ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಜನಶಕ್ತಿ ಸಂಘಟನೆಯ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಪ್ರಥಮ ಮಲೆನಾಡು ಪ್ರಾಂತ್ಯದ ಪ್ರಥಮ ಸಮ್ಮೇಳನವು ಇಂದು ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆಯಿತು. ಶೃಂಗೇರಿ ಸುತ್ತಮುತ್ತಲಿನ ಭಾಗದ ಅನೇಕ ಜನರು ಈ ಸಮ್ಮೇಳನದಲ್ಲಿ ಪಾಲ್ಗೊಂಡರು.

ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಜನರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತಾದ ಚಿಂತನ ಮಂಥನವೇ ಮಲೆನಾಡು ಪ್ರಾಂತ್ಯ ಪ್ರಥಮ ಸಮ್ಮೇಳನ. ಈ ಸಮ್ಮೇಳನದಲ್ಲಿ ಮಲೆನಾಡು ಭಾಗದ ಸಮಸ್ಯೆಗಳ ಕುರಿತಾಗಿ ಆಹ್ವಾನಿತ ಅನೇಕ ಗಣ್ಯರು ಸವಿಸ್ತಾರವಾಗಿ ಮಾತನಾಡಿದರು ಹಾಗೂ ಮುಂಬರುವ ದಿನಗಳಲ್ಲಿ ಶೀಘ್ರವಾಗಿ ಈ ಸಮಸ್ಯೆಯನ್ನು ಪರಿಹರಿಸುವಂತೆ ಆಗ್ರಹಿಸಿದರು. 

ಈ ಕುರಿತು ಮಾತನಾಡಿದ ಪ್ರಖ್ಯಾತ ಚಿಂತಕ ಶಿವಸುಂದರ್ ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುವ ಕಾರ್ಯ ನಡೆಯುತ್ತಿದೆ, ನಮ್ಮನ್ನು ಆಳುತ್ತಿರುವುದು ಜನಶಕ್ತಿಯಲ್ಲ ಧನಶಕ್ತಿ, ಹಣಕ್ಕೆ ನೀಡುತ್ತಿರುವ ಕಿಮ್ಮತ್ತನ್ನು ಜನರ ಅಭಿವೃದ್ಧಿಗಾಗಿ ನೀಡುತ್ತಿಲ್ಲ ಇದಲ್ಲದೇ ಬಿಜೆಪಿ ಪಕ್ಷವು ಕೇವಲ ಚುನಾವಣೆಗಾಗಿ 27 ಸಾವಿರಕೋಟಿ ರೂಪಾಯಿ ಹಣವನ್ನು ಖರ್ಚು ಮಾಡುತ್ತಿದೆ, ಇದಕ್ಕೆಲ್ಲ ಹಣ ಒದಗಿ ಬರುತ್ತಿರುವುದು ಅಂಬಾನಿ ಅದಾನಿಯಂತಹ ಬಂಡವಾಳ ಶಾಹಿಗಳಿಂದ, ಜನ ಜೀವನವನ್ನು ಅಭಿವೃದ್ಧಿ ಪಡಿಸಲು ನಡೆಸಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ರಾಜಕಾರಣಿಗಳು ಮುಂದಾಗಬೇಕು, ತಮ್ಮ ತಟ್ಟೆಯಲ್ಲಿ ತಿನ್ನಲು ಅನ್ನವಿಲ್ಲದಿದ್ದರೂ ಪರವಾಗಿಲ್ಲ ಆದರೆ ಆತ ಕಲ್ಲಂಗಡಿ ಮಾರಬಾರದು ಇದು ನಮ್ಮ ಹೆಮ್ಮೆ ಇದು ನಮ್ಮ ವಿಶ್ವಗುರು ಭಾರತ ಎಂದು ಹೇಳುತ್ತಿದ್ದಾರೆ ಎಂದು ಕುಟುಕಿದರು.

ಮಲೆನಾಡು ಭಾಗದ ಜನರ ಕಷ್ಟಗಳು ದಿನಕ್ಕೊಂದರಂತೆ ಹೆಚ್ಚುತ್ತಲೇ ಇದೆ, ಈ ಭಾಗದ ಬಡವರಿಗೆ, ಮನೆ ಕಟ್ಟಿಕೊಂಡವರಿಗೆ ಹಕ್ಕುಪತ್ರಗಳ ವಿತರಣೆಯನ್ನು ವಿಳಂಬಮಾಡದೇ ನೀಡಬೇಕು ಹಾಗೂ ಅವೈಜ್ಞಾನಿಕ ನಿಯಮಗಳ ಸಡಿಲಿಕೆಯಾಗಬೇಕು ಸರ್ಕಾರ ಈ ಕುರಿತು ಗಂಭೀರವಾಗಿ ಚಿಂತಿಸಬೇಕು - ಡಾ.ಕಲ್ಕುಳಿ ವಿಠ್ಠಲ್ ಹೆಗ್ಡೆ, ಪರಿಸರವಾದಿಗಳು

ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು : https://forms.gle/PvypXpJerzDzsrfE9

ಈ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಖ್ಯಾತ ಪರಿಸರವಾದಿ ಕಲ್ಕುಳಿ ವಿಠ್ಠಲ್ ಹೆಗ್ಡೆ ಅವರು ನಿಯಮಗಳನ್ನು ಅವರವರ ಲಾಭಕ್ಕಾಗಿ ಅವರವರ ಅನುಕೂಲಗಳಿಗಾಗಿ ರಾಜಕಾರಣಿಗಳು, ಅಧಿಕಾರಿಗಳು ಸಡಿಲಪಡಿಸುತ್ತಾರೆ ಎಂದು ಹರಿಹರಪುರದಲ್ಲಿ ಕುಂಭಾಭಿಷೇಕದ ಅವಧಿಯಲ್ಲಿ ಮಂತ್ರಿಗಳಿಗಾಗಿ ನಿರ್ಮಿಸಿದ ಹೆಲಿಪ್ಯಾಡ್ ನ ಕುರಿತಾಗಿ ಮಾತನಾಡಿದರು. ಡೀಮ್ಡ್ ಫಾರೆಸ್ಟ್, ಫೋರ್ ಓನ್ ಜಾಗದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲು ಒಲವು ತೋರುವವರು ಅನೇಕ ವರ್ಷಗಳಿಂದ ಹಕ್ಕು ಪತ್ರ ಹೊಂದದೇ ಮನೆಯಲ್ಲಿ ವಾಸ ಮಾಡುವ ಜನರ ಹಿತಕ್ಕಾಗಿ ಒಲವು ನೀಡಿ, ಶೃಂಗೇರಿಯಲ್ಲಿ ನಿರ್ಮಾಣವಾಗಬೇಕಿರುವ ನೂರು ಬೆಡ್ ನ ಸುಸಜ್ಜಿತ ಆಸ್ಪತ್ರೆಗೆ ತ್ವರಿತಗತಿಯಲ್ಲಿ ಜಾಗ ಮಂಜೂರಾತಿ ಮಾಡಿಸಿ ಎಂದು ಆಗ್ರಹಿಸಿದರು. ಹುಲಿ ಯೋಜನೆ ಕುರಿತು ಮಾತನಾಡಿದ ಅವರು ನಮ್ಮ ತಾಲೂಕಿನಲ್ಲಿ ಹುಲಿಯೇ ಇಲ್ಲ ಆದರೆ ಇಲ್ಲಿನ 70 ಪ್ರತಿಶತ ಭಾಗ ಹುಲಿ ಯೋಜನೆಯಡಿಯಲ್ಲಿ ಬರುತ್ತದೆ ಇದೊಂದು ಅವೈಜ್ಞಾನಿಕ ನಡೆಯಾಗಿದೆ ಎಂದರು. ಸಾವಿರಾರು ಮನೆಗಳಿಗೆ ಹಕ್ಕುಪತ್ರ ನೀಡಿದ್ದಾರೆ ಅದರಲ್ಲಿ ಕೆಲವೇ ಕಾನೂನಿಗೆ ಸರಿಯಾಗಿದ್ದರೆ ಉಳಿದಂತಹ ಅನೇಕ ಪತ್ರಗಳು ಕಾನೂನಿನ ವಿರುದ್ಧವಾಗಿದೆ. ಈ ದೊಡ್ಡ ಹಗರಣದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ, ಹಕ್ಕುಪತ್ರಗಳ ವಿತರಣೆಯ ಸಂದರ್ಭದಲ್ಲಿ ಅದ್ವಾನವೇ ನಡೆದು ಹೋಗಿದೆ. ತಾಲೂಕು ಕಛೇರಿಯ ಬಹುತೇಕ ಅಧಿಕಾರಿಗಳು ಜೈಲು ಪಾಲಾಗಿದ್ದಾರೆ ಎಂದರು. 

ಮಲೆನಾಡು ಭಾಗದ ಅನೇಕ ಸಮಸ್ಯೆಗಳ ಕುರಿತು ಬಿ.ಟಿ ಲಲಿತಾ ನಾಯಕ್, ಜನಶಕ್ತಿಯ ರಾಜ್ಯ ಗೌರವಾಧ್ಯಕ್ಷರಾದ ಗೌರಿ ಸೇರಿದಂತೆ ಅನೇಕ ಆಹ್ವಾನಿತರು ಮಾತನಾಡಿದರು.

ಈ ಕಾರ್ಯಕ್ರಮದ ಕುರಿತಾಗಿ ನಿವೃತ್ತ ಜಿಲ್ಲಾಧಿಕಾರಿಗಳಾದ ಮತ್ತು ಸಾಮಾಜಿಕ ಕಾರ್ಯಕರ್ತರಾದ ಶಶಿಕಾಂತ್ ಸೆಂದಿಲ್ ಅವರು ಆನ್ಲೈನ್ ಮುಖಾಂತರ ಮಾತನಾಡಿದರು. ಮಧ್ಯಾಹ್ನ ಮೂರು ಮೂವತ್ತರವರೆಗೆ ನಡೆದ ಈ ಸಮ್ಮೇಳನದಲ್ಲಿ ಜನಶಕ್ತಿಯ ಪದಾಧಿಕಾರಿಗಳು ಕಾರ್ಯಕರ್ತರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಅನೇಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.