ಮೂಡಿಗೆರೆ:(ನ್ಯೂಸ್ ಮಲ್ನಾಡ್ ವರದಿ) ನಿನ್ನೆಯಿಂದ ಸಾಕಷ್ಟು ವೈರಲ್ ಆಗಿದ್ದ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಹಾಗೂ ಪಿಎಸ್ ಐ ರವೀಶ ಅವರ ಸಂಭಾಷಣೆ ಆಡಿಯೋ ಕುರಿತಂತೆ ಈಗ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಬಾಳೆಹೊನ್ನೂರು ಮೂಲದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿದ ಸಚಿವ ಸುನಿಲ್ ಕುಮಾರ್
PSI ರವೀಶ್ ಅವರಿಗೆ ‘ನೀನು ಯಾರನ್ನು ಕೇಳಿ ಚಾರ್ಜ್ ತೆಗೆದುಕೊಂಡಿದ್ದೀಯಾ?’, ‘ನಿನ್ನನ್ನು ಬೇಡ ಅಂತ ಹೇಳಿದ್ದೆ ತಾನೇ?’, ‘ಮರ್ಯಾದೆಯಿಂದೆ ಬಂದ ಜಾಗಕ್ಕೆ ವಾಪಾಸ್ ಹೋಗು’, ‘ಐಜಿಗೆ ಎಷ್ಟು ಲಂಚ ಕೊಟ್ಟಿದ್ದೀಯಾ? ಯಾವನು ಐಜಿ.. ಮೂಡಿಗೆರೆಗೆ ನಾನೇ’, ‘ನನ್ನನ್ನು ನೋಡಲು ಬಂದ್ರೆ ಒದ್ದು ಓಡಿಸುತ್ತೇನೆ’ ಎಂದು ಅವಾಝ್ ಹಾಕಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಬಾರೀ ಸದ್ದು ಮಾಡಿದ್ದರ ಬೆನ್ನಲ್ಲೇ ಫೇಸ್ಬುಕ್ ನಲ್ಲಿ ಶಾಸಕ ಎಂ ಪಿ ಕುಮಾರಸ್ವಾಮಿ ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದು, ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು : https://forms.gle/PvypXpJerzDzsrfE9
ಶಾಸಕ ಎಂ ಪಿ ಕುಮಾರಸ್ವಾಮಿ ಸಮರ್ಥನೆ :
ಈ ಕುರಿತು ಫೇಸ್ಬುಕ್ ನಲ್ಲಿ ಬರೆದುಕೊಂಡಿರುವ ಶಾಸಕ ಎಂ ಪಿ ಕುಮಾರಸ್ವಾಮಿ, ‘ಪಿಎಸ್ಐಯೊಂದಿಗಿನಾ ಮಾತುಕತೆ ಆಡಿಯೋ ನನ್ನ ವಿರೋಧಿಗಳು ಮಾಡಿಸಿರುವ ಕುತಂತ್ರ, ಹಿಂದೆ ಈ ಪಿಎಸ್ಐ ನನ್ನ ಬಳಿ ಬಂದಿದ್ದರು ಆ ಸಂದರ್ಭದಲ್ಲಿ ನಾನು ಮಲ್ಲಂದೂರು ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು ಅತ್ಯಂತ ಹಿಂದುಳಿದ ವರ್ಗದ ಜನಾಂಗದವರು ಹೆಚ್ಚು ವಾಸಿಸುತ್ತಿರುವುದರಿಂದ ನಿಮ್ಮ ಸ್ವಂತ ಊರು ಮಂಡ್ಯ ಆಗಿದ್ದು, ಹೊಸದಾಗಿ ಸೇರ್ಪಡೆಯಾಗಿರುವುದರಿಂದ ಹಾಗೆ ಭಾಷೆಯ ವ್ಯತ್ಯಾಸ ಇರುವುದರಿಂದ ಜನರನ್ನು ಸಂಭಾಳಿಸುವುದು ಕಷ್ಟ ಎಂದು ತಿಳಿಹೇಳಿ ಕಳಿಸಿದ್ದೆ, ಅದನ್ನು ಹೊರತುಪಡಿಸಿ ಯಾವುದೇ ಜಾತಿ ಜನಾಂಗದ ವಿಚಾರ ಅಥವಾ ಬೇರೆ ವಿಚಾರವನ್ನು ಕೇಳದೆಯೇ ಕಳಿಸಿಕೊಟ್ಟಿದ್ದೇನೆ.
ಇದೀಗ ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನನ್ನ ಗಮನಕ್ಕೆ ಬಾರದೆ ಕೆಲಸಕ್ಕೆ ಹಾಜರಾಗಿದ್ದು, ಆ ವ್ಯಾಪ್ತಿಯ ನಮ್ಮ ಕಾರ್ಯಕರ್ತರು ಹಾಗೂ ಮತದಾರರು ನನ್ನ ಮೇಲೆ ಒತ್ತಡ ಹಾಕಿರುವುದರಿಂದ ಒಬ್ಬ ಶಾಸಕನಾಗಿ ನಾನೇ ಮಾತನಾಡಬೇಕಿದೆ, ಏಕೆಂದರೆ ಪೊಲೀಸ್ ಠಾಣೆ ವಿಚಾರವಾಗಿ ಪ್ರತಿದಿನ ಹತ್ತಾರು ಕರೆಗಳು ನನಗೆ ಬರುತ್ತವೆ ಮತ್ತು ನಾನೇ ಖುದ್ದು ಅದನ್ನು ನಿವಾರಣೆ ಮಾಡಬೇಕಾದ್ದರಿಂದ ಅದು ನನ್ನ ಹೊಣೆಗಾರಿಕೆಯೂ ಸತ್ಯ. ಇದನ್ನು ಹೊರತುಪಡಿಸಿ ಇದೀಗ ನನ್ನ ವಿರುದ್ಧ ಒಕ್ಕಲಿಗರ ವಿರೋಧಿ ಎಂದು ಕುತಂತ್ರ ಹೆಣೆಯುತ್ತಿದ್ದು ಇದು ಸತ್ಯಕ್ಕೆ ದೂರವಾದ ಮಾತು, ನನ್ನ ಜೊತೆಗಾರ ರಲ್ಲಿ ಬಹುತೇಕರು ಒಕ್ಕಲಿಗ ನಾಯಕರೆ, ಹಾಗೂ ನಮ್ಮ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯಲ್ಲಿ ಒಕ್ಕಲಿಗರ ನಿರ್ದೇಶನದಂತೆ ಬಹುತೇಕ ಮಾಡಲಾಗುತ್ತಿದೆ ಹಾಗೂ ಅದನ್ನು ನೀವು ಸದಾ ನೋಡುತ್ತಿದ್ದೀರಿ ಮತ್ತೆ ಅದು ಹೇಗೆ ನಾನು ಒಕ್ಕಲಿಗರ ವಿರೋಧಿಯಾಗುತೇನೆ, ಹಾಗಾಗಿ ನನ್ನ ವಿರೋಧಿಗಳು ಹೆಣೆದಿರುವ ಈ ಕುತಂತ್ರವನ್ನು ದಯವಿಟ್ಟು ಯಾರೂ ನಂಬಬಾರದು’ ಎಂದು PSI ವಿಚಾರಕ್ಕೆ ಸಮರ್ಥನೆ ಕೊಟ್ಟಿದ್ದಾರೆ.
ಶಾಸಕರು ತಾಳ್ಮೆ ಕಳೆದುಕೊಂಡು ಮಾತನಾಡಿದ್ದಾರೆ; ಗೃಹ ಸಚಿವ ಆರಗ ಜ್ಞಾನೇಂದ್ರ
ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಎಂ ಪಿ ಕುಮಾರಸ್ವಾಮಿ ಅವರು ತಾಳ್ಮೆ ಕಳೆದುಕೊಂಡು ಮಾತನಾಡಿದ್ದಾರೆ ಎನಿಸುತ್ತಿದೆ. ಈ ಕುರಿತು ನಾನು ಮಾಹಿತಿ ಪಡೆಯುತ್ತೇನೆ ಎಂದಿದ್ದಾರೆ.
ಶಾಸಕರ ನಡೆ ಕುರಿತಂತೆ ಅನುಮಾನ :
ಶಾಸಕ ಎಂ ಪಿ ಕುಮಾರಸ್ವಾಮಿ ಏಪ್ರಿಲ್ 22 ರಂದು ಆರಕ್ಷಕ ಮಹಾನಿರೀಕ್ಷಕರಿಗೆ (IG)ಗೆ ಪತ್ರ ಬರೆದಿದ್ದು, ಪತ್ರದಲ್ಲಿ ತಮ್ಮ ಕ್ಷೇತ್ರದ ಮಲ್ಲಂದೂರು ಠಾಣೆಗೆ ಪಿಎಸ್ಐ ರವೀಶ್ ಅವರನ್ನು ನಿಯುಕ್ತಿಗೊಳಿಸುವಂತೆ ಕೋರಿದ್ದರು. ಆದರೆ ಈಗ ಅದೇ ಶಾಸಕರು ‘ನೀನು ಇಲ್ಲಿ ಹೇಗೆ ಚಾರ್ಜ್ ತೆಗೆದು ಕೊಳ್ತೀಯಾ? ನೀನು ಬಂದ್ರೆ ಒದ್ದು ಓಡಿಸುತ್ತೇನೆ? ಯಾವ ಐಜಿ ಮೂಡಿಗೆರೆಗೆ ಎಲ್ಲಾ ನಾನೇ’ ಎಂದು ಪಿಎಸ್ಐ ರವೀಶ್ ಗೆ ಅವಾಝ್ ಹಾಕಿದ್ದಾರೆ. ಶಾಸಕರ ಈ ನಡೆ ಹಾಸ್ಯಾಸ್ಪದವಾಗಿದ್ದು, ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಶಾಸಕ ಎಂ. ಪಿ. ಕೆ ವಿರುದ್ಧ ಆಕ್ರೋಶ :
ಪಿಎಸ್ಐ ರವೀಶ್ ಅವರಿಗೆ ಅವಾಝ್ ಹಾಕಿದ ಆಡಿಯೋ ಎಲ್ಲೆಡೆ ವೈರಲ್ ಆದ ಬೆನ್ನಲ್ಲೇ ಶಾಸಕ ಎಂ ಪಿ ಕುಮಾರಸ್ವಾಮಿ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಓರ್ವ ಎಂ ಎಲ್ ಎ ಆದವರು ಅಧಿಕಾರಿಗಳೊಂದಿಗೆ ಹೇಗೆ ವರ್ತಿಸಬೇಕು ಎನ್ನುವುದನ್ನು ತಿಳಿದಿರಬೇಕು, ಈ ರೀತಿ ಅವಾಝ್ ಹಾಕುವುದು ಸರಿಯಲ್ಲ ಎಂಬ ಮಾತುಗಳು ಕೇಳಿಬಂದಿವೆ. ಸ್ಪಷ್ಟನೆ ನೀಡುವ ವೇಳೆ, ಪೊಲೀಸ್ ಠಾಣೆಯ ವಿಚಾರದಲ್ಲಿ ಹತ್ತಾರು ಕರೆಗಳು ನಮಗೆ ಬರುತ್ತಿರುತ್ತವೆ ಅದನ್ನು ಖುದ್ದಾಗಿ ನಾನೇ ವಿಚಾರ ಮಾಡಬೇಕು ಎಂದು ಹೇಳಿದ್ದಾರೆ. ಆದರೆ ಕಾನೂನು ಸುವ್ಯವಸ್ಥೆ, ಅಪರಾಧ ತನಿಖೆ ವಿಚಾರದಲ್ಲಿ ಯಾರಿಗೂ ತಲೆ ತೂರಿಸುವ ಅವಕಾಶ ಇಲ್ಲ. ಹೀಗಿದ್ದಮೇಲೆ ಠಾಣೆ ನಿಮ್ಮ ಹಿಡಿತದಲ್ಲಿರಬೇಕು ಎನ್ನುವ ದಾಟಿಯಲ್ಲಿ ಮಾತನಾಡುವುದು ಎಷ್ಟು ಸರಿ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ. ಹಾಗಾದರೆ ಒಬ್ಬ PSI ಯಾವುದಾದರೂ ಠಾಣೆಗೆ ನಿಯುಕ್ತಿಗೊಳ್ಳಬೇಕಾದರೆ ಆ ಕ್ಷೇತ್ರದ ಶಾಸಕರ ಪರ್ಮೀಶನ್ ಬೇಕೇ? ಅಷ್ಟರ ಮಟ್ಟಿಗೆ ರಾಜಕೀಯ, ಭ್ರಷ್ಟಾಚಾರ ತಾಂಡವವಾಡುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ.






0 Comments