ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ದಾಳಿ ಮಾಡಿರುವ ಪೊಲೀಸರು ಭಾರಿ ಪ್ರಮಾಣದ ಕೊಳೆ ನಾಶ ಮಾಡಿ ಕಳ್ಳಭಟ್ಟಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : ಕಾಫಿನಾಡಿನಲ್ಲಿ ಮಾರಕಾಸ್ತ್ರಗಳ ಸದ್ದು ; ಬೈಕ್ ಚಾಲನೆ ಮಾಡುತ್ತಿದ್ದಾತನನ್ನು ಕಡಿದು ಎಸ್ಕೇಪ್ ಆದ ದುಷ್ಕರ್ಮಿಗಳು

ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆಗಿಳಿದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸರು ಕಾಫಿ ತೋಟದಲ್ಲಿ ಅಕ್ರಮವಾಗಿ ತಯಾರಿಕೆ ನಡೆಸುತ್ತಿದ್ದ ಕಳ್ಳಭಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ.

ಕಳ್ಳಭಟ್ಟಿ ತಯಾರಿಕೆಗಾಗಿ ತಯಾರಿಸಿದ 100 ಲಿಟರ್ ಕೊಳೆಯನ್ನು ನಾಶ ಮಾಡಿರುವ ಪೊಲೀಸರು, ಎರಡು ಲೀಟರ್ ಕಳ್ಳಭಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಕಳ್ಳಭಟ್ಟಿಯನ್ನು ತಯಾರಿ ಮಾಡುತ್ತಿದ್ದ ಕಾಳಿಕಟ್ಟೆ ವಾಸಿ ಸುರೇಶ್ ಪರಾರಿಯಾಗಿದ್ದಾನೆ.

ಈ ಕಾರ್ಯಾಚರಣೆಯಲ್ಲಿ ಮೂಡಿಗೆರೆಯ ಬಾಳೂರು ಠಾಣಾ ಸಬ್ ಇನ್ಸ್ಪೆಕ್ಟರ್ ಸಿಸಿ ಪವನ್ ಕುಮಾರ್, ಠಾಣೆಯ ಪೊಲೀಸರಾದ ಮಹೇಶ್, ವಸಂತ್, ಪ್ರವೀಣ್, ಮನು, ಸತೀಶ್, ಅಭಿಜಿತ್, ಓಂಕಾರ, ಹೇಮಂತ್, ಪ್ರದೀಪ್ ಭಾಗವಹಿಸಿದ್ದರು. ಘಟನೆಯ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ತನು ಕೊಟ್ಟಿಗೆಹಾರ, ವರದಿಗಾರರು

ಬಸ್ಸು ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ; ಸ್ಥಳದಲ್ಲೇ ಕಾರು ಚಾಲಕನ ದುರ್ಮರಣ

ತರೀಕೆರೆ :ಬಸ್ ಹಾಗೂ ಓಮಿನಿ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಓಮಿನಿ ಕಾರಿನ ಚಾಲಕ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ತರೀಕೆರೆಯಲ್ಲಿ ನಿನ್ನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ ಹಳ್ಳಿಯ ಜಿಲ್ಲಾ ಗಡಿಯಲ್ಲಿ ಖಾಸಗೀ ಬಸ್ಸು ಹಾಗೂ ಓಮಿನಿ ಕಾರಿನ ನಡುವೆ ಸಂಭವಿಸಿದ ಈ ರಸ್ತೆ ಅಪಘಾತದಲ್ಲಿ ಓಮಿನಿ ಕಾರನ್ನು ಚಾಲನೆ ಮಾಡುತ್ತಿದ್ದ ಚಾಲಕ ಸ್ಥಳದಲ್ಲೇ ದುರ್ಮರಣವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿ (42) ವರ್ಷ ಪ್ರಾಯದ ಮೂರ್ತಿ ಎಂದು ಗುರುತಿಸಲಾಗಿದೆ. 

ಭದ್ರಾವತಿಯಿಂದ ತರೀಕೆರೆಯ ಸಂಬಂಧಿಕರ ಮನೆಗೆ ತೆರಳುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಓಮಿನಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಚಾಲಕ ದಾರುಣವಾಗಿ ಅಂತ್ಯ ಕಂಡಿದ್ದಾನೆ. ಅಪಘಾತ ಸಂಭವಿಸಿದ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿ ಘಟನಾ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಭೀಕರ ರಸ್ತೆ ಅಪಘಾತದಲ್ಲಿ ವ್ಯಕ್ತಿಯನ್ನು ಕಳೆದುಕೊಂಡಿರುವ ಕುಟುಂಬಸ್ಥರು ಹಾಗೂ ಅವರ ಪರಿಚಯಸ್ಥರು ಅತೀವವಾದ ನೋವನ್ನು ವ್ಯಕ್ತಪಡಿಸಿದ್ದಾರೆ.