ಕೊಪ್ಪ / ಹರಿಹರಪುರ : (ನ್ಯೂಸ್ ಮಲ್ನಾಡ್ ವರದಿ) ಕಳೆದ ಗ್ರಾಮ ಪಂಚಾಯಿತಿ ಚುನಾವಣೆ ನಂತರ ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಹರಿಹರಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಬಿಜೆಪಿ ಬೆಂಬಲಿತ ಮೊಹಮ್ಮದ್ ಶರೀಫ್ ಅವರು ಇಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ದಿಢೀರ್ ಬೆಳವಣಿಗೆಯಲ್ಲಿ  ಕಾಂಗ್ರೆಸ್ಸಿಗರ ವೈಯಕ್ತಿಕ ಬೆಂಬಲದೊಂದಿಗೆ ಮತ್ತೊಮ್ಮೆೆೆ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

 ಇನ್ನೋರ್ವ ಅಭ್ಯರ್ಥಿಯ ಮೇಲೆ ಅಸಮಾಧಾನ ಇದ್ದ ಕಾರಣ ಅವರನ್ನು ಬೆಂಬಲಿಸಲು ಸಾಧ್ಯವಾಗಿಲ್ಲ. ನನ್ನ ಮೇಲೆ ವಿಶ್ವಾಸವಿಟ್ಟು ಕಾಂಗ್ರೆಸ್ಸಿಗರು ಬೆಂಬಲ ನೀಡಿದ್ದಾರೆ. ಪಕ್ಷ ಬದಲಿಸುವ ಪ್ರಮೇಯವೇ ಇಲ್ಲ ನಾನು 17 ವರ್ಷಗಳಿಂದಲೂ ಬಿಜೆಪಿ ಈಗಲೂ ಬಿಜೆಪಿ ಮುಂದೆಯೂ ಬಿಜೆಪಿ - ಮೊಹಮ್ಮದ್ ಷರೀಫ್ ಅಧ್ಯಕ್ಷರು ಹರಿಹರಪುರ ಗ್ರಾಮ ಪಂಚಾಯತ್

ಹರಿಹರಪುರ ಪಂಚಾಯಿತಿ ಯಲ್ಲಿ 5 ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ 4 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದರು. ಈ ಹಿಂದೆ ಅಧ್ಯಕ್ಷರಾಗಿದ್ದ ಮೊಹಮ್ಮದ್ ಶರೀಫ್ ಅವರ ಅಧ್ಯಕ್ಷ ಅವಧಿ ಮುಗಿದ ನಂತರ ವೆಂಕಟೇಶ್ ಎಂಬುವವರು ಅಧ್ಯಕ್ಷರಾಗಬೇಕಿತ್ತು, ಆದರೆ ಇಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ನಡೆದ ಈ ಬೆಳವಣಿಗೆಯಲ್ಲಿ ನಾಲ್ವರು ಕಾಂಗ್ರೆಸ್ ಬೆಂಬಲಿತ ಸದಸ್ಯರ ಬೆಂಬಲದೊಂದಿಗೆ ಮೊಹಮ್ಮದ್ ಶರೀಫ್ ಅವರು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಪರವಾನಗಿ ಹೊಂದದೇ ಬಂದೂಕು ರಿಪೇರಿ ನಡೆಸುತ್ತಿದ್ದ ವ್ಯಕ್ತಿ ಸೆರೆ : 

ಶಿವಮೊಗ್ಗ : ಪರವಾನಗಿ ಹೊಂದದೇ ಬಂದೂಕುಗಳನ್ನು ರಿಪೇರಿ ನಡೆಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಆತನ ಬಳಿಯಿದ್ದ ಬಂದೂಕುಗಳನ್ನು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಶಂಕರಘಟ್ಟ ನಿವಾಸಿ ಪಾಲಾಕ್ಷಪ್ಪ ಬಂಧಿತ ಆರೋಪಿ. ಪಾಲಾಕ್ಷಪ್ಪ ಪರವಾನಗಿ ಹೊಂದದೇ ಮನೆಯಲ್ಲಿಯೇ ಬಂದೂಕುಗಳ ರಿಪೇರಿ ನಡೆಸುತ್ತಿದ್ದ ಎಂಬ ಖಚಿತ ಮಾಹಿತಿಯನ್ನು ಪಡೆದ ಪೊಲೀಸರು ದಾಳಿಯ ಮೂಲಕ ಕಾರ್ಯಾಚರಣೆ ನಡೆಸಿದ್ದಾರೆ. 

ಪೊಲೀಸರ ಕಾರ್ಯಾಚರಣೆ ಸಂದರ್ಭದಲ್ಲಿ ಅಕ್ರಮವಾಗಿ ಆರೋಪಿ ರಿಪೇರಿ ನಡೆಸುತ್ತಿದ್ದ 09 ನಾಡ ಬಂದೂಕುಗಳು ಪೊಲೀಸರಿಗೆ ದೊರೆತಿದೆ. ಬಂದೂಕುಗಳನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಯನ್ನು ಸಹ ಬಂಧಿಸಿದ್ದಾರೆ.

ಬಂಧಿತನ ಮೇಲೆ ಆಯುಧ ಕಾಯ್ದೆಯಡಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ದೊರೆತಿದೆ.