ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ತಾಲೂಕು ಕಛೇರಿಯಲ್ಲಿ ನಡೆದ ಹಕ್ಕುಪತ್ರ ಕುರಿತಾದ ಹಗರಣಕ್ಕೆ ನೇರ ಕಾರಣ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ ಡಿ ರಾಜೇಗೌಡ, ಖಾಂಡ್ಯ ಕ್ಲಬ್ ನಲ್ಲಿ ಈ ಕುರಿತು ತಹಶೀಲ್ದಾರ್ ಅವರೊಂದಿಗೆ ನಡೆದ ಚರ್ಚೆಗಳು ಹಾಗೂ ಶಾಸಕರ ಸಮ್ಮತಿ ಇಂದು ಅತಿ ದೊಡ್ಡ ಹಗರಣಕ್ಕೆ ಕಾರಣವಾಗಿದೆಯೆಂದು ಬಿಜೆಪಿ ಮುಖಂಡರಾದ ನೂತನ್ ಕುಮಾರ್ ಆರೋಪಿಸಿದರು.
ಈ ಕುರಿತು ಮಾತನಾಡಿದ ಅವರು ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಮಾರನಕೊಡಿಗೆ ನಟರಾಜ ಸುಖಾಸುಮ್ಮನೆ ಭ್ರಷ್ಟಾಚಾರದ ಆರೋಪವನ್ನು ಬಿಜೆಪಿಗರ ಮೇಲೆ ಮಾಡುತ್ತಿದ್ದಾರೆ, ಭ್ರಷ್ಟಾಚಾರ ಹಾಗೂ ಕ್ರಿಮಿನಲ್ ಎಂಬ ಪಟ್ಟವು ಮಾರನಕೊಡಿಗೆ ನಟರಾಜ್ ಅವರಿಗೆ ಸಲ್ಲುತ್ತದೆ, ಶೃಂಗೇರಿಯ ಜನತೆಗೆ ನಟರಾಜ ಯಾರು ನೂತನ್ ಕುಮಾರ್ ಯಾರು ಎಂಬ ಪರಿಚಯವಿದೆ. ನಾಲಿಗೆಯನ್ನು ಬಿಗಿಹಿಡಿದು ನಟರಾಜ್ ಮಾತನಾಡಬೇಕೆಂದರು ಮತ್ತು ತಾಲೂಕು ಕಛೇರಿಯಲ್ಲಿ ನಡೆದ ಹಕ್ಕುಪತ್ರ ಹಗರಣಕ್ಕೆ ಶಾಸಕ ಟಿ.ಡಿ ರಾಜೇಗೌಡ ಅವರೇ ನೇರ ಹೊಣೆ ಎಂದು ಆರೋಪಿಸಿದರು.
ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳದ ಕಾರಣ ಈ ಬೃಹತ್ ಹಗರಣ ನಡೆದಿದೆ ಇದಕ್ಕೆ ಶಾಸಕರ ವೈಫಲ್ಯವೇ ಕಾರಣ, 94ಸಿ ಹಕ್ಕುಪತ್ರಗಳ ಹಗರಣದಲ್ಲಿ ಭಾಗಿಯಾಗಿ ಸಿಕ್ಕಿಬಿದ್ದು ಜೈಲಿನಲ್ಲಿರುವ ಇಬ್ಬರು ಅಧಿಕಾರಿಗಳು ಶೃಂಗೇರಿಗೆ ಯಾರ ಶಿಫಾರಸ್ಸಿನ ಮೂಲಕ ಬಂದಿದ್ದಾರೆ ಎಂದು ಶಾಸಕರು ಅಥವಾ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರು ತಿಳಿಸಲಿ. ಶಾಸಕರ ವೈಫಲ್ಯವನ್ನು ಮುಚ್ಚಿಡುವ ಸಲುವಾಗಿ ಇನ್ನೊಬ್ಬರ ವೈಯಕ್ತಿಕ ವಿಚಾರಕ್ಕೆ ಹೋಗುತ್ತಿರುವುದು ಅವರ ಮಾತಿನಲ್ಲಿ ವ್ಯಕ್ತವಾಗುತ್ತಿದೆ ಎಂದರು.
ಅಭಿವೃದ್ಧಿಯ ಕುರಿತು ಅವರ ಹೇಳಿಕೆಗಳಿಗೆ ನಾವು ಬದ್ಧರಿದ್ದೇವೆ, ಮಾಜಿ ಶಾಸಕರಾದ ಡಿ.ಎನ್ ಜೀವರಾಜ್ ಹಾಗೂ ಶಾಸಕ ಟಿ.ಡಿ ರಾಜೇಗೌಡ ಅವರ ಅಭಿವೃದ್ಧಿಯ ಕುರಿತಾದ ಚರ್ಚೆಗೆ ಕಾಂಗ್ರೆಸ್ಸಿಗರೇ ದಿನಾಂಕ ಹಾಗೂ ಸ್ಥಳ ನಿಗದಿಪಡಿಸಿ ತಿಳಿಸಿದಲ್ಲಿ ದಾಖಲೆಗಳ ಸಮೇತ ಆಗಮಿಸಿ ಸಂಪೂರ್ಣವಾಗಿ ಚರ್ಚೆಯಲ್ಲಿ ಪಾಲ್ಗೊಳ್ಳುವುದಾಗಿ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಬಳೂರು ರಾಮಕೃಷ್ಣ ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಹರೀಶ್ ವಿ ಶೆಟ್ಟಿ, ಬಿಜೆಪಿ ಮುಖಂಡರಾದ ನೂತನ್ ಕುಮಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಂಬಳೂರು ರಾಮಕೃಷ್ಣ, ಪಟ್ಟಣ ಪಂಚಾಯತ್ ಸದಸ್ಯರಾದ ವೇಣುಗೋಪಾಲ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.





0 Comments