ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ) ಭಾರತೀಯ ಜನತಾ ಪಾರ್ಟಿ ನರಸಿಂಹರಾಜಪುರ ಇವರ ವತಿಯಿಂದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ ಅವರ ವಿರುದ್ಧವಾಗಿ ಬೃಹತ್ ಪ್ರತಿಭಟನೆ ನಡೆಯಿತು.

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕು ಕಛೇರಿ ಮುಂದೆ ಜಮಾವಣೆಗೊಂಡ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರೈತ ವಿರೋಧಿ ಎಂಎಲ್ಎ ಗೆ ಧಿಕ್ಕಾರ ಭ್ರಷ್ಟ ಅಧಿಕಾರಿಗಳಿಗೆ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. ಶಾಸಕರು ತಮ್ಮ ಹಿಂಬಾಲಕರಿಗೆ ಮಾತ್ರ ಸರ್ಕಾರದ ಸವಲತ್ತುಗಳನ್ನು ಒದಗಿಸುತ್ತಿದ್ದಾರೆ ಆಡಳಿತದಲ್ಲಿ ಅಧಿಕಾರಿಗಳ ಮೇಲೆ ಬಿಗುವಿನ ಕ್ರಮಗಳನ್ನು ಕೈಗೊಳ್ಳದೇ ಇರುವ ಕಾರಣ ಭ್ರಷ್ಟಾಚಾರ ಕ್ಷೇತ್ರಾದ್ಯಂತ ತಾಂಡವವಾಡುತ್ತಿದೆ ಇದಕ್ಕೆಲ್ಲ ಮುಖ್ಯ ಕಾರಣ ಶಾಸಕರ ಆಡಳಿತ ವೈಖರಿ ಎಂಬ ಆರೋಪ ಮಾಡಿದರು. 

ಇದನ್ನೂ ಓದಿ : ಮೂಡಿಗೆರೆ : ಮೂವರು ಅಕ್ರಮ ಗಾಂಜಾ ಸಾಗಾಟಗಾರರನ್ನು ಕಾರ್ಯಾಚರಣೆಯ ಮೂಲಕ ಸೆರೆ ಹಿಡಿದ ಪೊಲೀಸರು

ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಡಿ.ಎನ್ ಜೀವರಾಜ್ ಆಡಳಿತ ವ್ಯವಸ್ಥೆಯು ಸಂಪೂರ್ಣ ಹದಗೆಟ್ಟಿದ್ದು ಬದುಕಿದ್ದವರನ್ನು ಮರಣ ಹೊಂದಿದ್ದಾರೆ ಎಂಬ ಸುಳ್ಳು ಪ್ರಮಾಣ ಪತ್ರಗಳನ್ನು ನೀಡಿ ಆ ಮೂಲಕ ಅಕ್ರಮ ಎಸಗುವಲ್ಲಿ ಅಧಿಕಾರಿಗಳು ಶಾಮೀಲಾಗುತ್ತಿದ್ದಾರೆ. ಶಿರಸ್ತೇದಾರ್, ತಹಶೀಲ್ದಾರ್ ರ ಸಹಿಗಳನ್ನು ನಕಲು ಮಾಡಲಾಗುತ್ತಿದೆ ಈ ಕೃತ್ಯಗಳ ಹಿಂದಿರುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಶೀಘ್ರವಾಗಿ ಆಗಬೇಕೆಂದು ಆಗ್ರಹಿಸಿದರು. 

ಲೆಟರ್ ಹೆಡ್ ನ ಮೂಲಕ ಈ ಹಿಂದೆ ಶಾಸಕರೇ ಶೃಂಗೇರಿ ತಹಶೀಲ್ದಾರ್ ಅವರನ್ನು ಕ್ಷೇತ್ರದಿಂದ ಬೇರೆಡೆಗೆ ವರ್ಗ ಮಾಡುವಂತೆ ತಿಳಿಸಿರುತ್ತಾರೆ ಆ ಬಳಿಕ ಖುದ್ದಾಗಿ ಗೃಹ ಸಚಿವರ ಬಳಿ ತೆರಳಿ ಲೆಟರ್ ಹೆಡ್ ನಲ್ಲಿರುವುದು ನನ್ನ ಸಹಿಯಲ್ಲ ಅದು ನನ್ನದಲ್ಲ ಎಂಬ ದ್ವಂದ್ವ ನಿಲುವಿನ ಹೇಳಿಕೆಯನ್ನು ನೀಡುತ್ತಾರೆ, ಶಾಸಕರೇ ಇಂತಹ ನಿಲುವನ್ನು ತಳೆದಲ್ಲಿ ಆಡಳಿತ ಹೇಗೆ ಸುಸೂತ್ರವಾಗಿ ನಡೆಸಲು ಸಾಧ್ಯ ಅಭಿವೃದ್ದಿ ಕಾರ್ಯಗಳು ಯಾವ ರೀತಿಯಲ್ಲಿ ಸಾಗಲಿದೆ ಎಂದು ಹರಿಹಾಯ್ದರು. 

ಶೃಂಗೇರಿಯ ತಾಲೂಕು ಕಛೇರಿಯಲ್ಲಿ ವಾಹನ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿಜೇತನ ಆತ್ಮಹತ್ಯೆಗೆ ಶಾಸಕರೇ ನೇರ ಕಾರಣ ಎಂದು ಆರೋಪಿಸಿದ ಜೀವರಾಜ್, ಆತನ ಮರಣದ ಸಂದರ್ಭದಲ್ಲಿ ಕನಿಷ್ಠ ಪಕ್ಷ ನೋಡಲೂ ಬಾರದೇ ಕೊರೋನ ಎಂಬ ಸುಳ್ಳು ಹೇಳಿಕೆ ನೀಡಿ ಆತನ ಪರಿಹಾರದ ವಿಚಾರಕ್ಕೂ ಮುಂದೆ ಬರಲಿಲ್ಲ ಎಂದು ವಾಗ್ದಾಳಿ ನಡೆಸಿದರು.  

ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ನರಸಿಂಹರಾಜಪುರ ಬಿಜೆಪಿ ಅಧ್ಯಕ್ಷರಾದ ಅರುಣ್ ಕುಮಾರ್ ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದು ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ ಬಡವರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ, ನಕಲಿ ದಾಖಲೆಗಳ ಸೃಷ್ಟಿ ಮತ್ತು ನಕಲಿ ಸಹಿಯು ಎಲ್ಲೆಡೆ ವ್ಯಾಪಿಸಿದ್ದು ತಾಲೂಕು ಕಛೇರಿಯ ಆಡಳಿತ ಸಂಪೂರ್ಣ ಭ್ರಷ್ಟಾಚಾರದಿಂದ ಕೂಡಿದೆ ಈ ಕುರಿತು ಶಾಸಕರು ನಿಗಾವಹಿಸಿ ಸೂಕ್ತ ಆಡಳಿತಕ್ಕೆ ಮುಂದಾಗಬೇಕು ಎಂದರು. 

ಈ ಪ್ರತಿಭಟನೆಯಲ್ಲಿ ಪಿ.ಜೆ ಆಂಟೋನಿ, ವೆನಿಲ್ಲಾ ಭಾಸ್ಕರ್, ಬಿ.ಎಸ್ ಆಶೀಶ್ ಕುಮಾರ್, ರಶ್ಮಿ ದಯಾನಂದ, ಎನ್.ಎಂ ನಾಗೇಶ್, ಸಂಪತ್ ಕುಮಾರ್, ಸುಬ್ರಮಣ್ಯ, ಕೆ.ಟಿ ವೆಂಕಟೇಶ್, ಜಿ.ಎಂ ಪ್ರಕಾಶ್, ಎನ್.ಎಂ ಕಾಂತರಾಜ್, ಲೋಕೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.