ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಮಳೆಗಾಲ ಸಮೀಪಿಸುತ್ತಿದ್ದಂತೆಯೆ ಹೆಚ್ಚಾಗಿ ಕೃಷಿ ಆಧಾರಿತ ಚಟುವಟಿಕೆಗಳು ಆರಂಭವಾಗುವ ಕಾರಣ ರಸಗೊಬ್ಬರಗಳ ಉತ್ಕೃಷ್ಟತೆ ಹಾಗೂ ಅದರ ಸತ್ವ ಪರೀಕ್ಷೆಯನ್ನು ಚಿಕ್ಕಮಗಳೂರಿನಲ್ಲಿ ದಿಢೀರ್ ದಾಳಿಯ ಮೂಲಕ ಕೃಷಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಚಿಕ್ಕಮಗಳೂರು ನಗರದ ವಿವಿಧ ರಸಗೊಬ್ಬರ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ನಿಯಮ ಉಲ್ಲಂಘನೆ ನಡೆಸಿ ವ್ಯಾಪಾರ ನಡೆಸುತ್ತಿದ್ದ ಒಂದು ಮಳಿಗೆಯನ್ನು ಬಂದ್ ಮಾಡಿಸಿದರು.
ಇದನ್ನೂ ಓದಿ : ತ್ರೈಮಾಸಿಕ ನಿರ್ವಹಣೆ ಹಾಗೂ ಲೈನ್ ಸರಿಪಡಿಸುವ ಸಲುವಾಗಿ ನಾಳೆ ಈ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ
ಚಿಕ್ಕಮಗಳೂರು ನಗರದ ಕೆ.ಎಂ ರಸ್ತೆಯಲ್ಲಿರುವ ಗೊಬ್ಬರ ಮಾರಾಟಗಾರರು ರಸಗೊಬ್ಬರದ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿ ವ್ಯಾಪಾರ ನಡೆಸಿದ ಕಾರಣ ಹಾಗೂ ಈ ಕುರಿತಾದ ದಾಖಲೆಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡದ ಕಾರಣ ಸ್ಟಾಪ್ ಸೇಲ್ ನೊಟೀಸ್ ನ ಮೂಲಕ ವ್ಯಾಪಾರಕ್ಕೆ ತಡೆ ಹಿಡಿದು ಮಳಿಗೆಯನ್ನು ಒಂದು ದಿನದ ಮಟ್ಟಿಗೆ ಮುಚ್ಚಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇದಲ್ಲದೇ ನಗರದ ಬಹುತೇಕ ರಸಗೊಬ್ಬರಗಳ ಮಳಿಗೆಗೆ ಭೇಟಿ ನೀಡಿದ ಅವರು ರಸಗೊಬ್ಬರಗಳ ಗುಣಮಟ್ಟ ಹಾಗೂ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲನೆ ನಡೆಸಿದರು. ನಿಯಮ ಉಲ್ಲಂಘನೆ ನಡೆಸಿ ಯಾವುದಾದರೂ ರಸಗೊಬ್ಬರಗಳ ಅಂಗಡಿಯವರು ಮಾರಾಟ ನಡೆಸುವುದು ಮುಂತಾದವುಗಳು ಕಂಡುಬಂದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಈ ಕಾರ್ಯಾಚರಣೆಯಲ್ಲಿ ಚಿಕ್ಕಮಗಳೂರು ಉಪವಿಭಾಗದ ಉಪ ಕೃಷಿ ನಿರ್ದೇಶಕರಾದ ಮೋಹನ್ ದಾಸ್, ಜಾಗೃತ ದಳದ ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶ್ ಚವಾಣ್, ಚಿಕ್ಕಮಗಳೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಸುರೇಶ್ ಭಾಗಿಯಾಗಿದ್ದರು.



0 Comments