ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗದ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಇಂದು ಹಕ್ಕುಪತ್ರಗಳ ವಿತರಣಾ ಕಾರ್ಯಕ್ರಮ ನಡೆಯಿತು.

ಶಿವಮೊಗ್ಗ ನಗರದ ವಿದ್ಯಾನಗರದ ಕಲ್ಲರ್ಟಿ, ಜಟ್ ಪಟ್ ನಗರದ ೨೬೦ ಜನರಿಗೆ ಹಕ್ಕು ಪತ್ರಗಳನ್ನು ಶಿವಮೊಗ್ಗದ ಶಾಸಕರಾದ ಕೆ.ಎಸ್ ಈಶ್ವರಪ್ಪ ಅವರು ವಿತರಿಸಿದರು. ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಜನರಿಗೆ ಸರ್ಕಾರವು ಮನೆ ಕಟ್ಟಿಕೊಂಡು ಜೀವನ ನಡೆಸಲು ಪೂರಕವಾದ ಹಣದ ಸಹಾಯವನ್ನು ನೀಡುತ್ತದೆ ಎಂದರು.

ಆಶ್ರಯ ಯೋಜನೆಯಡಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ೩.೫೦ ಲಕ್ಷ ಹಣವನ್ನು ಉಚಿತವಾಗಿ ನೀಡುತ್ತದೆ. ಒಂದು ಲಕ್ಷ ರೂಪಾಯಿವರೆಗಿನ ಹಣವನ್ನು ಬ್ಯಾಂಕ್ ಸಾಲದ ರೂಪದಲ್ಲಿ ನೀಡುತ್ತದೆ,  ಯೋಜನೆಯನ್ನು ಅರ್ಹರು ಬಳಸಿಕೊಳ್ಳಬೇಕೆಂದರು. 

ಹಕ್ಕುಪತ್ರಗಳನ್ನು ಪಡೆದ ಈ ಭಾಗದಲ್ಲಿ ವಾಸಮಾಡುತ್ತಿದ್ದ ಜನರು ಸಂತಸವನ್ನು ವ್ಯಕ್ತಪಡಿಸಿದರು. ಹಕ್ಕುಪತ್ರಗಳ ವಿತರಣಾ ಸಂದರ್ಭದಲ್ಲಿ ಆಶ್ರಯ ಸಮಿತಿಯ ಅಧ್ಯಕ್ಷರಾದ ಶಶಿಧರ್ ಸೇರಿದಂತೆ ಮೊದಲಾದ ಪದಾಧಿಕಾರಿಗಳು ಶಾಸಕರೊಂದಿಗಿದ್ದರು. 

ಚಿಕ್ಕಮಗಳೂರು : ಭೀಕರ ರಸ್ತೆ ಅಪಘಾತ ; ಸ್ಥಳದಲ್ಲೇ ಪತಿ ಸಾವು ಪತ್ನಿಯ ಸ್ಥಿತಿ ಗಂಭೀರ

ಚಿಕ್ಕಮಗಳೂರು : ಬೈಕ್ ಹಾಗೂ ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿ ದಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿದ್ದ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆಂದು ಕಳೆದ ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಆನಂದ್ ಹಾಗೂ ರಂಜಿತಾ ತೆರಳಿದ್ದರು. ಮದುವೆಯನ್ನು ಮುಗಿಸಿಕೊಂಡು ಬರುವಾಗ ರಾಷ್ಟ್ರೀಯ ಹೆದ್ದಾರಿ 206 ರ ಶಿವಪುರ ಗೇಟ್ ಬಳಿ ತರೀಕೆರೆ ಕಡೆಯಿಂದ ಬಂದಂತಹ ಕಾರು ದಂಪತಿಗಳಿದ್ದ ಬೈಕ್ ಗೆ ಡಿಕ್ಕಿ ಹೊಡೆದು ಭೀಕರವಾಗಿ ಈ ಅಪಘಾತ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಬೈಕ್ ಎತ್ತರಕ್ಕೆ ಹಾರಿ ಕೆಳಬಿದ್ದಿದೆ ಎನ್ನಲಾಗಿದೆ. ಬೈಕ್ ಚಾಲಕ ಆನಂದ್ ಅವರ ತಲೆ ಮತ್ತು ಕೈಕಾಲುಗಳಿಗೆ ಗಂಭೀರವಾಗಿ ಗಾಯವಾದ ಪರಿಣಾಮ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅವರೊಂದಿಗಿದ್ದ ಪತ್ನಿ ರಂಜಿತಾ ಕೂಡ ಗಾಯಗೊಂಡಿದ್ದು ಅವರಿಗೆ ತಕ್ಷಣವೇ ಬೀರೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮೃತ ಯುವಕನನ್ನು ಕಳೆದುಕೊಂಡಿರುವ ಕುಟುಂಬಸ್ಥರು ಹಾಗೂ ಸಂಬಂಧಿಕರು, ಸ್ನೇಹಿತರು ಅತೀವವಾದ ಬೇಸರವನ್ನು ವ್ಯಕ್ತಪಡಿಸಿದ್ದಾರೆ.