ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಎಸ್.ಕೆ ಬಾರ್ಡರ್ ಘಾಟ್ ನ ತಿರುವಿನಲ್ಲಿ ವಾಹನವೊಂದು ಉರುಳಿದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು,  ಕೆಲ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಪ್ರಥಮ ಪಿಯುಸಿ ವಿದ್ಯಾರ್ಥಿನಿ

ಹೆಚ್ಚಿನ ತಿರುವುಗಳನ್ನು ಹೊಂದಿರುವ ಕೆರೆಕಟ್ಟೆ-ಎಸ್.ಕೆ ಬಾರ್ಡರ್ ಮಾರ್ಗದಲ್ಲಿ ಈ ಅವಘಡ ಸಂಭವಿಸಿದ್ದು, ಬೇರೆಡೆಯಿಂದ ಆಗಮಿಸಿದ್ದ ಪ್ರವಾಸಿಗರ ಟೆಂಪೋ ಟ್ರಾವೆಲರ್ ವಾಹನವು ಉರುಳಿದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ವಾಹನದಲ್ಲಿದ್ದ ಅನೇಕರು ಗಾಯಗೊಂಡಿದ್ದರು. ಈ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ಸಂಚಾರ ನಡೆಸುತ್ತಿದ್ದ ಕೆಲ ವಾಹನ ಸವಾರರು ಅಪಘಾತದಲ್ಲಿ ಗಾಯಗೊಂಡವರನ್ನು ವಾಹನದಿಂದ ಮೇಲಕ್ಕೆತ್ತುವಲ್ಲಿ ಸಹಕರಿಸಿದ್ದಾರೆ.

ಈ ಮಾರ್ಗದಲ್ಲಿ ಅನೇಕ ರಸ್ತೆ ಅವಘಡಗಳು ಸಂಭವಿಸಿದ್ದು ಕಿರುದಾದ ಹಾಗೂ ಅತೀ ಸಣ್ಣದಾದ ತಿರುವುಗಳನ್ನು ಹೊಂದಿದ್ದು, ಶೃಂಗೇರಿ, ಕಳಸ, ಕುದುರೆಮುಖ ಮಾರ್ಗಗಳಿಂದ ಈ ರಸ್ತೆಯಲ್ಲಿ ಸಂಚಾರ ನಡೆಸುವ ಪ್ರವಾಸಿಗರು ಅತೀ ಹೆಚ್ಚಿನ ಜಾಗರೂಕತೆಯನ್ನು ವಹಿಸಿ ಸಂಚಾರ ಮಾಡಬೇಕೆಂದು ತಿಳಿಸಲಾಗಿದೆ. 

ಈ ಅವಘಡದಲ್ಲಿ ವಾಹನವು ಮಗುಚಿದ ಪರಿಣಾಮ ಸಂಪೂರ್ಣ ಜಖಂಗೊಂಡಿದ್ದು, ವಾಹನದೊಳಗಿದ್ದ ವಸ್ತುಗಳು ಹಾನಿಗೀಡಾಗಿದೆ. ವಾಹನದಲ್ಲಿದ್ದವರನ್ನು ಧಾರವಾಡ ಮೂಲದವರೆಂದು ಗುರುತಿಸಲಾಗಿದೆ. ವಾಹನದಲ್ಲಿ 16 ಜನ ಪ್ರಯಾಣಿಕರಿದ್ದು, ಮೃತಪಟ್ಟ ವ್ಯಕ್ತಿಯನ್ನು ಹಾವೇರಿ ಮೂಲದ ಹೇಮಂತ್ ಎಂದು ಗುರುತಿಸಲಾಗಿದೆ. ಉಳಿದ ಗಾಯಾಳುಗಳು ಕಾರ್ಕಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೂಡ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡುವಲ್ಲಿ ಸಹಾಯ ಮಾಡಿದ್ದಾರೆ.

ಈ ಭಾಗದಲ್ಲಿ ಸಂಚಾರ ನಡೆಸುವ ವಾಹನ ಸವಾರರು ತನಿಖಾ ಠಾಣೆಗಳಲ್ಲಿ ಇಲಾಖೆಯು ನಿಗದಿಪಡಿಸಿರುವ ವಾಹನದ ವೇಗದ ಮಿತಿಯನ್ನು ಪಾಲಿಸಿ ಸಂಚರಿಸಬೇಕು, ಅತೀವೇಗದ ವಾಹನ ಸಂಚಾರ ಈ ರೀತಿಯ ಅವಘಡಗಳಿಗೆ ಕಾರಣವಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. 

ಅಕ್ರಮವಾಗಿ ಬೀಟೆ ನಾಟ ಸಾಗಿಸುತ್ತಿದ್ದಾಗ ಅಧಿಕಾರಿಗಳಿಂದ ದಾಳಿ

ಶೃಂಗೇರಿ : ಅಕ್ರಮವಾಗಿ ಬೀಟೆ ಮರದ ನಾಟವನ್ನು ಸಾಗಿಸುತ್ತಿದ್ದ ಪಿಕಪ್ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆಯ ಮೂಲಕ ವಶಕ್ಕೆ ಪಡೆದಿದ್ದಾರೆ. ಆದರೆ ಕಳ್ಳರು ವಾಹನ ಬಿಟ್ಟು ಎಸ್ಕೇಪ್ ಆಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಹೊರವಲಯದ ಕಿಕ್ರೆ ಸಮೀಪದಲ್ಲಿ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಅಕ್ರಮವಾಗಿ ಪಿಕಪ್ ವಾಹನದಲ್ಲಿ ಸಾಗಾಟ ನಡೆಸುತ್ತಿದ್ದ ನಾಟಾವನ್ನು ಕಾರ್ಯಾಚರಣೆಯ ಮೂಲಕ ವಶಪಡಿಸಿಕೊಂಡಿದ್ದಾರೆ. ದಾಳಿಯ ಸಮಯದಲ್ಲಿ ವಾಹನವನ್ನು ಬಿಟ್ಟು ಆರೋಪಿಗಳು ಎಸ್ಕೇಪ್ ಆಗಿದ್ದು ವಾಹನವನ್ನು ಹಾಗೂ ನಾಟವನ್ನು ವಶಕ್ಕೆ ಪಡೆದಿದ್ದು, ಮರದ ನಾಟದ ಬೆಲೆ ಅಂದಾಜು 50,000 ಆಗಿದ್ದು ಸಾಗಾಟ ನಡೆಸುತ್ತಿದ್ದ ಕಾನುವಳ್ಳಿ ಅವಿನಾಶ್ ಹಾಗೂ ವೆಂಕಪ್ಪ ಎಂಬ ಆರೋಪಿಗಳು ಎಸ್ಕೇಪ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆರೋಪಿಗಳ ವಿರುದ್ಧ ಅರಣ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಪತ್ತೆ ಹಚ್ಚುವ ಸಲುವಾಗಿ ಬಲೆ ಬೀಸಲಾಗಿದೆ. ಈ ಹಿಂದೆಯೂ ಹಲವು ಬಾರಿ ಮರಳು ಕಳ್ಳತನದ ಕಾರಣಕ್ಕೆ ಇದೇ ವಾಹನವನ್ನು ಸೀಜ್ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ಖಚಿತ ಮಾಹಿತಿಯ ಮೇರೆಗೆ ಆರ್.ಎಫ್. ಓ ಅನಿಲ್ ಡಿಸೋಜ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆಯು ನಡೆದಿದ್ದು ಸಿಬ್ಬಂದಿಗಳಾದ ಗಿರೀಶ್, ರಮೇಶ್, ಪ್ರವೀಣ್, ಸುಬ್ರಮಣ್ಯ, ಮಹಂತೇಶ್, ಪ್ರಕಾಶ್ ಭಾಗವಹಿಸಿದ್ದರು.