ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಭಾರೀ ಗಾತ್ರದ ಮರಗಳು ಹಾಗೂ ವಿದ್ಯುತ್ ಕಂಬ ಉರುಳಿ ಸಂಚಾರಕ್ಕೆ ಅಡ್ಡಿ ಉಂಟಾಗಿರುವ ಘಟನೆ ಬಾಳೆಹೊನ್ನೂರಿನಲ್ಲಿ ಸಂಭವಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡಬಗೆರೆ ಹಾಗೂ ಬಾಳೆಹೊನ್ನೂರು ಮಾರ್ಗದಲ್ಲಿ ಬೃಹದಾಕಾರದ ಮರಗಳ ಮೇಲೆ ವಿದ್ಯುತ್ ಕಂಬ ರಸ್ತೆಗೆ ಅಡ್ಡಲಾಗಿ ಉರುಳಿರುವ ಪರಿಣಾಮ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. 

ಇದನ್ನೂ ಓದಿ : ಭೀಕರ ರಸ್ತೆ ಅಪಘಾತ ; ಚಿಕ್ಕಮಗಳೂರು ಮೂಲದ ಬೈಕ್ ಸವಾರ ಸಾವು

ಈ ಘಟನೆಯಿಂದಾಗಿ ವಾಹನಚಾಲನೆ ಮಾಡಲಾಗದೇ ಕಿಲೋಮೀಟರ್ ಗಟ್ಟಲೆ ವ್ಯಾಪ್ತಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಪ್ರಸ್ತುತ ಸಿಬ್ಬಂದಿಗಳು ಹಾಗೂ ವಾಹನ ಸವಾರರು ಮರವನ್ನು ತೆರವುಗೊಳಿಸುವ ಕಾರ್ಯವನ್ನು ನಡೆಸುತ್ತಿದ್ದಾರೆ. ಬಹಳಷ್ಟು ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದು ಎರಡೂ ಸಾಲಿನಲ್ಲಿ ಪ್ರಯಾಣ ಮಾಡುವವರಿಗೆ ಈ ಘಟನೆಯಿಂದಾಗಿ ಸಂಚಾರ ಸಾಧ್ಯವಾಗುತ್ತಿಲ್ಲ. 

ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಸುರಿಯುತ್ತಿರುವ ಮಳೆಯು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆಗಳಲ್ಲಿ ಅವಾಂತರ ಸೃಷ್ಟಿಸಿದ್ದು ಜನ ಸಾಮಾನ್ಯರನ್ನು ವಿವಿಧ ಸಮಸ್ಯೆಗೀಡುಮಾಡಿದೆ.

ಸಾರ್ವಜನಿಕರಿಗೆ ನಕಲಿ ರಶೀದಿ ನೀಡುತ್ತಿದ್ದ ಡಾಟಾ ಎಂಟ್ರಿ ಆಪರೇಟರ್ ಪೊಲೀಸರ ಬಲೆಗೆ

ನರಸಿಂಹರಾಜಪುರ :  ನಕಲಿ ರಶೀದಿ ಮುದ್ರಿಸಿ ಹಣ ಮಾಡುತ್ತಿದ್ದ ತಾಲೂಕು ಕಛೇರಿಯ ಡಾಟಾ ಎಂಟ್ರಿ ಆಪರೇಟರ್ ನ್ನು ಪೊಲೀಸರು  ವಶಕ್ಕೆ ಪಡೆದಿರುವ ಘಟನೆ ನರಸಿಂಹರಾಜಪುರದಲ್ಲಿ ನಡೆದಿದೆ. 

ನರಸಿಂಹರಾಜಪುರ ತಾಲೂಕು ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಡಾಟಾ ಎಂಟ್ರಿ ಆಪರೇಟರ್‌ ಆಗಿ ಕೆಲಸ ಮಾಡುತ್ತಿದ್ದ ಮುಜಾಮಿಲ್ ಎಂಬಾತನ ಮೇಲೆ  ನಕಲಿ ರಶೀದಿಯ ಆರೋಪವಿತ್ತು. 

ತಾಲೂಕು ಕಛೇರಿಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆಯುತ್ತಿದೆ, ಜನರಿಗೆ ನಕಲಿ ರಶೀದಿ ನೀಡಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬುದಾಗಿ ಆರೋಪಿಸಿ ಬಿಜೆಪಿಯು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿತ್ತು,  ಈ ಸಂದರ್ಭದಲ್ಲಿ ಪ್ರತಿಭಟನಾಕಾರರ ಮನವಿ ಸ್ವೀಕಾರ ಮಾಡಿ ತನಿಖೆ ಆರಂಭಿಸಿದ್ದ ಗ್ರೇಡ್-2 ತಹಸೀಲ್ದಾರ್ ಎ.ಚಂದ್ರಶೇಖರ್, ಡಾಟಾ ಎಂಟ್ರಿ ಆಪರೇಟರ್  ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಹಣ ಪಡೆದಿರುವುದನ್ನು ಕಂಡು ಹಿಡಿದಿದ್ದಾರೆ, ಹಾಗೂ ಆತನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆ ಪೊಲೀಸರು ಮುಜಾಮಿಲ್‌ನನ್ನು ಆತನ ಮನೆಯಲ್ಲಿ ಮಂಗಳವಾರ ಬಂಧಿಸಿ ಶೃಂಗೇರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 

ತಾಲೂಕು ಕಚೇರಿಯಲ್ಲಿ ಜನನ-ಮರಣ ಪ್ರಮಾಣ ಪತ್ರ, ಸರ್ವೇ, ಜಾತಿ ಆದಾಯ ಪ್ರಮಾಣ ಪತ್ರ, ವಂಶವೃಕ್ಷ, ಕೃಷಿಗೆ ಸಂಬಂಧಿಸಿದ ಅರ್ಜಿಗಳು, ಪಿಂಚಣಿ, ಸಾಮಾಜಿಕ ಭದ್ರತೆ ಯೋಜನೆ ಇನ್ನಿತರ ಸೌಲಭ್ಯಗಳ ಸೇವೆಗಳಿಗೆ ಡಾಟಾ ಆಪರೇಟರ್ ನಕಲಿ ರಶೀದಿ ನೀಡಿ ಜನರಿಂದ ಹಣ ಪಡೆಯುತ್ತಿದ್ದಾನೆ ಎಂಬ ಆರೋಪ ಸಾರ್ವಜನಿಕರಿಂದ ಈ ಹಿಂದೆಯೇ ಕೇಳಿ ಬಂದಿತ್ತು ನಂತರದಲ್ಲಿ ಇದರ ವಿರುದ್ಧ ಪ್ರತಿಭಟನೆ ಕೂಡ ನಡೆದಿದ್ದು ಹೆಚ್ಚಿನ ತಿರುವನ್ನು ಪಡೆದು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುವಲ್ಲಿ ಸಹಕಾರಿಯಾಗಿದೆ. ಬಡವರ್ಗದ ಜನರಿಂದ ಹೆಚ್ಚಿನ ಹಣ ಪಡೆದು ಅವರಿಂದ ವಸೂಲಿ ನಡೆಸುತ್ತಿದ್ದ ಭ್ರಷ್ಟಸಿಬ್ಬಂದಿ ಪೊಲೀಸರ ಕೈವಶವಾಗಿದ್ದಾನೆ.