ಆಲ್ದೂರು : (ನ್ಯೂಸ್ ಮಲ್ನಾಡ್ ವರದಿ) ಪ್ರಥಮ ಪಿಯುಸಿಯಲ್ಲಿ ವಿದ್ಯಾರ್ಥಿನಿಯೋರ್ವಳು ಅನುತ್ತೀರ್ಣಳಾದ ಕಾರಣ ಆಕೆಯ ಪೋಷಕರು ಈ ಕುರಿತಾಗಿ ಬೈದಿದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಅಕ್ರಮವಾಗಿ ಬೀಟೆ ನಾಟ ಸಾಗಿಸುತ್ತಿದ್ದಾಗ ಅಧಿಕಾರಿಗಳಿಂದ ದಾಳಿ, ವಾಹನ ಹಾಗೂ ನಾಟ ವಶ, ಕಳ್ಳರು ಪರಾರಿ

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನ ಮೇದಾರ ಬೀದಿಯ ನಿವಾಸಿ ತುಷಾರ ಎಂಬ 17 ವರ್ಷ ಪ್ರಾಯದ ಯುವತಿ ಚಿಕ್ಕಮಗಳೂರಿನ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ನಡೆಸುತ್ತಿದ್ದಳು. ಈಕೆಯು ಪರೀಕ್ಷೆಯಲ್ಲಿ ಫೇಲಾದ ವಿಷಯವನ್ನು ಪೋಷಕರಲ್ಲಿ ತಿಳಿಸಿರಲಿಲ್ಲ. ಕಾಲೇಜಿನಿಂದ ನೇರವಾಗಿ ಶಿಕ್ಷಕರು ಈಕೆಯು ಪೋಷಕರಿಗೆ ಅನುತ್ತೀರ್ಣಳಾಗಿರುವ ವಿಚಾರವನ್ನು ತಿಳಿಸಿದಾಗ ಸ್ವಾಭಾವಿಕವಾಗಿ ಆಕೆಯ ತಾಯಿ ಬೈದು ಬುದ್ದಿ ಹೇಳಿದ್ದಾರೆ.

ಅದನ್ನೇ ಮನಸ್ಸಿನಲ್ಲಿ ಗಂಭೀರವಾಗಿಟ್ಟುಕೊಂಡು, ನೋವನ್ನು ಅನುಭವಿಸಿ ಮನನೊಂದ ತುಷಾರ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. 

ಮಗಳನ್ನು ಕಳೆದುಕೊಂಡಿರುವ ಪೋಷಕರು ಅತೀವವಾದ ದುಃಖವನ್ನು ಹೊರಹಾಕಿದ್ದು ನೆರೆಹೊರೆಯವರು ಮನೆಯವರನ್ನು ಸಂತೈಸಿದ್ದಾರೆ. ವಿದ್ಯಾಭ್ಯಾಸವನ್ನು ಪಡೆದು ಉತ್ತಮ ಹುದ್ದೆಯನ್ನು ಪಡೆದುಕೊಂಡು ಸ್ವಾವಲಂಬಿಯಾಗಿ ಪೋಷಕರಿಗೆ ಬೆನ್ನೆಲುಬಾಗಿರಬೇಕಿದ್ದ ಮಗಳು ಬಾರದ ಲೋಕಕ್ಕೆ ತೆರಳಿರುವುದು ಪರಿಚಯಸ್ಥರಲ್ಲಿ ಹಾಗೂ ಆಕೆಯ ಗೆಳತಿಯರಲ್ಲಿ ಬೇಸರ ತರಿಸಿದೆ.