ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) NH169 ರಸ್ತೆ ವಿಸ್ತರಣೆಗಾಗಿ ಶೃಂಗೇರಿ ಪಟ್ಟಣ ವ್ಯಾಪ್ತಿಯಲ್ಲಿ ಸುಮಾರು 218 ಮರಗಳನ್ನು ಕಡಿಯುವುದನ್ನು ವಿರೋಧಿಸಿ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಮಾಡಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ 169ಗೆ ಸಂಬಂಧಿಸಿದಂತೆ, ಶೃಂಗೇರಿ ಪಟ್ಟಣ ವ್ಯಾಪ್ತಿಯಲ್ಲಿ 5 ಕಿ.ಮಿ. ವ್ಯಾಪ್ತಿಯಲ್ಲಿ 218 ಬಲಿತ ಪಾರಂಪಾರಿಕ ಮರಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವತಿಯಿಂದ ದಿನಾಂಕ 30 ಜೂನ್ ರಂದು ಶೃಂಗೇರಿ ಅರಣ್ಯ ಇಲಾಖೆ ಕಛೇರಿಯಲ್ಲಿ ಸಾರ್ವಜನಿಕ ಅಹವಾಲು ಸಭೆಯನ್ನು ಕರೆಯಲಾಗಿದ್ದು.

ಬೃಹತ್ ಪಾರಂಪಾರಿಕ ಮರಗಳನ್ನು ತೆರವುಗೊಳಿಸುವ ಯೋಜನೆಗೆ ಸಂಬಂಧಿಸಿದಂತೆ, ನಮ್ಮ ತಕರಾರು ಇರುವುದಾಗಿ ಪರಿಸರಾಸಕ್ತರು ಮರ ಕಡಿಯುವುದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. 218 ಮರಗಳನ್ನು ಕಡಿಯುವ ಪೂರ್ವದಲ್ಲಿ ಆಯೋಜಿಸುವ ಸಾರ್ವಜನಿಕ ಅಹವಾಲು ಸಭೆಯನ್ನು ಕರೆಯುವ ಪ್ರಕ್ರಿಯೆಗೆ ಸಾಕಷ್ಟು ಸಮಯವನ್ನು, ಅಂದರೆ, 1 ತಿಂಗಳು ಕೇವಲ 13 ದಿನಗಳ ಗಡುವನ್ನು ನೀಡಿರುವುದು ಆಕ್ಷೇಪಾರ್ಹ ಸಂಗತಿಯಾಗಿದೆ.

ದಿನಾಂಕ:17/06/2022 ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿ, ಬರೀ ಹತ್ತು ದಿನಗಳ ಗಡುವು ನೀಡಿ ತರಾತುರಿಯಲ್ಲಿ ಸಭೆಯನ್ನು ಆಯೋಜಿಸಿರುವುದು ಸರಿಯಲ್ಲ. ಹಾಗೂ ಸಾಕಷ್ಟು ಸಾರ್ವಜನಿಕರಿಗೆ ತಮ್ಮ ಅಹವಾಲು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಇದರಿಂದ ಅವಕಾಶ ಆಗಿರುವುದಿಲ್ಲ. ಆದ್ದರಿಂದ, ಎಲ್ಲಾ ನಾಗರಿಕರಿಗೂ ತಿಳಿಯುವಂತೆ ಒಂದು ತಿಂಗಳ ಸಮಯವನ್ನು ನೀಡುವುದು ಮತ್ತು ಸಭೆಯ ಮುನ್ನಾದಿನ ಶೃಂಗೇರಿ ಪಟ್ಟಣಿಗರಿಗೆ ಮೈಕ್ ಮೂಲಕ ತಿಳುವಳಿಕೆ ನೀಡುವುದು ಸರಿಯಾದ ಕ್ರಮವಾಗಿರುತ್ತದೆ. ಸಾಕಷ್ಟು ಸಾರ್ವಜನಿಕರ ಸಹಭಾಗಿತ್ವ ಇಲ್ಲದೇ ಸಭೆಯನ್ನು ನಡೆಸಿದರೆ, ಸಭೆಯ ಮೂಲ ಉದ್ಧೇಶವೇ ಹಿನ್ನೆಲೆಗೆ ಸರಿದುಹೋಗುವ ಅಪಾಯವಿರುತ್ತದೆ. ಆದ್ದರಿಂದ, ಒಂದು ತಿಂಗಳ ಗಡುವಿನಲ್ಲಿ ಮತ್ತೊಂದು ಸಭೆಯನ್ನು ಕರೆಯುವಂತೆ ಅಭಿಯಾನದಲ್ಲಿ ಕೋರಿದ್ದಾರೆ.

ಹಾಗೆಯೇ ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದು ಅವುಗಳು ಹೀಗಿವೆ..

- 218 ಬಲಿತ ಪಾರಂಪಾರಿಕ ಮರಗಳನ್ನು ತೆರವುಗೊಳಿಸದೇ ರಾಷ್ಟ್ರೀಯ ಹೆದ್ದಾರಿ 169 ಉನ್ನತೀಕರಣಗೊಳಿಸಲು ಅಥವಾ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇರುವ ಬೇರೆ ಸಾಧ್ಯತೆಗಳ ಕುರಿತಾಗಿ ಅರಣ್ಯ ಇಲಾಖೆಯು ಯಾವ ಕ್ರಮ ಕೈಗೊಂಡಿದೆ?

- ಹವಾಗುಣ ಬದಲಾವಣೆ ಎಂಬ ಜಾಗತಿಕ ವಿಕ್ಷಿಪ್ತ ವಿದ್ಯಮಾನದ ಈ ಹೊತ್ತಿನಲ್ಲಿ 218 ಬಲಿತ ಪಾರಂಪಾರಿಕ ಮರಗಳನ್ನು ತೆರವುಗೊಳಿಸಲು ಇರುವ ಅನಿವಾರ್ಯತೆ ಏನು? ಅಥವಾ ಇರುವ ಬಲವಾದ ಕಾರಣವೇನು? ಇವುಗಳನ್ನು ಸಾರ್ವಜನಿಕರ ತಿಳುವಳಿಕೆಗಾಗಿ ನೀಡಬೇಕಲ್ಲವೇ? 

ಸಂವಿಧಾನದ 51(A) sub clause g ಪ್ರಕಾರ ಭಾರತದ ಪ್ರಾಕೃತಿಕ ಸಂಪತ್ತನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈ ರೀತಿಯ ಅಧಿಸೂಚನೆ ಪ್ರಕಟಿಸುವ ಪೂರ್ವದಲ್ಲಿ ಪತ್ರಿಕೆಗಳ ಮೂಲಕ ಇದರ ಸಾಧಕ-ಭಾದಕಗಳನ್ನು ವಿವರಣೆ ಸಮೇತ ನೀಡುವುದು ತಮ್ಮ ಜವಾಬ್ದಾರಿ ಅರಣ್ಯ ಇಲಾಖೆಯಾಗಲೀ ಏಕೆ ಭಾವಿಸಿಲ್ಲ.

ಕರ್ನಾಟಕ ಸರ್ಕಾರದ ನಿಯಮಗಳ ಪ್ರಕಾರ ಸಾಮಾನ್ಯ ವಾಡಿಕೆಯಂತೆ ಈ ಅಂಶಗಳನ್ನು ಪರಿಗಣಿಸಿಲಾಗಿದೆಯೇ (i) ಶೃಂಗೇರಿ ನಗರವ್ಯಾಪ್ತಿಯಲ್ಲಿ ಹೆದ್ಧಾರಿ 169ನ್ನು ಯಾವ ಕಾರಣಕ್ಕಾಗಿ ಅಗಲೀಕರಣ ಮಾಡಬೇಕಾಗಿದೆ? (ii) ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರದ ಮಾನದಂಡದ ಪ್ರಕಾರ 169 ಹೆದ್ದಾರಿಯನ್ನು ಅಗಲೀಕರಣಗೊಳಿಸುವುದು ಅಗತ್ಯವಾಗಿದೆ? (iii) ಯಾವ ಅಂಕಿ-ಅಂಶಗಳು, ಅಂದರೆ, ವಾಹನ ದಟ್ಟಣೆ ಅಥವಾ ಇನ್ಯಾವುದೇ ನಿಯಮಗಳು ಈ ಅಗಲೀಕರಣ ಪ್ರಕ್ರಿಯೆಯನ್ನು ಸಮರ್ಥಸಿಸುತ್ತವೆ (ಹೆದ್ಧಾರಿ ಪ್ರಾಧಿಕಾರದ ಮಾರ್ಗದರ್ಶಿ ಸೂತ್ರಗಳು) (iv) ಶೃಂಗೇರಿ ನಗರ ಪ್ರದೇಶದಲ್ಲಿ ಸ್ವಾಭಾವಿಕವಾಗಿ ಹಾಗೂ ಕಾನೂನಾತ್ಮಕವಾಗಿ ವಾಹನದ ವೇಗಮಿತಿ ಕಡಿಮೆ ಇರುವುದರಿಂದ (ಹೆದ್ದಾರಿಯ ನಿರ್ಜನ ಭಾಗಗಳಲ್ಲಿ ಇರುವುದಕ್ಕಿಂತ ಅತ್ಯಂತ ಕಡಿಮೆ), 169 ಹೆದ್ದಾರಿಯನ್ನು ಪಟ್ಟಣ ಭಾಗದಲ್ಲಿ ಅಗಲೀಕರಣಗೊಳಿಸುವು ಅಗತ್ಯವೇನಿದೆ?

-ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ (ಫೆಬ್ರುವರಿ 2021), ಒಂದು ಬಲಿತ ಪಾರಂಪಾರಿಕ ಮರದ ಮೌಲ್ಯವು 74,50,000 (ಎಪ್ಪತ್ತನಾಲ್ಕು ಲಕ್ಷದ ಐವತ್ತು ಸಾವಿರ ರೂಪಾಯಿಗಳು). ಇದರ ಪ್ರಕಾರ ಶೃಂಗೇರಿ ಪಟ್ಟಣ ಪ್ರದೇಶದಲ್ಲಿ ಕಡಿಯಲಿರುವ 218 ಮರಗಳ ಮೌಲ್ಯ ಸುಮಾರು 163 ಕೋಟಿಗಳಾಗುತ್ತದೆ

-218 ಮರಗಳ ತೆರವಿನಿಂದ ಆಗುವ ಆರ್ಥಿಕ ನಷ್ಟವನ್ನು ಅರಣ್ಯ ಇಲಾಖೆ ಉಪಯೋಗಿ ಸಂಸ್ಥೆಯಿಂದ ಹೇಗೆ ಪಡೆಯುತ್ತದೆ? ಈ ಹಿಂದೆ ವಿವಿಧ ಯೋಜನೆಗಳ ಅಡಿಯಲ್ಲಿ ಆಗಿರುವ ನಷ್ಟವನ್ನು ಇಲಾಖೆ ಉಪಯೋಗಿ ಸಂಸ್ಥೆಗಳಿಂದ ಪಡೆದಿದೆಯೇ? 218 ಮರಗಳನ್ನು ತೆರವುಗೊಳಿಸಿದ ನಂತರದಲ್ಲಿ, ಅವುಗಳಿಗೆ ಪರ್ಯಾಯವಾಗಿ ಬೇರೆ ಎಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಲಾಗುವುದು?

 - ರಸ್ತೆ ಅಥವಾ ಹೆದ್ಧಾರಿ ಅಗಲೀಕರಣ ಸಂದರ್ಭದಲ್ಲಿ ಕಳೆದುಕೊಂಡ ಮರಗಳನ್ನು ಪರ್ಯಾಯವಾಗಿ ಎಲ್ಲಿ ಬೆಳೆಸಲಾಗಿದೆ ಎಂದು ಕೆಲವು ಉದಾಹರಣೆಯನ್ನು ಕೊಡ ಬಲ್ಲಿರಾ?

- ಅರಣ್ಯ ಇಲಾಖೆಯ ಯಾವ ವಿಭಾಗವೂ ಪರ್ಯಾಯ ಅರಣ್ಯೀಕರಣದ ಜವಾಬ್ದಾರಿಯನ್ನು ಹೊರುತ್ತದೆ? ಮತ್ತು ಅತ್ಯಂತ ಜವಾಬ್ದಾರಿಯಿಂದ ಮತ್ತು ಜತನದಿಂದ ಪರ್ಯಾಯ ಅರಣ್ಯ ಬೆಳೆಸಲಾಗುವುದು ಎಂಬುದಕ್ಕೆ ಸ್ಪಷ್ಟವಾದ ಖಾತರಿ ನೀಡಲಾಗುವುದೇ? ಹಾಗೂ ಈ ಪರ್ಯಾಯ ಅರಣ್ಯವನ್ನು ಬೆಳೆಸಿ, ಪೋಷಿಸಿ ಸಾರ್ವಜನಿಕರ ಅವಗಾಹನೆಗೆ ತರಲಾಗುವುದು ಎಂಬುದನ್ನೂ ಖಾತ್ರಿಯಾಗಿ ತಿಳಿಸುವಿರಾ?

 - ರಾಷ್ಟ್ರೀಯ ಹೆದ್ದಾರಿ 169ರ ಇಕ್ಕೆಲಗಳಲ್ಲಿ ತೆರವುಗೊಳಿಸಲು ಉದ್ಧೇಶಿಸಿದ 218 ಮರಗಳಲ್ಲಿ ವಾಸವಿರುವ/ಅವಲಂಬಿತವಾದ ಜೀವಿವೈವಿಧ್ಯದ ದಾಖಲೆ ಮಾಡಲಾಗಿದೆಯೇ? ಉದಾಹರಣೆಗೆ ಹಕ್ಕಿ-ಪಕ್ಷಿಗಳ ಗೂಡುಗಳು, ಪೊಟರೆಯಲ್ಲಿ ವಾಸಿಸಬಹುದಾದ ಸ್ತನಿಗಳು; ಜೇನುಗೂಡು; ಇರುವೆಗಳ ಅವಾಸಸ್ಥಾನ ಇತ್ಯಾದಿಗಳು? ಒಂದೊಮ್ಮೆ ಈ ರೀತಿಯ ಜೀವಿವೈವಿಧ್ಯಗಳನ್ನು ದಾಖಲು ಮಾಡದೇ ಇದ್ದಲ್ಲಿ, ಮರ ತೆರವು ಕಾರ್ಯಾಚರಣೆಯನ್ನು ಹೇಗೆ ಸಮರ್ಥಿಸಿಕೊಳ್ಳುವಿರಿ?

- ಮೇಲೆ ಹೇಳಿದ ಮರಗಳನ್ನು ತೆರವುಗೊಳಿಸಲು ಅನುಮತಿ ನೀಡುವ ಪೂರ್ವದಲ್ಲಿ; 218 ಮರಗಳ ಔಷಧೀಯ ಗುಣಗಳನ್ನು ಪಟ್ಟಿ ಮಾಡಲಾಗಿದೆಯೇ? ಮಾಡಿಲ್ಲದಿದ್ದಲ್ಲಿ, ನಿಮ್ಮ ಕ್ರಮವನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ?

- ಶೃಂಗೇರಿ ಪಟ್ಟಣದಲ್ಲಿ ಸಾಗುವ ರಾಷ್ಟ್ರೀಯ ಹೆದ್ದಾರಿ 169ರ ಹಾಲಿ ಇರುವ ಅಗಲವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಂಡಲ್ಲಿ (ಅಂದರೆ, ವಾಹನಗಳ ನಿಲುಗಡೆಗೆ ಬೇರೆ ವ್ಯವಸ್ಥೆ ಮಾಡುವುದು ಮತ್ತು ರಸ್ತೆಯ ಮೇಲಿರುವ ಅಂಗಡಿಗಳನ್ನು ತೆರವುಗೊಳಿಸಿ, ಒಳಚರಂಡಿ ನಿರ್ಮಿಸಿದರೆ, ಹಾಲಿ ಇರುವ ಅಗಲಕ್ಕಿಂತ 0.5 ಪಟ್ಟು ಹೆಚ್ಚು ಸ್ಥಳ ಲಭ್ಯವಾಗುತ್ತದೆ) ಪಟ್ಟಣ ಪ್ರದೇಶದಲ್ಲಿ ಹೆದ್ಧಾರಿಯನ್ನು ಅಗಲ ಮಾಡುವ ಪ್ರಮೇಯ ಬರುವುದಿಲ್ಲ.

 - ಲಾಗಾಯ್ತಿನಿಂದ ಶೃಂಗೇರಿ ಪಟ್ಟಣ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ಧಾರಿ 169ನ್ನು ಅಗಲ ಮಾಡುವ ಪ್ರಸ್ತಾಪವಿದ್ದಾಗ್ಯೂ, ಅಗಲೀಕರಣಗೊಳ್ಳುವ ಸ್ಥಳದ ವ್ಯಾಪ್ತಿಯಿಂದ ಹೊರಗೆ ಪರ್ಯಾಯವಾಗಿ ಗಿಡಗಳನ್ನು ನೆಟ್ಟು ಬೆಳೆಸುವ ಎಲ್ಲಾ ಅವಕಾಶಗಳೂ ಇತ್ತು. ಈಗ ಹತ್ತು ಹದಿನೈದು ವರ್ಷಗಳ ಹಿಂದೆಯೇ ಈ ಪ್ರಕ್ರಿಯೆಯನ್ನು ಅರಣ್ಯ ಇಲಾಖೆ ಮಾಡಿದ್ದರೆ, ಅದೊಂದು ನ್ಯಾಯೋಚಿತ ಪರಿಹಾರವಾಗುವ ಸಾಧ್ಯತೆ ಇತ್ತು. ಈಗ ಏಕಾಏಕಿ ಮರಗಳನ್ನು ತೆರವುಗೊಳಿಸುವ ಯೋಜನೆ ಅನೇಕ ಕ್ಲೇಶಗಳಿಗೆ ಕಾರಣವಾಗುತ್ತಿದೆ. ಜೊತೆಗೆ ಪಟ್ಟಣ ವ್ಯಾಪ್ತಿಯಲ್ಲಿ 169 ಹೆದ್ದಾರಿಯ ಇಕ್ಕೆಲಗಳಲ್ಲಿರುವ ಅಂಗಡಿ ಮುಗ್ಗಟ್ಟು, ಮಳಿಗೆ ಇತ್ಯಾದಿಗಳನ್ನು ಪರಿಹಾರ ನೀಡಿ ತೆರವುಗೊಳಿಸದೇ ಬರೀ ಬಲಿತ ಪಾರಂಪಾರಿಕ ಮರಗಳನ್ನು ತೆರವುಗೊಳಿಸುವ ಕ್ರಮ ಅನೇಕ ಅನುಮಾನಗಳನ್ನು ಹುಟ್ಟುಹಾಕುತ್ತದೆ.

ರಾಷ್ಟ್ರೀಯ ಹೆದ್ಧಾರಿ 169ರ ಇಕ್ಕೆಲಗಳಲ್ಲಿರುವ 218 ಮರಗಳನ್ನು ತೆರವುಗೊಳಿಸುವ ಪ್ರಕ್ರಿಯೆಯಲ್ಲಿ, ಸಾರ್ವಜನಿಕ ಅಹವಾಲು/ಆಕ್ಷೇಪಣೆಗಳನ್ನು ಆಲೈಸುವ ಇಲಾಖೆ/ಸಂಸ್ಥೆಯು ಉದ್ಧೇಶಿತ ಪ್ರಕ್ರಿಯೆಯನ್ನು ಮುಂದುವರೆಸಬೇಕೋ ಅಥವಾ ಕೈಬಿಡಬೇಕೋ ಎಂಬುದನ್ನು ಪೂರ್ವನಿರ್ಧರಿತ ತೀರ್ಮಾನಗಳನ್ನು ತೆಗೆದುಕೊಳ್ಳುವಂತಿಲ್ಲ. ಅಂದರೆ, ಯೋಜನೆಯ ಪರವೂ/ವಿರೋಧವೂ ಪಕ್ಷಪಾತಿಯಾಗಿರತಕ್ಕದ್ದಲ್ಲ. ಆದರೆ, ಈ ಪ್ರಕ್ರಿಯೆಯಲ್ಲಿ ತಾವುಗಳು ಮರ ತೆರವುಗೊಳಿಸುವುದನ್ನು ಒಪ್ಪಿಕೊಂಡು; ಬರೀ ಕಾನೂನಾತ್ಮಕ ದೃಷ್ಟಿಯಿಂದಷ್ಟೇ, ಮುಂದಿನ ಸಂಭಾವ್ಯ ಮುಜುಗರವನ್ನು/ಕಾನೂನುರೀತ್ಯಾ ಅಡ್ಡಿಗಳನ್ನು ತಪ್ಪಿಸಿಕೊಳ್ಳಲೋಸುಗ ಮಾತ್ರವೇ “ಅಹವಾಲು/ಆಕ್ಷೇಪಣೆ ಸಭೆ”ಯನ್ನು ಕರೆದಿರುತ್ತೀರಿ ಎಂದು ನಮ್ಮಗಳಿಗೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. 

ಆದ್ದರಿಂದ, ಮೇಲೆ ದಾಖಲಿಸಲಾದ ಎಲ್ಲಾ ವಿಷಯಗಳನ್ನು ಗಂಭೀರವಾಗಿ ಗಮನಿಸಿ, ಪ್ರತಿ ಆಕ್ಷೇಪಣೆ/ಅಹವಾಲುಗಳಿಗೆ ಸಾರ್ವಜನಿಕರು ಒಪ್ಪಬಹುದಾದ ಸಮಾಧಾನದ ಉತ್ತರವನ್ನು ನೀಡುವುದು ತಮ್ಮ ಆದ್ಯ ಕರ್ತವ್ಯವಾಗಿರುತ್ತದೆ. ಆದ್ದರಿಂದ, ಇದಕ್ಕೆ ಸಹಿ ಹಾಕಿದ ಹಾಗೂ ಈ ದಿನ ಮರಗಳ ತೆರವನ್ನು ವಿರೋಧಿಸಿದ ಸಭಿಕರ ಸಮ್ಮುಖದಲ್ಲಿ; ರಾಷ್ಟ್ರೀಯ ಹೆದ್ಧಾರಿ 206ರ ಅಗಲೀಕರಣ ಯೋಜನೆಯು ಅವೈಜ್ಞಾನಿಕವಾಗಿದ್ದು, ಪರಿಸರ ವಿರೋಧಿಯಾಗಿರುತ್ತದೆ. ಹಾಗೂ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸದರಿ ಮರಗಳ ನೈಸರ್ಗಿಕ ಸೇವೆಯ ಮೌಲ್ಯವನ್ನು ಪರಿಗಣಿಸಿ, ಆರ್ಥಿಕವಾಗಿಯೂ ಈ ಯೋಜನೆ ಸಾಧುವಲ್ಲ ಎಂಬುದನ್ನು ಉಪಯೋಗಿ ಸಂಸ್ಥೆ/ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರಕ್ಕೆ ಲಿಖಿತ ಮೂಲಕ ಸಾರ್ವಜನಿಕ ಎದುರಿನಲ್ಲೇ ಇಲಾಖೆವತಿಯಿಂದ ಉತ್ತರ ನೀಡಬೇಕು ಎಂದ ಆಗ್ರಹಪೂರ್ವಕವಾಗಿ ಹಕ್ಕೊತ್ತಾಯ ಮಾಡುತ್ತಿದ್ದೇವೆ. ಎಂದು ತಕರಾರು ಅರ್ಜಿಗಳಲ್ಲಿ ಉಲ್ಲೇಖ ಮಾಡಲಾಗಿದೆ.

ತಕರಾರು ಅರ್ಜಿಯನ್ನು ಅರಣ್ಯಸಂರಕ್ಷಣಾಧಿಕಾರಿಗಳು, ಕೊಪ್ಪ ವಿಭಾಗ ಅವರಿಗೆ ಕಳುಹಿಸುವಂತೆ ಮಾಹಿತಿಯಲ್ಲಿ ಪ್ರಕಟಿಸಲಾಗಿದೆ. ಸಮಯ ಕಡಿಮೆ ಇರುವ ಕಾರಣ   ಸ್ಪೀಡ್ ಪೋಸ್ಟ್ ಮೂಲಕ ಮಾತ್ರ ಕಳಿಸಿ . ನೀವು ಇಮೇಲ್ ಐಡಿ ಹೊಂದಿದ್ದರೆ ದಯವಿಟ್ಟು dcfKoppa@gmail.com ಗೆ ಇಮೇಲ್ ಮುಖಾಂತರ ಸಹ ಕಳಿಸಬೇಕೆಂದು ಅಭಿಯಾನ ನಡೆಸುವವರು ವಿನಂತಿ ಮಾಡಿಕೊಂಡಿದ್ದಾರೆ.