ಹರಿಹರಪುರ : (ನ್ಯೂಸ್ ಮಲ್ನಾಡ್ ವರದಿ) ಕಳೆದ ಗ್ರಾಮ ಪಂಚಾಯಿತಿ ಚುನಾವಣೆ ನಂತರ ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಹರಿಹರಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಬಿಜೆಪಿ ಬೆಂಬಲಿತ ಮೊಹಮ್ಮದ್ ಶರೀಫ್ ಅವರು ನೆನ್ನೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ದಿಢೀರ್ ಕಮಲಕ್ಕೆ ಗುಡ್ ಬೈ ಹೇಳಿ ಕಾಂಗ್ರೆಸ್ ಜೊತೆಗೆ ಸ್ನೇಹ ಚಾಚಿದ್ದರು.
ಈ ಮೂಲಕ ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಪುನಃ ಹರಿಹರಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಇದನ್ನೂ ಓದಿ : ಹರಿಹರಪುರ ಪಂಚಾಯಿತಿ ಅಧಿಕಾರ ಕೈ ಪಾಲು, ದಿಢೀರ್ ಬೆಳವಣಿಗೆಯಲ್ಲಿ ಬಿಜೆಪಿಗೆ "ಹೂ" ಮುಡಿಸಿ ಕಾಂಗ್ರೆಸ್ "ಕೈ" ಹಿಡಿದ ಮೊಹಮ್ಮದ್ ಶರೀಫ್
ಹರಿಹರಪುರ ಪಂಚಾಯಿತಿ ಯಲ್ಲಿ 5 ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ 4 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದರು. ಪಕ್ಷದ ಒಳ ಒಪ್ಪಂದದಂತೆ ಈ ಹಿಂದೆ ಅಧ್ಯಕ್ಷರಾಗಿದ್ದ ಮೊಹಮ್ಮದ್ ಶರೀಫ್ ಅವರ ಅಧ್ಯಕ್ಷ ಅವಧಿ ಮುಗಿದ ನಂತರ ಬಿಜೆಪಿ ಬೆಂಬಲಿತ ವೆಂಕಟೇಶ್ ಎಂಬುವವರು ಅಧ್ಯಕ್ಷರಾಗಬೇಕಿತ್ತು, ಆದರೆ ನೆನ್ನೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ನಡೆದ ಈ ಬೆಳವಣಿಗೆಯಲ್ಲಿ ನಾಲ್ವರು ಕಾಂಗ್ರೆಸ್ ಬೆಂಬಲಿತ ಸದಸ್ಯರ ಬೆಂಬಲದೊಂದಿಗೆ ಮೊಹಮ್ಮದ್ ಶರೀಫ್ ಅವರು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಇದರಿಂದ ಬಿಜೆಪಿಗೆ ಮುಖಭಂಗವಾಗಿತ್ತು.
ಆದರೆ ಈ ಬೆಳವಣಿಗೆ ಕುರಿತು ನ್ಯೂಸ್ ಮಲ್ನಾಡ್ ಗೆ ಪ್ರತಿಕ್ರಿಯಿಸಿದ್ದ ಶರೀಫ್ ಅವರು ನಾನು ಎಂದೆಂದಿಗೂ ಬಿಜೆಪಿಯೇ, ಕಳೆದ 17 ವರ್ಷಗಳಿಂದ ಪಕ್ಷದಲ್ಲಿ ಇದ್ದೇನೆ ಮುಂದೆಯೂ ಇರುತ್ತೇನೆ. ನಾನು ಪಕ್ಷದ ಮುಖಂಡರಿಗೆ ಹೇಳಿಯೇ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದೆ ನನಗೆ ಕಾಂಗ್ರೆಸ್ ಸದಸ್ಯರು ಸ್ವಯಂ ಪ್ರೇರಿತರಾಗಿ ಬೆಂಬಲ ನೀಡಿದ್ದಾರೆ ಆ ಮೂಲಕ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ನಾನು ಪಕ್ಷವನ್ನು ಬಿಟ್ಟಿಲ್ಲ ಎಂದಿದ್ದರು.
ಆದರೆ ಇಂದು ಬಿಜೆಪಿಯಿಂದ ಮೊಹಮ್ಮದ್ ಶರೀಫ್ ಅವರನ್ನು ಉಚ್ಚಾಟನೆ ಮಾಡಿ ಆದೇಶಿಸಲಾಗಿದೆ. ಬಿಜೆಪಿ ಮುಖಂಡರಾದ ಶೆಟ್ಟಿಗದ್ದೆ ರಾಮಸ್ವಾಮಿ ಹಾಗೂ ತಾಲೂಕು ಬಿಜೆಪಿ ಅಧ್ಯಕ್ಷರಾದ ಸತೀಶ್ ಅದ್ದಡ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದು ನಮ್ಮ ಪಕ್ಷದ ಅಧೀಕೃತ ಅಭ್ಯರ್ಥಿಯ ವಿರುದ್ಧ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಶರೀಫ್ ಪಕ್ಷ ದ್ರೋಹ ಮಾಡಿದ್ದಾರೆ, ಇದನ್ನು ಪಕ್ಷ ಕ್ಷಮಿಸುವುದಿಲ್ಲ ಈ ಕಾರಣದಿಂದ ಪಕ್ಷದ್ರೋಹದ ಆಧಾರದ ಮೇಲೆ ಉಚ್ಛಾಟನೆ ಮಾಡಲಾಗಿದೆ ಎಂದಿದ್ದಾರೆ




0 Comments