ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಬೆಂಬಲಿಗರು ಗಬ್ಬಾನೆ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡುವಂತೆ ಪರೋಕ್ಷವಾಗಿ ಡಿ.ಎನ್ ಜೀವರಾಜ್ ಅವರಿಗೆ ಪ್ರವೀಣ್ ಖಾಂಡ್ಯ ಪಂಥಾಹ್ವಾನ ನೀಡಿದ್ದಾರೆ.
ಇದನ್ನೂ ಓದಿ : ಶೃಂಗೇರಿ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷವನ್ನು ಹಣಿಯುವ ಉದ್ಧೇಶದಿಂದ ಸಂಚು ರೂಪಿಸಿ ಹಿಂದೂ ಬ್ರಿಗೇಡ್ ಸ್ಥಾಪನೆ : ಬಿಜೆಪಿ ಆರೋಪ
ಈ ಕುರಿತು ಬಾಳೆಹೊನ್ನೂರಿನಲ್ಲಿ ಮಾತನಾಡಿರುವ ಅವರು ಮೇ 28 ನೇ ತಾರೀಖಿನಂದು ಗಬ್ಬಾನೆಯ ದೇವಸ್ಥಾನಕ್ಕೆ ಮಾಜಿ ಶಾಸಕರು ಹಾಗೂ ಬೆಂಬಲಿಗರು ಬಂದು ನಾನು ಕಳೆದ ಚುನಾವಣೆಯಲ್ಲಿ ಹಣ ತೆಗೆದುಕೊಂಡಿರುವುದಾಗಿ ನಡೆಸುತ್ತಿರುವ ಆರೋಪವನ್ನು ಸತ್ಯ ಎಂದು ಪ್ರಮಾಣ ಮಾಡಬೇಕೆಂದು ಪಂಥಾಹ್ವಾನ ನೀಡಿದ್ದಾರೆ.
2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 3 ಕೋಟಿ ರೂ ಹಣ ಹಾಗೂ 2023 ರಲ್ಲಿ ನಡೆಯುವ ಚುನಾವಣೆಯಲ್ಲಿ ಪ್ರವೀಣ್ ಖಾಂಡ್ಯ ಹಾಗೂ ಇತರರು ಕಾಂಗ್ರೆಸ್ ಪಕ್ಷದಿಂದ ಹಣ ಪಡೆದು ಬಂಡಾಯ ಚಟುವಟಿಕೆ ಮಾಡುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿರುವ ಮಾಜಿ ಶಾಸಕರು ಹಾಗೂ ಅವರ ತಂಡದ ನಾಲ್ವರು ದೇವರ ಮುಂದೆ ಈ ಕುರಿತು ಆಣೆ ಮಾಡುವಂತೆ ದೇವಸ್ಥಾನಕ್ಕೆ ಕರೆದಿದ್ದಾರೆ.
ಎನ್. ಆರ್.ಪುರದ ನಾಯಕ ಹಾಗೂ ಆತನ ಸಹಚರರು ಭೂತರಾಯನ ಮುಂದೆ ಬಂದು ಆಣೆ ಪ್ರಮಾಣ ಮಾಡಲಿ ಯಾರು ತಪ್ಪೆಸಗಿದ್ದಾರೆ ಅವರಿಗೆ ದೇವರೇ ಸರಿಯಾದ ಶಿಕ್ಷೆ ನೀಡಲಿ ಎಂದು ನಾವು ಅಂದೇ ದೇವರಲ್ಲಿ ಹರಕೆ ಹೇಳಿಕೊಳ್ಳುತ್ತೇವೆ ಎಂದು ಸವಾಲೆಸೆದಿದ್ದಾರೆ.
ಏನಿದು ವಿವಾದ: ಕೆಲ ದಿನಗಳ ಹಿಂದೆ ಹಿಂದೂ ಬ್ರಿಗೇಡ್ ಸಂಘಟನೆ ಪತ್ರಿಕಾಗೋಷ್ಠಿ ನಡೆಸಿ ಶೃಂಗೇರಿ ಕ್ಷೇತ್ರದಲ್ಲಿ ಹಿಂದೂ ನಾಯಕರ ಅವಶ್ಯಕತೆ ಇದೆ, ಆದಕಾರಣ ಹಿಂದೂ ಸಂಘಟನೆಗಳಿಗೆ ಬೆಂಬಲವಾಗಿ ನಿಲ್ಲುವ ಹಿಂದೂ ನಾಯಕರನ್ನು ಆರಿಸುವ ಬಗ್ಗೆ ಹೇಳಿಕೆ ನೀಡಿದ್ದರು.
ಆ ನಂತರ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಕಲ್ಮರುಡಪ್ಪ ಹಾಗೂ ಶೃಂಗೇರಿ ಕ್ಷೇತ್ರದ ಬಿಜೆಪಿ ಮುಖಂಡರು ಹಿಂದೂ ಬ್ರಿಗೇಡ್ ಎಂಬುದು ಶೃಂಗೇರಿಯಲ್ಲಿ ಬಿಜೆಪಿ ಹಣಿಯಲು ಸಂಚು ರೂಪಿಸಿ ಹುಟ್ಟಿರುವ ಕಾಂಗ್ರೆಸ್ ನ ಬಿ ಟೀಂ ಎಂದೂ, ಕಳೆದ ಚುನಾವಣೆಯಲ್ಲಿ ಪ್ರವೀಣ್ ಖಾಂಡ್ಯ ಕಾಂಗ್ರೆಸ್ ನ ಟಿ.ಡಿ ರಾಜೇಗೌಡರಿಂದ ಹಣ ಪಡೆದು ಚುನಾವಣೆಯಲ್ಲಿ ಬಂಡಾಯ ನಿಂತಿದ್ದಾಗಿಯೂ ಆರೋಪಿಸಿದ್ದರು.





0 Comments