ಮೂಡಿಗೆರೆ : ಗುಳಿಗ ದೈವ ಕೊಟ್ಟ ನುಡಿಯಂತೆ ಮರದ ಕೆಳಗೆ ಗುಳಿಗ ದೈವದ ಮೂಲವಿಗ್ರಹ ಪತ್ತೆಯಾಗಿರುವ ವಿಚಾರ ವರದಿಯಾಗಿದೆ.

ಇದನ್ನೂ ಓದಿ : ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಏಪ್ರಿಲ್ 24ರಂದು ಅಲೆಕಾಡು ಇತಿಹಾಸಪ್ರಸಿದ್ಧ ಗುಳಿಗ ಕ್ಷೇತ್ರದಲ್ಲಿ ವಾರ್ಷಿಕ ಪೂಜಾ ಮಹೋತ್ಸವ  ನಡೆದಿದ್ದು ಈ ಸಂದರ್ಭದಲ್ಲಿ ನಡೆದ ಶ್ರೀ ಗುಳಿಗ ದೈವದ ದರ್ಶನದಲ್ಲಿ ಕ್ಷೇತ್ರದಿಂದ ನಾಲ್ಕು ಕಿಲೋಮೀಟರು ದೂರದಲ್ಲಿದ್ದ ಮರವೊಂದರ ಕೆಳಗೆ ವಿಗ್ರಹ ಇದೆ ಎಂದು ತಿಳಿಸಿದ್ದು ಅದರಂತೆ ಕ್ಷೇತ್ರ ಸಮಿತಿಯ ಪದಾಧಿಕಾರಿಗಳು ಮೂರು, ನಾಲ್ಕು ಕಿಲೋಮೀಟರ್ ದೂರದಲ್ಲಿ ಮರವೊಂದರ ಕೆಳಗೆ ನೋಡಿದಾಗ ಕಂಚಿನ ಮೂರ್ತಿ, ಗಂಟೆಗಳು,ಕತ್ತಿ ಮರದ ಕೆಳಗೆ ಪತ್ತೆಯಾಗಿ ಅಚ್ಚರಿ ಮೂಡಿಸಿದೆ.

ಚಾರ್ಮಾಡಿ ಘಾಟ್ ನ ಅಲೆಕಾಡು ಇತಿಹಾಸ ಪ್ರಸಿದ್ಧ ಕ್ಷೇತ್ರ, ಮೂಲವಿಗ್ರಹ ಆಲೇಖಾನ್ ಎಸ್ಟೇಟ್ ನ ಮರವೊಂದರ ಬುಡದಲ್ಲಿ ಪತ್ತೆಯಾಗಿರುವುದು ದೈವದ ನುಡಿಯಂತೆ ನಡೆದಿದೆ ಎಂದು ಭಕ್ತರು ಗುಳಿಗ ದೈವದ ಶಕ್ತಿಯನ್ನು ಭಕ್ತಿ ಭಾವದಿಂದ ಸ್ಮರಿಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಲೆಕಾಡು ಗುಳಿಗ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಚನ್ನಕೇಶವ ಎಂ.ಜೆ. ಆಲೆಕಾನ್ ನಲ್ಲಿ   ಶ್ರೀಗುಳಿಗ ದೈವದ ನುಡಿಯಂತೆ ಮೂಲವಿಗ್ರಹ ಪತ್ತೆಯಾಗಿದ್ದು ವಿಗ್ರಹವನ್ನು ಪ್ರತಿಷ್ಠಾಪಿಸುವ ಬಗ್ಗೆ  ಮುಂದಿನ ದೈವ ದರ್ಶನದ ಹೇಳಿಕೆಯಂತೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಈ ಕುರಿತು ಮಾತನಾಡಿದ ಬಣಕಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ,  ನೂರಾರು ವರ್ಷಗಳ ಇತಿಹಾಸವಿರುವ ಈ ಕ್ಷೇತ್ರದಲ್ಲಿ ಚಾಮುಂಡೇಶ್ವರಿ, ಗುಳಿಗ ದೈವ , ಬಬ್ಬುಸ್ವಾಮಿ ಮುಂತಾದ ದೈವಗಳ ಪೂಜೆ ವಿಧಿವಿಧಾನದ ಮೂಲಕ  ನಡೆಯುತ್ತಿದ್ದು ಈಗ ಮೂಲವಿಗ್ರಹ ಸಿಕ್ಕಿರುವುದು ಕ್ಷೇತ್ರದ ಮಹಿಮೆಯನ್ನು ಕಣ್ಮುಂದೆ ತಂದಿದೆ ಎಂದರು.

ತನು ಕೊಟ್ಟಿಗೆಹಾರ, ವರದಿಗಾರರು