ಚಿಕ್ಕಮಗಳೂರು : ನಶೆಬರುವ ವಸ್ತುಗಳನ್ನು ಸೇವಿಸಿ ಜೀಪಿನ ಟಾಪಿನ ಮೇಲೆ ಸವಾರಿ ನಡೆಸುತ್ತಿದ್ದವರು ಪೊಲೀಸರ ವಶಕ್ಕೆ 

ಪ್ರವಾಸಕ್ಕೆಂದು ಬಂದ ಯುವಕ-ಯುವತಿಯರು ತಮ್ಮ ಸುರಕ್ಷತೆಯೆಡೆಗೆ ಗಮನ ನೀಡದೆ ಬೇಕಾಬಿಟ್ಟಿಯಾಗಿ ಬೊಲೆರೋ ವಾಹನದ ಮೇಲ್ಭಾಗದಲ್ಲಿ ಕುಳಿತು ವಾಹನ ಸವಾರಿ ನಡೆಸುತ್ತಿದ್ದವರನ್ನು ಅಡ್ಡಗಟ್ಟಿ ಕಾಫಿನಾಡಿನ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂಪೂರ್ಣ ನಶೆಯಲ್ಲಿದ್ದ ಅವರನ್ನು ತಪಾಸಣೆ ನಡೆಸಿ ನಶೆಭರಿತ ವಸ್ತುಗಳನ್ನು ಸೇವಿಸುವುದು ದೃಢಪಟ್ಟ ಹಿನ್ನೆಲೆ ಎನ್ ಡಿ ಪಿ ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ವಾಹನವನ್ನು ಪೊಲೀಸರು ಸೀಜ್ ಮಾಡಿದ್ದಾರೆ.

ಚಿಕ್ಕಮಗಳೂರು : ಅಕ್ರಮವಾಗಿ ಮತಾಂತರದ ಆರೋಪ : ದೂರು ಪ್ರತಿದೂರು ದಾಖಲು 

ಕಳೆದ ಭಾನುವಾರ ಚಿಕ್ಕಮಗಳೂರಿನ ಕಟ್ಟಡವೊಂದರ ಮೇಲ್ಭಾಗದಲ್ಲಿ ಪ್ರಾರ್ಥನೆಯ ನೆಪದಲ್ಲಿ ಅಕ್ರಮವಾಗಿ ಮತಾಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಆ ಸ್ಥಳಕ್ಕೆ ಬಜರಂಗದಳದ ಕಾರ್ಯಕರ್ತರು ತೆರಳಿ ಪ್ರಶ್ನಿಸಿದ್ದರು. ಘಟನಾ ಸಂಬಂಧ ಪ್ರಾರ್ಥನೆಗೆಂದು ತೆರಳಿದ ವ್ಯಕ್ತಿ ಹಾಗೂ ಫಾಸ್ಟರ್ ಎರಡೂ ಕಡೆಯವರು ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಧರ್ಮವನ್ನು ಅವಹೇಳನ ಮಾಡಲಾಗಿದೆ, ಹಲ್ಲೆ ಮಾಡಲಾಗಿದೆ ಎಂದು ಒಂದು ಕಡೆಯವರು ದೂರು ದಾಖಲಿಸಿದ್ದರೆ ಜಾತಿನಿಂದನೆ ಮಾಡಿ ಹಲ್ಲೆ ಮಾಡಲಾಗಿದೆ ಎಂದು ಪ್ರತಿದೂರು ದಾಖಲಾಗಿದೆ. ಪೊಲೀಸರು ಇಬ್ಬರ ದೂರನ್ನು ತೆಗೆದುಕೊಂಡು ಘಟನಾ ಸಂಬಂಧ ಪರಿಶೀಲನೆ ನಡೆಸುತ್ತಿದ್ದಾರೆ.

ಕೊಪ್ಪ :  ರೋಹಿತ್ ಚಕ್ರತೀರ್ಥ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ ;  ಸುಧೀರ್ ಕುಮಾರ್ ಮುರೊಳ್ಳಿ ಆಗ್ರಹ 

ರಾಜ್ಯ ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಕೊಪ್ಪದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ಒತ್ತಾಯಿಸಿದ್ದಾರೆ. ಲೋಕದ ಜ್ಞಾನವನ್ನು ಹೊಂದದೇ ಇರುವ ವ್ಯಕ್ತಿ ರೋಹಿತ್ ಚಕ್ರತೀರ್ಥ ಅವರು ಬಿಜೆಪಿ ಮತ ಬ್ಯಾಂಕ್ ಗೆ ಪೂರಕವಾಗುವಂತೆ ಸಮಾಜದಲ್ಲಿ ದ್ವೇಷ ಬಿತ್ತುವ  ಕೆಲಸವನ್ನು ಮಾಡುತ್ತಿದ್ದಾರೆ. ಅವರಿಗೆ ರಾಷ್ಟ್ರಕವಿ ಕುವೆಂಪು ಅವರ ವಿಚಾರಗಳು ಬೇಕಿಲ್ಲ, ಇಂತಹ ವಿಷಬೀಜ ಬಿತ್ತುವ ವ್ಯಕ್ತಿಗಳನ್ನು ಅಂತಹ ದೊಡ್ಡ ಸ್ಥಾನದಲ್ಲಿ ಕೂರಿಸಿ ಪಠ್ಯ ಪರಿಷ್ಕರಣೆ ನಡೆಸುವಂತೆ ಮಾಡಿರುವುದು ಸರಿಯಲ್ಲ ಎಂಬುದಾಗಿ ರೋಹಿತ್ ಚಕ್ರತೀರ್ಥ ವಿರುದ್ಧ ವಾಗ್ದಾಳಿ ನಡೆಸಿದರು. ಹಾಗೂ ಕ್ರಮಕ್ಕೆ ಆಗ್ರಹಿಸಿದರು.

ಶೃಂಗೇರಿ : ಮಕ್ಕಿಮನೆ ಸಮೀಪ ರಸ್ತೆ ಅಪಘಾತ 

ಶೃಂಗೇರಿಯ ಮಕ್ಕಿಮನೆ ಸಮೀಪ ರಸ್ತೆ ಅವಘಡ ಸಂಭವಿಸಿದ್ದು ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಟೆಲಿಫೋನ್ ಕಂಬಕ್ಕೆ ಗುದ್ದಿರುವ ಘಟನೆ ನಡೆದಿದೆ. ಘಟನೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಟೆಲಿಫೋನ್ ಕಂಬಕ್ಕೆ ಗುದ್ದಿದ ಪರಿಣಾಮ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳೀಯರು ಸ್ಥಳಕ್ಕೆ ಧಾವಿಸಿ ಚಾಲಕನನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕಾರ ನೀಡಿದ್ದಾರೆ.

ಮೂಡಿಗೆರೆ :  ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ರೈತ ಹಾಗೂ ಎರಡು ಹಸುಗಳ ದುರ್ಮರಣ 

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯೊಂದನ್ನು ಸ್ಪರ್ಶಿಸಿ ದನ ಕಾಯುತ್ತಿದ್ದ ವ್ಯಕ್ತಿ ಹಾಗೂ ಎರಡು ದನಗಳು ಅಸುನೀಗಿರುವ ದುರ್ಘಟನೆ ಮೂಡಿಗೆರೆ ತಾಲೂಕಿನ ಬಿಳಗಲಿ ಗ್ರಾಮದಲ್ಲಿ ನಡೆದಿದೆ. ದನ ಮೇಯಿಸುತ್ತಿದ್ದ 55 ವರ್ಷ ಪ್ರಾಯದ ವ್ಯಕ್ತಿ ತಿಮ್ಮಪ್ಪ ದಾರುಣವಾಗಿ ಅಂತ್ಯ ಕಂಡಿದ್ದಾರೆ. ವ್ಯಕ್ತಿಯೊಂದಿಗೆ ಎರಡು ದನಗಳು ಕೂಡ ದಾರುಣವಾಗಿ ಅಂತ್ಯ ಕಂಡಿದೆ.ಈ ಕುರಿತು ಮೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ಘಟನೆಗೆ ನೇರ ಕಾರಣ ಮೆಸ್ಕಾಂ ಎಂದು ಆರೋಪಿಸಿದ್ದಾರೆ. ಈ ಘಟನೆಯು ಮೂಡಿಗೆರೆಯ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಾಸನ : ಹಿಂದೂ ದೇವರ ವಿಗ್ರಹಗಳನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳು 

ಪುರಾತನ ದೇವಾಲಯ ಹಾಗೂ ಇತಿಹಾಸವನ್ನು ಹೊಂದಿರುವ ಹಾಸನ ಜಿಲ್ಲೆಯಲ್ಲಿ ಹಿಂದೂಗಳ ಭಾವನೆಯನ್ನು ಹೊಂದಿರುವ ದೇವರ ವಿಗ್ರಹಗಳನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಮಾಲೆಕಲ್ಲು ತಿರುಪತಿ ದೇವಾಲಯದ ವಸ್ತುಸಂಗ್ರಹಾಲಯದಲ್ಲಿ ನಿರ್ಮಾಣವಾಗುತ್ತಿದ್ದ ಹಾಗೂ ನಿರ್ಮಾಣವಾಗಿದ್ದ ಕೆಲ ಹಿಂದೂ ದೇವರುಗಳ ಮೂರ್ತಿಗಳನ್ನು ಕಿಡಿಗೇಡಿಗಳು ಭಗ್ನಗೊಳಿಸಿ ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಆರ್ ಶ್ರೀನಿವಾಸ್ ಗೌಡ ಸೇರಿದಂತೆ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ಆರೋಪಿಗಳ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಶಿವಮೊಗ್ಗ : ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ 

ಕಳೆದ ವಾರ ಮನೆಯಿಂದ ನಾಪತ್ತೆಯಾಗಿದ್ದ ಯುವಕನೊಬ್ಬನ ಶವ ಪತ್ತೆಯಾಗಿದೆ. ಸ್ಮಶಾನದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ನಡೆದಿದೆ. ಚನ್ನಗಿರಿ ತಾಲೂಕಿನ ಕಾಗತ್ತೂರು ಗ್ರಾಮದ ಎಂ.ಕೆ.ಸ್ವಾಮಿ(27) ಮೃತ ವ್ಯಕ್ತಿ. ಈತ ಆಗುಂಬೆ ಗ್ರಾಮದ ಸ್ಮಶಾನದಲ್ಲಿ ನೇಣಿಗೆ ಶರಣಾಗಿದ್ದಾನೆ. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡಗು : ಬುರ್ಕಾ ಧರಿಸಿ ಯುವಕರ ಮಸ್ತ್ ಮಸ್ತ್ ಡ್ಯಾನ್ಸ್ ; ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ

ಕೊಡಗಿನ ಪಶ್ಚಿಮ ಕೊಳಕೇರಿ ಗ್ರಾಮಾಭಿವೃದ್ಧಿ ಸಮಿತಿ ವತಿಯಿಂದ ಮೇ 28 ಮತ್ತು ಮೇ 29ರಂದು ವಜ್ರಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬುರ್ಖಾ ಧರಿಸಿದ ಕೆಲವು ಯುವಕರು ಕೊಡವ ವಾಲಗ ಸಂಗೀತಕ್ಕೆ ನೃತ್ಯ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಇದು ತೀವ್ರ ವಿವಾದಕ್ಕೆ ಒಳಗಾದ ಕಾರಣ ಕಾರ್ಯಕ್ರಮದ ಸಂಘಟಕರು ಸೋಮವಾರದಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಕ್ಷಮೆಯಾಚಿಸಿದ್ದು "ಮನರಂಜನಾ ಕಾರ್ಯಕ್ರಮದ ಭಾಗವಾಗಿ ಕೆಲವು ಮಕ್ಕಳು ಬುರ್ಖಾ ಧರಿಸಿ ನೃತ್ಯ ಮಾಡಿದ್ದರು ಆದರೆ ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಇರಲಿಲ್ಲ " ಎಂದು ಸಮಿತಿಯ ಅಧ್ಯಕ್ಷರು ಹೇಳಿದ್ದರು.ಆದರೂ ಸಹ ವಿವಾದ ತಣ್ಣಗಿಗುತ್ತಿಲ್ಲ. ಈ ಮಧ್ಯೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕವು ಕೂಡ ಘಟನೆಯ ಕುರಿತಾಗಿ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ.