ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಅಪಾರ ಸಂಖ್ಯೆ ಭಕ್ತ ಸಮೂಹವನ್ನು ಗಳಿಸಿರುವ ಚಿಕ್ಕಮಗಳೂರು ಜಿಲ್ಲೆಯ ಅಂತರಘಟ್ಟೆಯ ಶ್ರೀ ದುರ್ಗಾಂಬ ದೇವಿ ದೇವಾಲಯದಲ್ಲಿ ನಡೆದ ಸೀರೆ ಹರಾಜಿನಲ್ಲಿ ಅಪಾರ ಪ್ರಮಾಣದ ಮೋಸ ಉಂಟಾಗಿದೆ ಆರೋಪಿಸಿ ಸ್ಥಳೀಯರು ಕ್ರಮಕ್ಕೆ ಆಗ್ರಹಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಪವಿತ್ರ ಧಾರ್ಮಿಕ ಕ್ಷೇತ್ರ ಅಂತರಘಟ್ಟೆ ಶ್ರೀ ದುರ್ಗಾಂಬಾ ದೇವಿ ದೇವಾಲಯವು
ಲಕ್ಷಾಂತರ ರೂಪಾಯಿ ಆದಾಯ ಹೊಂದಿದೆ. ನಿತ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಸಾವಿರಾರು ಬೆಲೆಬಾಳುವ ರೇಷ್ಮೆಸೀರೆಗಳ ಕುಪ್ಪಸಗಳು, ಹಣ ಸೇರಿದಂತೆ ಅನೇಕ ವಸ್ತುಗಳನ್ನು ಅರ್ಪಣೆ ಮಾಡುತ್ತಿದ್ದಾರೆ. ಆದರೆ ಹರಿಕೆ ರೂಪದಲ್ಲಿ ಬರುವ ಸೀರೆ, ಕುಪ್ಪಸಗಳನ್ನು ಮುಜರಾಯಿ ಇಲಾಖೆಯ ಆದೇಶವಿಲ್ಲದೇ ಹರಾಜು ಮಾಡಿ ಗ್ರಾಮಸ್ಥರಿಗೆ ತಪ್ಪು ಲೆಕ್ಕ ನೀಡಲಾಗುತ್ತಿದೆ ಎಂಬ ಆರೋಪ ಮಾಡಿದ ಗ್ರಾಮಸ್ಥರು, ಆರೋಪಿಗಳ ತನಿಖೆಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅಂತರಘಟ್ಟೆ ದೇವಿಯ ಭಕ್ತರು ಹಾಗೂ ಗ್ರಾಮಸ್ಥರು ಮಾಜಿ ಶಾಸಕ ವೈ.ಎಸ್.ವಿ.ದತ್ತ ಅವರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ವೈ.ಎಸ್.ವಿ.ದತ್ತ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ದೇವಸ್ಥಾನದಲ್ಲಿ ಅವ್ಯವಹಾರ ನಡೆದಿರುವುದು ಗ್ರಾಮಸ್ಥರ ಗಮನಕ್ಕೆ ಬಂದಿದೆ ಈ ಕುರಿತು ಪರಿಶೀಲನೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಇದೇ ರೀತಿಯ ಚಟುವಟಿಕೆಗಳು ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ದೇವಾಲಯ ಕಾರ್ಯಕ್ರಮಗಳಿಗೆ ಇದೇ ರೀತಿಯಲ್ಲಿ ಅನುಮತಿ ಪಡೆಯದೇ ದೇವಿಯ ಆಸ್ತಿ ಹಾಗೂ ಒಡವೆಗಳನ್ನು ಹರಾಜು ಮಾಡುವುದರಲ್ಲಿ ಸಂದೇಹವಿಲ್ಲ.
ಅಧಿಕಾರದ ಪ್ರಭಾವದಿಂದ ಕೂಡಿರುವ ಬಿಲ್ ಕಲೆಕ್ಟರ್ ದೇವಾಲಯದಿಂದ ಬಂದಂತಹ ಹಣ ಮತ್ತು ಒಡವೆಗಳನ್ನು ಸ್ವಂತ ಬಳಕೆ ಮಾಡಿಕೊಂಡಿದ್ದಾರೆಂಬ ಅನುಮಾನ ವ್ಯಕ್ತವಾಗುತ್ತಿದೆ, ಆದ್ದರಿಂದ ಪ್ರಸ್ತುತ ಇರುವ ದೇವಾಲಯ ಸಮಿತಿಯನ್ನು ರದ್ದುಗೊಳಿಸಿ ಹೊಸ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಶ್ರೀ ದುರ್ಗಾಂಬ ದೇವಿಯ ದೇವಾಲಯದ ಅಭಿವೃದ್ಧಿಗಾಗಿ ಅನುಕೂಲ ಮಾಡಿಕೊಡಬೇಕು ಎಂದು ಮನವಿಮಾಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಪ್ರದೀಪ್, ಚಂದ್ರಪ್ಪ, ಬಸವರಾಜ್ ಸೇರಿದಂತೆ ಸ್ಥಳೀಯರು ಹಾಗೂ ಭಕ್ತರು ಹಾಜರಿದ್ದರು.




0 Comments