ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್ ಬೊಮ್ಮಾಯಿ ಅವರು ವಿವಿಧ ಅಭಿವೃದ್ದಿ ಕಾಮಗಾರಿಗಳ ಯೋಜನೆಗೆ ಚಾಲನೆ ನೀಡುವ ಸಲುವಾಗಿ ಕಾಫಿನಾಡು ಚಿಕ್ಕಮಗಳೂರಿಗೆ ಆಗಮಿಸಲಿದ್ದಾರೆ. 

ಇದನ್ನೂ ಓದಿ : ಬಾಳೆಹೊನ್ನೂರು : ಎರಡನೇ ಮದುವೆಯಾದ ಮಹಿಳೆ ಮೇಲೆ ಗಂಡ ಹಾಗೂ ಮಕ್ಕಳಿಂದ ಕಿರುಕುಳ ಆರೋಪ ; ಪ್ರಕರಣ ದಾಖಲು

ಚಿಕ್ಕಮಗಳೂರಿಗೆ ಮೇ 18 ರಂದು ಆಗಮಿಸಲಿರುವ ಮಾನ್ಯ ಮುಖ್ಯಮಂತ್ರಿಗಳು ವಿವಿಧ ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ಆಗಮಿಸುವ ಅವರು ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ (AIT) ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರದಲ್ಲಿ ಲೋಕೋಪಯೋಗಿ ಇಲಾಖೆಯಿಂದ  9.8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಅರಣ್ಯ ಭವನ ಸೇರಿದಂತೆ  ಇನ್ನೂ ಅನೇಕ ಅಭಿವೃದ್ದಿ ಕಾರ್ಯಗಳ ಉದ್ಘಾಟನೆ ನೆರವೇರಿಸಲಿದ್ದಾರೆ. 

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಸುಮಾರು 85 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ 16 ರಸ್ತೆಗಳನ್ನು ಶಂಕು ಸ್ಥಾಪನೆ ಮಾಡಲಿದ್ದಾರೆ, ಶೃಂಗೇರಿಯಲ್ಲಿ 24.22 ಕೋಟಿ ರೂ, ಕಳಸದಲ್ಲಿ 22.67 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳನ್ನು ಉದ್ಘಾಟಿಸಲಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ರೂ 4.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಪೋಸ್ಟ್ ಮೆಟ್ರಿಕ್ ಬಾಲಕರ ವಸತಿನಿಲಯದ ಉದ್ಘಾಟನೆ , ಲೋಕೋಪಯೋಗಿ ಇಲಾಖೆಯಿಂದ ಪ್ರತಿ ಗ್ರಾಮದಲ್ಲಿ ಒಟು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸಮುದಾಯ ಭವನಗಳಿಗೆ ವರ್ಚುವಲ್ ಆಗಿ  ಚಾಲನೆ  ನೀಡಲಿರುವ ಅವರು ಸರ್ಕಾರದಿಂದ ಮಂಜೂರಾಗಿರುವ ಒಟ್ಟು 14.5ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ 04 ಸೇತುವೆಗಳಿಗೆ ಶಂಕು ಸ್ಥಾಪನೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು. 

ಚಿಕ್ಕಮಗಳೂರು ಜಿಲ್ಲೆಗೆ ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆ ಭದ್ರತೆ ಹಾಗೂ ಕಾರ್ಯಕ್ರಮಗಳ ಕುರಿತಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಇಂದು ಅಧಿಕಾರಿಗಳ ಸಭೆ ನಡೆದಿದ್ದು ಈ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಸೇರಿದಂತೆ ಅನೇಕ ಅಧಿಕಾರಿಗಳು ಪಾಲ್ಗೊಂಡಿದ್ದರು.