ಹಾಸನ : (ನ್ಯೂಸ್ ಮಲ್ನಾಡ್ ವರದಿ) ಆನೆಯೊಂದಕ್ಕೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗೂರ್ಗಿಹಳ್ಳಿ ಮಲಸವರ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಆನೆಯನ್ನು ಯಾರೋ ದುಷ್ಕರ್ಮಿಗಳು ಬಂದೂಕಿನಿಂದ ಹೊಡೆದು ಹತ್ಯೆಮಾಡಿದ್ದಾರೆ. 

 ಇದನ್ನೂ ಓದಿ :  ಶೃಂಗೇರಿ/ಕೊಪ್ಪ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ 218 ಮರಗಳ ಕಡಿತಕ್ಕೆ ಸಾರ್ವಜನಿಕ ಅಭಿಪ್ರಾಯಕ್ಕೆ ಸಭೆ

ಸೈಯದ್ ಸತ್ತರ್ ಎಂಬುವವರ ತೋಟದಲ್ಲಿ ಕಾಡಾನೆ ಶವ ದೊರೆತಿದ್ದು 15 ವರ್ಷದ ಗಂಡಾನೆ ಗುಂಡೇಟಿನಿಂದ ಮೃತಪಟ್ಟಿದೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಹಾಸನದ ಅರೇಹಳ್ಳಿ ಭಾಗದಲ್ಲಿ ನಾಲ್ವರು ಕಾರ್ಮಿಕರು ಆನೆ ದಾಳಿಗೆ ಬಲಿಯಾಗಿದ್ದರು. ಈ ಘಟನೆಯು ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಈ ಸಂಬಂಧ ಪರಿಶೀಲನೆ ನಡೆಸುತ್ತಿದ್ದಾರೆ. 

ಕಳಸ, ಮೂಡಿಗೆರೆ, ಹಾಸನ ಸೇರಿದಂತೆ ಅನೇಕ ಭಾಗಗಳಲ್ಲಿ ಆನೆ ದಾಳಿಯು ವಿಪರೀತವಾಗಿದ್ದು ಅನೇಕರ ಮೇಲೆ ಆನೆ ದಾಳಿ ನಡೆಸಿ ಬಲಿ ಪಡೆದುಕೊಂಡಿದೆ. ಆನೆ ದಾಳಿಯಿಂದಾಗಿ ರೈತರು ಕಷ್ಟಪಟ್ಟು ಬೆಳೆಸಿದ ಬೆಳೆಯೂ ಕೂಡಾ ಹಾನಿಯಾಗಿದ್ದು ರೈತರು ಬೆಳೆ ರಕ್ಷಿಸಿಕೊಳ್ಳುವ ಸಲುವಾಗಿ ಪರದಾಡುತ್ತಿದ್ದಾರೆ. ಪ್ರಸ್ತುತ ಹಾಸನದ ಅರೇಹಳ್ಳಿ ಭಾಗದಲ್ಲಿ 30 ಕಾಡಾನೆಗಳು ಬೀಡುಬಿಟ್ಟಿದ್ದು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಈ ಸಂಬಂಧ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು ಇನ್ನಷ್ಟೇ ಹೆಚ್ಚಿನ ಮಾಹಿತಿಗಳು ಲಭ್ಯವಾಗಬೇಕಿದೆ.

ಪರವಾನಗಿ ಹೊಂದದೇ ಬಂದೂಕು ರಿಪೇರಿ ನಡೆಸುತ್ತಿದ್ದ ವ್ಯಕ್ತಿ ಸೆರೆ

ಶಿವಮೊಗ್ಗ :  ಪರವಾನಗಿ ಹೊಂದದೇ ಬಂದೂಕುಗಳನ್ನು ರಿಪೇರಿ ನಡೆಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಆತನ ಬಳಿಯಿದ್ದ ಬಂದೂಕುಗಳನ್ನು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಶಂಕರಘಟ್ಟ ನಿವಾಸಿ ಪಾಲಾಕ್ಷಪ್ಪ ಬಂಧಿತ ಆರೋಪಿ. ಪಾಲಾಕ್ಷಪ್ಪ ಪರವಾನಗಿ ಹೊಂದದೇ ಮನೆಯಲ್ಲಿಯೇ ಬಂದೂಕುಗಳ ರಿಪೇರಿ ನಡೆಸುತ್ತಿದ್ದ ಎಂಬ ಖಚಿತ ಮಾಹಿತಿಯನ್ನು ಪಡೆದ ಪೊಲೀಸರು ದಾಳಿಯ ಮೂಲಕ ಕಾರ್ಯಾಚರಣೆ ನಡೆಸಿದ್ದಾರೆ. 

ಪೊಲೀಸರ ಕಾರ್ಯಾಚರಣೆ ಸಂದರ್ಭದಲ್ಲಿ ಅಕ್ರಮವಾಗಿ ಆರೋಪಿ ರಿಪೇರಿ ನಡೆಸುತ್ತಿದ್ದ 09 ನಾಡ ಬಂದೂಕುಗಳು ಪೊಲೀಸರಿಗೆ ದೊರೆತಿದೆ. ಬಂದೂಕುಗಳನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಯನ್ನು ಸಹ ಬಂಧಿಸಿದ್ದಾರೆ.

ಬಂಧಿತನ ಮೇಲೆ ಆಯುಧ ಕಾಯ್ದೆಯಡಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ದೊರೆತಿದೆ.