ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಪ್ರವಾಸಕ್ಕೆಂದು ಬಂದ ಯುವಕ-ಯುವತಿಯರು ತಮ್ಮ ಸುರಕ್ಷತೆಯೆಡೆಗೆ ಗಮನ ನೀಡದೆ ಬೇಕಾಬಿಟ್ಟಿಯಾಗಿ ಜೀಪ್ ನ ಮೇಲ್ಭಾಗದಲ್ಲಿ ಕುಳಿತು ವಾಹನ ಸವಾರಿ ನಡೆಸುತ್ತಿದ್ದವರನ್ನು ಅಡ್ಡಗಟ್ಟಿ ಕಾಫಿನಾಡಿನ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ :  ಬಿಜೆಪಿಗೆ ಮತ್ತೊಂದು ಆಘಾತ, ಗ್ರಾಮ ಪಂಚಾಯಿತಿ ಅಧ್ಯಕ್ಷರೋರ್ವರು ಜೆಡಿಎಸ್ ಗೆ ಸೇರ್ಪಡೆ

ಪ್ರವಾಸಿ ತಾಣವಾಗಿರುವ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿಗೆ ಬೊಲೆರೋ ವಾಹನದಲ್ಲಿ ಸಂಚಾರ ನಡೆಸುತ್ತಿದ್ದ ಕೆಲ ಯುವಕ ಯುವತಿಯರು, ಜೀಪಿನ ಮೇಲ್ಭಾಗದಲ್ಲಿ ಕುಳಿತು ಸಂಚಾರ ನಡೆಸುತ್ತಿದ್ದರು. ಹೆಚ್ಚಿನ ತಿರುವು ಹಾಗೂ ಕಿರಿದಾದ ರಸ್ತೆ ಯನ್ನು ಹೊಂದಿರುವ ಈ ಸ್ಥಳದಲ್ಲಿ ಈ ರೀತಿಯ ಪ್ರಯಾಣ ನಡೆಸುವುದು ಅತ್ಯಂತ ಅಪಾಯಕಾರಿ. ಆದರೆ ಮೋಜಿನ ಮನೋಭಾವನೆಯಲ್ಲಿದ್ದ ಯುವಕ-ಯುವತಿಯರು ತಮ್ಮ ಸುರಕ್ಷತೆಯೆಡೆಗೆ ಗಮನ ನೀಡದೆ ಬೇಜವಾಬ್ದಾರಿಯುತವಾಗಿ ಸಂಚಾರ ನಡೆಸುತ್ತಿದ್ದರು. ನಶೆಭರಿಸುವ ವಸ್ತುಗಳನ್ನು ಸೇವಿಸಿ ಯುವಕ ಯುವತಿಯರು ಪ್ರಯಾಣ ನಡೆಸುತ್ತಿದ್ದರು ಎನ್ನಲಾಗಿದೆ.

 

ಘಟನಾ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು KA 34 M 6676 ನಂಬರ್ ನ ಬೊಲೆರೋ ವಾಹನವನ್ನು ಅಡ್ಡಗಟ್ಟಿ ಎನ್ ಡಿ ಪಿ ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ವಾಹನವನ್ನು ಸೀಜ್ ಮಾಡಿದ್ದಾರೆ. 

ಈ ಕುರಿತು ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಎಚ್ಚರಿಸಿರುವ ಅಧಿಕಾರಿಗಳು ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ತಮ್ಮೊಂದಿಗೆ ಬೇರೆ ವಾಹನಗಳ ಪ್ರಯಾಣಿಕರ ಸುರಕ್ಷತೆಗೆ ಯಾವುದೇ ಲೋಪಗಳುಂಟಾಗದಂತೆ ಹೆಚ್ಚಿನ ಗಮನಹರಿಸಿ ಸಂಚರಿಸಬೇಕೆಂಬ ಎಚ್ಚರಿಕೆಯನ್ನು ನೀಡಿದ್ದಾರೆ.