾರೆ ಹಾಗೂ ಬದಲಾವಣೆ ಬಯಸುತ್ತಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನ ಅನೇಕ ಮುಖಂಡರು ನಮ್ಮ ಸಂಪರ್ಕದಲ್ಲಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಎರಡೂ ಪಕ್ಷಗಳ ಅನೇಕ ನಾಯಕರು ನಮ್ಮ ಪಕ್ಷವನ್ನು ಸೇರಲಿದ್ದಾರೆ - ದಿವಾಕರ್ ಭಟ್, ಶೃಂಗೇರಿ ಕ್ಷೇತ್ರಾಧ್ಯಕ್ಷ, ಜನತಾದಳ ಜಾತ್ಯಾತೀತ

ಚುನಾವಣೆಗೆ ಒಂದು ವರ್ಷ ಇರುವಾಗಲೇ ಕ್ಷೇತ್ರದಲ್ಲಿ ಅನೇಕ ರೀತಿಯ ಬದಲಾವಣೆಗಳು ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಯಾವ ರೀತಿಯ ಬದಲಾವಣೆ ನಡೆಯಲಿದೆ ಎಂದು ಕಾದು ನೋಡಬೇಕಿದೆ.