ಕೊಡಗಿನ ಪಶ್ಚಿಮ ಕೊಳಕೇರಿ ಗ್ರಾಮಾಭಿವೃದ್ಧಿ ಸಮಿತಿ ವತಿಯಿಂದ ಮೇ 28 ಮತ್ತು ಮೇ 29ರಂದು ವಜ್ರಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬುರ್ಖಾ ಧರಿಸಿದ ಕೆಲವು ಯುವಕರು ಕೊಡವ ವಾಲಗ ಸಂಗೀತಕ್ಕೆ ನೃತ್ಯ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ :  ವಿದ್ಯುತ್ ತಂತಿ ತಗುಲಿ ರೈತ ಹಾಗೂ ಎರಡು ಹಸುಗಳ ಸಾವು

ಇದು ತೀವ್ರ ವಿವಾದಕ್ಕೆ ಒಳಗಾದ ಕಾರಣ ಕಾರ್ಯಕ್ರಮದ ಸಂಘಟಕರು ಸೋಮವಾರದಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಕ್ಷಮೆಯಾಚಿಸಿದ್ದು "ಮನರಂಜನಾ ಕಾರ್ಯಕ್ರಮದ ಭಾಗವಾಗಿ ಕೆಲವು ಮಕ್ಕಳು ಬುರ್ಖಾ ಧರಿಸಿ ನೃತ್ಯ ಮಾಡಿದ್ದರು ಆದರೆ ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಇರಲಿಲ್ಲ " ಎಂದು ಸಮಿತಿಯ ಅಧ್ಯಕ್ಷರು ಹೇಳಿದ್ದರು. ಆದರೂ ಸಹ ವಿವಾದ ತಣ್ಣಗಿಗುತ್ತಿಲ್ಲ.

ಕಾಂಗ್ರೆಸ್ ಅಸಮಾಧಾನ:

ಈ ನಡುವೆ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ ಈ ಕಾರ್ಯಕ್ರಮದಲ್ಲಿ ಮುಸಲ್ಮಾನರ ಸಾಂಪ್ರದಾಯಿಕ ಬುರ್ಕಾ ಹಾಗೂ ಶಿರವಸ್ತ್ರವನ್ನು ಧರಿಸಿ ನರ್ತಿಸುವ ಮೂಲಕ ಮುಸಲ್ಮಾನರ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿದೆ. ಬುರ್ಕಾ ಮತ್ತು ಶಿರವಸ್ತ್ರವನ್ನು ಧರಿಸಿ ವೇದಿಕೆಯಲ್ಲಿ ನರ್ತಿಸಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧಾರ್ಮಿಕ ಭಾವನೆಗೆ ನೋವುಂಟು ಮಾಡಿದವರ ವಿರುದ್ಧ ಸ್ವಯಂ ಪ್ರಕರಣ ದಾಖಲು ಮಾಡಿಕೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ತಪ್ಪಿದಲ್ಲಿ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.