ಮೂಡಿಗೆರೆ : ( ನ್ಯೂಸ್ ಮಲ್ನಾಡ್ ವರದಿ) ಸಹೋದರರ ನಡುವೆ ಜಮೀನಿನ ವಿಚಾರವಾಗಿ ಉಂಟಾದ ಕಲಹವು ತಾರಕಕ್ಕೇರಿದ ಪರಿಣಾಮ ಕತ್ತಿಯಿಂದ ಬಾಲಕಿಯ ಕೈಯನ್ನು ಕಡಿದು ಕೊಲೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ : ಶೃಂಗೇರಿ : ಕಾವಡಿ ಸಮೀಪ ಬೈಕ್ ಅವಘಡ ; ಚಾಲಕನ ಸ್ಥಿತಿ ಗಂಭೀರ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗುಲ್ ಗ್ರಾಮದ ರಮೇಶ್ ಹಾಗೂ ಜಯಂತ್ ಸಹೋದರರ ನಡುವೆ ಜಮೀನು ಹಾಗೂ ಮನೆಯ ಸಂಬಂಧ ಈ ಹಿಂದೆಯೂ ಕಲಹವಿತ್ತು ಎನ್ನಲಾಗಿದೆ, ಅಂತೆಯೇ ಮೊನ್ನೆ ರಾತ್ರಿಯ ವೇಳೆಯಲ್ಲಿ ಜಯಂತ್, ಅವರ ಹೆಂಡತಿ ಹಾಗೂ ಮಗ ಜ್ಞಾನದೇವ್ ಮೂವರು ಸೇರಿ ಜಾಗದ ವಿಚಾರವಾಗಿ ಸಹೋದರನ ಕುಟುಂಬದವರೊಂದಿಗೆ ವಾಗ್ವಾದಕ್ಕಿಳಿದು ಮಾತಿಗೆ ಮಾತು ಜೋರಾದ ಸಂದರ್ಭದಲ್ಲಿ ಜಯಂತ್ ಅವರ ಪುತ್ರ ಜ್ಞಾನದೇವ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಕತ್ತಿಯಿಂದ ಹಲ್ಲೆ ಮಾಡಿ ಕೊಲೆ ಮಾಡಲು ಜಯಂತ್, ಅವರ ಪತ್ನಿ ಹಾಗೂ ಪುತ್ರ ಜ್ಞಾನದೇವ್ ಯತ್ನಿಸಿದ್ದಾರೆಂದು ಆರೋಪಿಸಿ ಮೂಡಿಗೆರೆಯ ಬಣಕಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆಗೀಡಾದ ಬಾಲಕಿ ಪ್ರಕರಣ ದಾಖಲು ಮಾಡಿದ್ದು, ಈ ಸಂಬಂಧ ಕಾರ್ಯಾಚರಣೆಗಿಳಿದ ಪೊಲೀಸರು ಜಯಂತ್ ಗೌಡ ಎಂಬ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ವಿಚಾರಣೆ ಆರಂಭವಾಗಿದ್ದು ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು ಅವರ ಬಂಧನ ಹಾಗೂ ವಿಚಾರಣೆಯ ನಂತರ ಹೆಚ್ಚಿನ ಮಾಹಿತಿಗಳು ಲಭ್ಯವಾಗಲಿದೆ.
ತನು ಕೊಟ್ಟಿಗೆಹಾರ, ವರದಿಗಾರರು




0 Comments