ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಕಲುಷಿತಗೊಂಡಿದ್ದ ಕುಡಿಯುವ ನೀರನ್ನು ಸೇವಿಸಿ 30ಕ್ಕೂ ಅಧಿಕ ಜನರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರಿನ ಟಿಪ್ಪುನಗರ ಹಾಗೂ ಮಾರ್ಕೆಟ್ ರಸ್ಥೆಗೆ ಹೊಂದಿಕೊಂಡಂತಿರುವ ಶಾಂತಿನಗರದಲ್ಲಿ ಕುಡಿಯುವ ನೀರಿಗೆ ಒಳಚರಂಡಿ ನೀರು ಸೇರ್ಪಡೆಗೊಂಡ ಪರಿಣಾಮ ನೀರಿಗೆ ಸಣ್ಣ ಗಾತ್ರದ ಹುಳು ಹಾಗೂ ಮಣ್ಣು ಮಿಶ್ರಣಗೊಂಡು ಈ ಭಾಗದ ಮನೆಗಳಿಗೆ ಪೂರೈಕೆಯಾಗಿದೆ ಎನ್ನಲಾಗಿದೆ ಹಾಗೂ ಒಂದು ವಾರದಿಂದ ಇದನ್ನು ಕುಡಿದ ಜನರು ವಾಂತಿ ಭೇದಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಇದನ್ನೂ ಓದಿ : ಶೃಂಗೇರಿ: ಸ್ಕೂಲ್ ಟ್ರಿಪ್ ವಾಹನಕ್ಕೆ ಗುದ್ದಿದ ಇನೋವಾ ಕಾರು; ಅದೃಷ್ಟವಶಾತ್ ಮಕ್ಕಳು ಪಾರು 

ಕಲುಷಿತ ನೀರು ಸೇವಿಸಿದ 09 ಮಕ್ಕಳು ಸೇರಿದಂತೆ 30 ಕ್ಕೂ ಅಧಿಕ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ. ಕಳೆದೊಮದು ವಾರದಿಂದ ಪೂರೈಕೆಯಾದ ನೀರಿನಲ್ಲಿ ಕಲುಷಿತ ಅಂಶಗಳು ಮಿಶ್ರಿತವಾದ ಪರಿಣಾಮ ಅನೇಕರು ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ. ಇದರಲ್ಲಿ ಬಹುತೇಕ ಮಕ್ಕಳಿದ್ದಾರೆ ಎಂಬ ಮಾಹಿತಿ ದೊರೆತಿದೆ. ವಾರ್ಡಿನ ಯಾರಿಗಾದರೂ ತೀವ್ರತರಹದ ಆರೋಗ್ಯ ಸಮಸ್ಯೆ ಸಂಭವಿಸಿದರೆ ಅದಕ್ಕೆ ನಗರಸಭೆ ಅಧಿಕಾರಿಗಳ ನಿರ್ಲಕ್ಷವೇ ಬಹುಮುಖ್ಯ ಕಾರಣವಾಗಿರುತ್ತದೆ. ಈ ವ್ಯಾಪ್ತಿಗೆ ಕಲುಷಿತ ನೀರು ಪೂರೈಕೆಯಾಗುತ್ತಿರುವುದನ್ನು ತಡೆದು ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಬೇಕೆಂದು ಸಾರ್ವಜನಿಕರು ಕೋರಿದ್ದಾರೆ. 

ಮಳೆಗಾಲದ ಹಿನ್ನೆಲೆ ಯಾರಿಗೂ ಸಮಸ್ಯೆಯುಂಟಾಗದಂತೆ ಸ್ವಚ್ಚತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿ ನೀರು ಸರಬರಾಜು ಮಾಡಲಾಗುತ್ತಿದೆ. ಬಾಟಲಿ ಮತ್ತು ಡ್ರಮ್ ಗಳಲ್ಲಿ ಸಂಗ್ರಹಣೆ ಮಾಡಿ ಮುಚ್ಚುಳವನ್ನು ಸರಿಯಾಗಿ ಮುಚ್ಚದೇ ಇದ್ದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ನಗರಸಭಾ ಅಧ್ಯಕ್ಷರಾದ ವರಸಿಧ್ದಿ ವೇಣುಗೋಪಾಲ್ ಈ ಕುರಿತು ತಳಿಸಿದ್ದಾರೆ. 

ಮಳೆಗಾಲ ಆರಂಭವಾಗುವ ಈ ಸಮಯದಲ್ಲಿ ಸಾರ್ವಜನಿಕರು ಹೆಚ್ಚಿನದಾಗಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಂಭವವಿದ್ದು ಆರೋಗ್ಯದ ಮೇಲೆ ನಿಗಾವಹಿಸಬೇಕೆಂದು ವೈದ್ಯರು ತಿಳಿಸಿದ್ದಾರೆ.