ಶೃಂಗೇರಿ / ಕಾರ್ಕಳ : (ನ್ಯೂಸ್ ಮಲ್ನಾಡ್ ವರದಿ) ಬೈಕ್ ನಿಂದ ಬಿದ್ದು ಗಾಯಕ್ಕೀಡಾಗಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲು ಮಾಡಲು ಸಹಾಯ ಮಾಡುವ ಮುಖಾಂತರ ಸಚಿವ ಸುನಿಲ್ ಕುಮಾರ್ ಮಾನವೀಯತೆ ಮೆರೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೆಸ್ಕಾಂ ಕಟ್ಟಡ, ಹಾಗೂ ಶೃಂಗೇರಿ ಶಾರದಾಮಾತೆಯ ದರ್ಶನ ಹಾಗೂ ಉಭಯ ಶ್ರೀಗಳ ದರ್ಶನ ಪಡೆದು ಶೃಂಗೇರಿಯಿಂದ ಕಾರ್ಕಳದ ಕಡೆಗೆ ತಮ್ಮ ವಾಹನದಲ್ಲಿ ಕುಟುಂಬದ ಸದಸ್ಯರೊಂದಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಯುವಕನೋರ್ವ ಬೈಕ್ ಸ್ಕಿಡ್ ಆದ ಪರಿಣಾಮ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ, ಯಾರೂ ಸಹಾಯಕ್ಕೆ ಮುಂದೆ ಬಾರದ ಈ ಪರಿಸ್ಥಿತಿಯಲ್ಲಿ ಸಚಿವ ವಿ.ಸುನಿಲ್ ಕುಮಾರ್ ಅವರು ಮಾನವೀಯತೆ ಮೆರೆದು ಆತನನ್ನು ತುರ್ತಾಗಿ ಆಸ್ಪತ್ರೆಗೆ ದಾಖಲು ಮಾಡುವಲ್ಲಿ ಸಹಕರಿಸಿದ್ದಾರೆ.
ಅಪಘಾತಕ್ಕೀಡಾದ ಯುವಕ ಬಾಳೆಹೊನ್ನೂರು ಮೂಲದವನು ಎಂದು ಗುರುತಿಸಲಾಗಿದ್ದು, ಸಚಿವರ ಹಿಂದಿದ್ದ ಬೆಂಗಾವಲು ವಾಹನದಲ್ಲಿ ಆತನನ್ನು ಕಾರ್ಕಳದ ಆಸ್ಪತ್ರೆಗೆ ದಾಖಲು ಮಾಡಿ ಅಗತ್ಯವಾಗಿದ್ದ ಚಿಕಿತ್ಸೆ ದೊರೆಯುವಂತೆ ಸಚಿವ ಸುನಿಲ್ ಕುಮಾರ್ ಮಾಡಿದ್ದಾರೆ.
ಈ ಮಾರ್ಗದಲ್ಲಿ ಸಾಗುತ್ತಿದ್ದ ಅನೇಕರು ಅಪಘಾತವನ್ನು ಸಚಿವರ ಮುಂಚೆಯೇ ಕಂಡರೂ ಕೂಡ ಆತನಿಗೆ ಸಹಾಯ ಮಾಡದೆ ನೋಡುತ್ತಾ ತಮ್ಮಪಾಡಿಗೆ ತೆರಳಿದ್ದರು, ಆದರೆ ಕೂಡಲೇ ಸಹಾಯಕ್ಕೆ ಧಾವಿಸಿದ ಸಚಿವ ಸುನಿಲ್ ಕುಮಾರ್ ಅವರ ಮಾನವೀಯತೆಗೆ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದು, ಸಚಿವರಾಗಿಯೂ ಎಲ್ಲರಂತೆ ಸಹಜವಾಗಿ ಸರಳತೆ ಮೆರೆದು ಸಹಾಯ ಮಾಡಿರುವ ಸುನಿಲ್ ಕುಮಾರ್ ಅವರ ಈ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು ಇನ್ನೂ ಕೆಲವರು ಈ ದೃಶ್ಯಾವಳಿಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಹಂಚಿಕೊಂಡಿದ್ದಾರೆ.





0 Comments