ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಬೀಟೆ ಮರದ ನಾಟವನ್ನು ಸಾಗಿಸುತ್ತಿದ್ದ ಪಿಕಪ್ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆಯ ಮೂಲಕ ವಶಕ್ಕೆ ಪಡೆದಿದ್ದಾರೆ. ಆದರೆ ಕಳ್ಳರು ವಾಹನ ಬಿಟ್ಟು ಎಸ್ಕೇಪ್ ಆಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಹೊರವಲಯದ ಕಿಕ್ರೆ ಸಮೀಪದಲ್ಲಿ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಅಕ್ರಮವಾಗಿ ಪಿಕಪ್ ವಾಹನದಲ್ಲಿ ಸಾಗಾಟ ನಡೆಸುತ್ತಿದ್ದ ನಾಟಾವನ್ನು ಕಾರ್ಯಾಚರಣೆಯ ಮೂಲಕ ವಶಪಡಿಸಿಕೊಂಡಿದ್ದಾರೆ. ದಾಳಿಯ ಸಮಯದಲ್ಲಿ ವಾಹನವನ್ನು ಬಿಟ್ಟು ಆರೋಪಿಗಳು ಎಸ್ಕೇಪ್ ಆಗಿದ್ದು ವಾಹನವನ್ನು ಹಾಗೂ ನಾಟವನ್ನು ವಶಕ್ಕೆ ಪಡೆದಿದ್ದು, ಮರದ ನಾಟದ ಬೆಲೆ ಅಂದಾಜು 50,000 ಆಗಿದ್ದು ಸಾಗಾಟ ನಡೆಸುತ್ತಿದ್ದ ಅವಿನಾಶ್ ಹಾಗೂ ವೆಂಕಪ್ಪ ಎಂಬ ಆರೋಪಿಗಳು ಎಸ್ಕೇಪ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆರೋಪಿಗಳ ವಿರುದ್ಧ ಅರಣ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಪತ್ತೆ ಹಚ್ಚುವ ಸಲುವಾಗಿ ಬಲೆ ಬೀಸಲಾಗಿದೆ. ಈ ಹಿಂದೆಯೂ ಹಲವು ಬಾರಿ ಮರಳು ಕಳ್ಳತನದ ಕಾರಣಕ್ಕೆ ಇದೇ ವಾಹನವನ್ನು ಸೀಜ್ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ಖಚಿತ ಮಾಹಿತಿಯ ಮೇರೆಗೆ ಆರ್.ಎಫ್. ಓ ಅನಿಲ್ ಡಿಸೋಜ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆಯು ನಡೆದಿದ್ದು ಸಿಬ್ಬಂದಿಗಳಾದ ಗಿರೀಶ್, ರಮೇಶ್, ಪ್ರವೀಣ್, ಸುಬ್ರಮಣ್ಯ, ಮಹಂತೇಶ್, ಪ್ರಕಾಶ್ ಭಾಗವಹಿಸಿದ್ದರು.