ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಚಾರ್ಮಾಡಿ ಘಾಟಿಯಲ್ಲಿ ದೊಡ್ಡ ಲಾರಿಯೊಂದು ಕೆಟ್ಟುನಿಂತ ಪರಿಣಾಮ ಕೆಲಕಾಲ ರಸ್ಥೆ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. 

ಇದನ್ನೂ ಓದಿ : ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಮುಂದಾದ ಆರೋಪಿಗೆ ಗುಂಡೇಟು

ಚಿಕ್ಕಮಗಳೂರು ಹಾಗೂ ದಕ್ಷಿಣಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಮಾರ್ಗವಾದ ಚಾರ್ಮಾಡಿ ಘಾಟ್ ನ 07 ನೇ ತಿರುವಿನಲ್ಲಿ ಲಾರಿಯು ಹಾಳಾದ ಪರಿಣಾಮ ಒಂದು ಗಂಟೆಗೂ ಅಧಿಕ ಸಮಯ ರಸ್ತೆ ಸಂಪರ್ಕಕ್ಕೆ ಸಮಸ್ಯೆಯಾಗಿತ್ತು. ರಜಾದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಈ ರಸ್ಥೆಯಮೂಲಕ ಸಂಚರಿಸುವ ಕಾರಣ ವಾಹನದಟ್ಟಣೆ ಹೆಚ್ಚಾಗಿ ಕಂಡುಬಂತು.

ಚಾರ್ಮಾಡಿ ಘಾಟ್ ನಲ್ಲಿ ಭಾರೀ ಪ್ರಮಾಣದ ವಾಹನಗಳು ಸಂಚಾರ ಮಾಡುವ ಸಲುವಾಗಿ ಈ ರೀತಿಯ ಅವಘಡಗಳು ಸಂಭವಿಸುತ್ತಿದ್ದು ಘನವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಬೇಕೆಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬಂದಿದೆ. ಘನ ವಾಹನ ಸಂಚಾರಕ್ಕೆ ನಿಷೇಧವಿರುವ ಚಾರ್ಮಾಡಿ ಘಾಟಿಯಲ್ಲಿ, ಇತ್ತೀಚಿನ ಕೆಲವು ದಿನಗಳಿಂದ ಹತ್ತು ಮತ್ತು ಹನ್ನೆರಡು ಚಕ್ರದ ಲಾರಿಗಳು ಮತ್ತು ಕೆ.ಎಸ್.ಆರ್.ಟಿ.ಸಿ ರಾಜಹಂಸ ಬಸ್ ಓಡಾಟ ಕಂಡು ಬರುತ್ತಿದೆ. ಮಳೆಗಾಲದ ಸಮಯದಲ್ಲಿ ಮಲೆನಾಡಿನ ಬಹುತೇಕ ಭಾಗಗಳಲ್ಲಿ ಹೆಚ್ಚು ಮಳೆಯಾಗುವ ಕಾರಣ ಅತೀ ಹೆಚ್ಚಿನ ಸುರಕ್ಷತಾ ಕ್ರಮಗಳೊಂದಿಗೆ ವಾಹನ ಸಂಚಾರ ನಡೆಸಬೇಕಿದೆ. 

ಚಾರ್ಮಾಡಿಯ ಅಗತ್ಯ ಸ್ಥಳಗಳಲ್ಲಿ ಮೋರಿ, ತಡೆಗೋಡೆ ನಿರ್ಮಾಣಗೊಂಡಿದೆ. 2009 ರ ಪ್ರವಾಹಕ್ಕೆ ನಲುಗಿದ್ದ ಘಾಟಿ ಪ್ರದೇಶದಲ್ಲಿ ಹಲವು ತಿಂಗಳು ಸಂಚಾರ ನಿಷೇಧ ಹೇರಲಾಗಿತ್ತು. ದುರಸ್ತಿ ಕಾಮಗಾರಿ ನಡೆದ ಬಳಿಕ ಹಂತ ಹಂತವಾಗಿ ನಾನಾ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೂ ಭಾರೀ ಗಾತ್ರದ ಘನವಾಹನಗಳ ಸಂಚಾರ ನಿಷೇಧ ಮುಂದುವರಿದಿತ್ತು.

ಪ್ರಸ್ತುತ ಚಾರ್ಮಾಡಿ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು. ಮಳೆಯ ಸಮಯದಲ್ಲಿ ಕೆಲವೊಂದು ಸಂಚಾರ ವ್ಯತ್ಯಯಗಳು ಆಗಾಗ ಕಂಡುಬರುತ್ತವೆ. ಮಳೆಗೆ ಗುಡ್ಡ ಜರಿತ, ಮರಗಳು ರಸ್ತೆಗೆ ಉರುಳುವುದು, ಟ್ರಾಫಿಕ್ ಜಾಮ್,ವಾಹನಗಳು ಹೂತು ಹೋಗುವುದು ಇತ್ಯಾದಿ ಆಗಾಗ ಮುಂದುವರಿಯುತ್ತದೆ. ಮಳೆ ಸಮಯ ವಿಪರೀತ ಮಂಜು ಕವಿದ ವಾತಾವರಣ ಕೂಡ ಸಂಚಾರಕ್ಕೆ ಸಮಸ್ಯೆ ನೀಡುತ್ತಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನಸವಾರರು ಅತೀ ಹೆಚ್ಚಿನ ಜಾಗರೂಕತೆವಹಿಸಿ, ರಸ್ತೆ ನಿಯಮಗಳನ್ನು ಪಾಲಿಸಿಕೊಂಡು ನಿಧಾನಗತಿಯಲ್ಲಿ ಸಾಗಬೇಕಿದೆ. 

ತನು ಕೊಟ್ಟಿಗೆಹಾರ, ವರದಿಗಾರರು