ಚಿಕ್ಕಮಗಳೂರು :(ನ್ಯೂಸ್ ಮಲ್ನಾಡ್ ವರದಿ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕಾಫಿನಾಡು ಚಿಕ್ಕಮಗಳೂರಿಗೆ ಆಗಮಿಸಿ ವಿವಿಧ ಅಭಿವೃಧ್ದಿ ಕಾರ್ಯಗಳಿಗೆ ಚಾಲನೆ ನೀಡಿದರು.

ಇಂದು ಬೆಳಿಗ್ಗೆಯೇ ಚಿಕ್ಕಮಗಳೂರಿಗೆ ಹೆಲಿಕಾಪ್ಟರ್ ನ ಮೂಲಕ ಆಗಮಿಸಬೇಕಿದ್ದ ಅವರು ಹವಾಮಾನ ವೈಪರೀತ್ಯದಿಂದಾಗಿ ಹಾಗೂ ಮಳೆಯಿಂದ ಹಾನಿಗೀಡಾದ ಬೆಂಗಳೂರಿನ ಕೆಲ ಪ್ರದೇಶಗಳಿಗೆ ತೆರಳಬೇಕಾದುದರಿಂದ ರಸ್ತೆ ಮಾರ್ಗದ ಮುಖೇನ ಮಧ್ಯಾಹ್ನದ ವೇಳೆಗೆ ಆಗಮಿಸಿದರು. ಚಿಕ್ಕಮಗಳೂರು ನಗರದ ಎಐಟಿ ಕಾಲೇಜಿನ ಆವರಣದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿಗಳು ವಿವಿಧ ಇಲಾಖೆಯ ಯೋಜನೆಗಳಿಗೆ ಚಾಲನೆ ನೀಡಿದರು ಹಾಗೂ ಅಭಿವೃದ್ದಿ ಕಾರ್ಯಕ್ರಮದಲ್ಲಿ ಭಾಗಿಯಾದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು ಅನೇಕ ಬಾರಿ ಚಿಕ್ಕಮಗಳೂರು ಪ್ರವಾಸ ನಿಗದಿಯಾಗಿದ್ದರು ಕೂಡ ಅನೇಕ ಕಾರಣಗಳಿಂದ ಬರಲಾಗಲಿಲ್ಲ ಆದರೆ ಇಂದು ಮಳೆಯನ್ನು ಲೆಕ್ಕಿಸದೇ ಚಿಕ್ಕಮಗಳೂರಿಗೆ ಆಗಮಿಸಿದ್ದೇನೆ ಚಿಕ್ಕಮಗಳೂರಿನ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿರುವುದಾಗಿ ತಿಳಿಸಿದರು. 

ಇಡೀ ರಾಜ್ಯಕ್ಕೆ ನಿಸರ್ಗದ ಶಕ್ತಿಯನ್ನು ಚಿಕ್ಕಮಗಳೂರು ಹಂಚುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಅವರು ಈ ಜಿಲ್ಲೆಯ ಜನರಿಗೆ ಅಗತ್ಯವಾಗಿ ನೀಡಲೇ ಬೇಕಾದ ಎಲ್ಲಾ ಸವಲತ್ತುಗಳನ್ನು ಹಾಗೂ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸುವುದಾಗಿ ತಿಳಿಸಿದರು. 

ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ : 

ಚಿಕ್ಕಮಗಳೂರು ಜಿಲ್ಲೆಗೆ ಅನೇಕ ಕಡೆಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಕಾರಣ ಜಿಲ್ಲೆಯ ಅಭಿವೃದ್ಧಿಯೊಂದಿಗೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿ ಅಗತ್ಯ ಸೌಲಭ್ಯಗಳನ್ನು ಈ ನಿಟ್ಟಿನಲ್ಲಿ ಬೇಕಾಗುವ ಸವಲತ್ತುಗಳನ್ನು ನೀಡುವುದಾಗಿ ಭರವಸೆ ನೀಡಿದರು. 

ಮಲೆಮನೆ ನಿರಾಶ್ರಿತರಿಗೆ ನ್ಯಾಯಸಮ್ಮತ ಪರಿಹಾರ : 2019 ರ ಮಳೆಗಾಲದಲ್ಲಿ ಉಂಟಾದ ಪ್ರವಾಹದಿಂದ ನಿರಾಶ್ರಿತರಾದವರ ವರದಿಯನ್ನು ತೆಗೆದುಕೊಂಡು ಪುನರ್ ಪರಿಶೀಲನೆ ನಡೆಸಿ ನ್ಯಾಯಸಮ್ಮತ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದರು. 

ಈ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳೊಂದಿಗೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ.ಟಿ ರವಿ, ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಶಾಸಕರಾದ ಡಿ.ಎಸ್.ಸುರೇಶ್, ಎಂ.ಪಿ.ಕುಮಾರಸ್ವಾಮಿ, ಟಿ.ಡಿ ರಾಜೇಗೌಡ, ಬೆಳ್ಳಿ ಪ್ರಕಾಶ್, ಎಂಎಲ್ಸಿ ಪ್ರಾಣೇಶ್, ಸಿ.ಎಂ. ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಭಾಗವಹಿಸಿದ್ದರು.