ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರಿನ ಧಾರ್ಮಿಕ ಕ್ಷೇತ್ರವಾದ ದತ್ತಾತ್ರೇಯ ಪೀಠಕ್ಕೆ ಆಗಮಿಸಿದ ಪ್ರವಾಸಿಗರು ಬೆಟ್ಟ ಗುಡ್ಡಗಳ ತಪ್ಪಲಿನಲ್ಲಿರುವ ಧಾರ್ಮಿಕ ಕ್ಷೇತ್ರವನ್ನು ಗಬ್ಬೆಬ್ಬಿಸಿ ಮಾಂಸಾಹಾರ ಭಕ್ಷಣೆಯನ್ನು ಮಾಡಿ ಪವಿತ್ರ ನೆಲವನ್ನು ಹಾಳು ಮಾಡಿದ್ದಾರೆಂದು ಆರೋಪಿಸಿ ಬಜರಂಗದಳದ ದಕ್ಷಿಣ ಪ್ರಾಂತ ಸಂಚಾಲಕ ರಘು ಸಕಲೇಶಪುರ ವಾಗ್ದಾಳಿ ನಡೆಸಿದ್ದಾರೆ. 

ಇದನ್ನೂ ಓದಿ : ಮೂಡಿಗೆರೆ : ಮೂವರು ಅಕ್ರಮ ಗಾಂಜಾ ಸಾಗಾಟಗಾರರನ್ನು ಕಾರ್ಯಾಚರಣೆಯ ಮೂಲಕ ಸೆರೆ ಹಿಡಿದ ಪೊಲೀಸರು

ಈ ಕುರಿತು ಮಾತನಾಡಿರುವ ಅವರು  ದತ್ತ ಜಯಂತಿಯ ಸಮಯದಲ್ಲಿ ಹೋಮದ ಹೊಗೆ ಆವರಿಸಿದರೆ ಉಳಿದ ಸಮಯದಲ್ಲಿ ದತ್ತಾತ್ರೇಯ ಪೀಠದ ಆವರಣದಲ್ಲಿ  ಗೋಮಾಂಸದ ಹೊಗೆ ಆವರಿಸುತ್ತದೆ, ಪವಿತ್ರ ಜಾಗವನ್ನು ಅಪವಿತ್ರಗೊಳಿಸುತ್ತಿದ್ದರೂ ಕೂಡ ಜಿಲ್ಲಾಡಳಿತ ಹಾಗೂ ಮುಜರಾಯಿ ಇಲಾಖೆ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇರುವುದು ಖಂಡನಾರ್ಹ ಎಂದರು. 

ಮುಂದಿನ ದತ್ತ ಜಯಂತಿಯ ಸಂದರ್ಭದಲ್ಲಿ ನಡೆಯುವ ಹೋಮವನ್ನು ತಾತ್ಕಾಲಿಕ ಶೆಡ್ ನಲ್ಲಿ ಮಾಡುವುದಿಲ್ಲ ಬದಲಿಗೆ ಗುಹೆಯ ಸಮೀಪದಲ್ಲಿನ ತುಳಸೀಕಟ್ಟೆಯ ಸಮೀಪದಲ್ಲಿ ಬಜರಂಗದಳ ಮಾಡಲಿದೆ ಇದನ್ನು ತಡೆಯಲು ಸಾಧ್ಯವಿಲ್ಲ ಜಾಗದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಿದೆ ಎಂದು ವಾಗ್ದಾಳಿ ನಡೆಸಿದರು. ದತ್ತಪೀಠದ ಪಾವಿತ್ರ್ಯತೆಯನ್ನು ಹಾಳು ಮಾಡಿದವರ ವಿರುದ್ದ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದರು. 

ಚಿಕ್ಕಮಗಳೂರು ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳಿಗೂ ಈ ಕುರಿತು ಮನವಿ ನೀಡಲಾಗಿದ್ದು ಜಾಗವನ್ನು ಮಲಿನಗೊಳಿಸಿದವರ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಕೋರಲಾಗಿದೆ ಎಂದರು. 

ದತ್ತಾತ್ರೇಯ ಪೀಠಕ್ಕೆ ಆಗಮಿಸುವ ಪ್ರವಾಸಿಗರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದು ಪ್ರಕೃತಿಯು ಸಂಪೂರ್ಣವಾಗಿ ಮಲಿನವಾಗುತ್ತಿದ್ದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಬೇಕೆಂದು ಕೋರಿದ್ದಾರೆ. 

ದತ್ತಪೀಠದ ಎದುರುಭಾಗದಲ್ಲಿ ಘಟನೆಯನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿರುವ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ವಿವಾದಿತ ಸ್ಥಳದಲ್ಲಿ ನಡೆಸಿರುವ ಪೂಜೆ ಹಾಗೂ ಮಾಂಸಾಹಾರ ಭಕ್ಷಣೆಯ ವಿರುದ್ಧವಾಗಿ ಆಕ್ರೋಶ ಹೊರಹಾಕಿದ್ದಾರೆ. ಹೈಕೋರ್ಟ್ ನ ತೀರ್ಪು ಉಲ್ಲಂಘನೆ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ. 

ಪ್ರತಿಭಟನಾನಿರತರ ಮನವೊಲಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಬಜರಂಗದಳದ ದಕ್ಷಿಣ ಪ್ರಾಂತ ಸಂಯೋಜಕರಾದ ರಘು ಸಕಲೇಶಪುರ, ಬಜರಂಗದಳದ ಜಿಲ್ಲಾ ಸಂಚಾಲಕ ಶಶಾಂಕ್ ಹೇರೂರು,ಮುಖಂಡರಾದ ಆರ್.ಡಿ ಮಹೇಂದ್ರ, ಶ್ಯಾಮ್ ವಿ ಗೌಡ, ಶಶಿ ಆಲ್ದೂರು ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.