ಬಾಳೆಹೊನ್ನೂರು ಬಂದ್  : 
ಬಾಳೆಹೊನ್ನೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವಂತೆ ಒತ್ತಾಯಿಸಿ ಜೂನ್ 6ಕ್ಕೆ ಬೃಹತ್ ಪ್ರತಿಭಟನೆಯೊಂದಿಗೆ ರಸ್ತೆ ತಡೆ ಮಾಡಿ ಬಾಳೆಹೊನ್ನೂರು ಬಂದ್ ಗೆ ಕರೆ ನೀಡಲಾಗಿದೆ. ಈ ಹಿಂದೆ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದ್ದರೂ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಿಲ್ಲ, ಈ ನಿಟ್ಟಿನಲ್ಲಿ ಹೋರಾಟ ಕೈಗೆತ್ತಿಕೊಳ್ಳುವ ಮೂಲಕ ನ್ಯಾಯಕ್ಕಾಗಿ ಪಕ್ಷಾತೀತವಾಗಿ ಹೋರಾಟ ಮಾಡಲು ತೀರ್ಮಾನಿಸಲಾಗಿದೆ. ಮೂಲಭೂತ ಸೌಕರ್ಯಕ್ಕಾಗಿ ಜನರು ಬೀದಿಗಿಳಿಯುವ ಪರಿಸ್ಥಿತಿ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ. ಶೃಂಗೇರಿ ಕ್ಷೇತ್ರದಲ್ಲಿ ವೈಟ್ ಕಾಲರ್ ರಾಜಕಾರಣಿಗಳ ಸಂತೆಯಾಗಿದ್ದು ಹೆಚ್ಚಿನವರಿಗೆ ರಾಜಕಾರಣ ತಮ್ಮ ದವಲತ್ತು ತೋರಿಸಲು ಒಂದು ಆಯ್ಕೆಯೇ ಹೊರತು ಜನಸಾಮಾನ್ಯರ ಕಷ್ಟಗಳ ಬಗ್ಗೆ ಯಾವುದೇ ನೈಜ ಕಾಳಜಿ ಇಲ್ಲ. ಮಲೆನಾಡಿನ ಜನರನ್ನು ಕಿತ್ತು ತಿನ್ನುವ ಹತ್ತು ಹಲವು ಸಮಸ್ಯೆಗಳು ತಾಂಡವವಾಡುತ್ತಿದೆ, ಉತ್ತಮ ವೈದ್ಯಕೀಯ ಸೌಲಭ್ಯವಿಲ್ಲದೆ, ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.

ಬೀರೂರು : ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವಕ 
ವಿಷ ಸೇವನೆ ಮಾಡಿ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆದಿದೆ. ವೀಲ್‌ಕಾರ್ಟ್ ಕಛೇರಿಯಲ್ಲಿ ವ್ಯವಸ್ಥಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ 25 ವರ್ಷ ಪ್ರಾಯದ ಸಂತೋಷ್ ಕುಮಾರ್ ಮೃತ ವ್ಯಕ್ತಿ. ಮೂಲತಃ ಚಿಕ್ಕನಾಯಕನ ಹಳ್ಳಿಯವರಾದ ಸಂತೋಷ್ ಕಳೆದ ಎರಡು ಮೂರು ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು, ಇದರಿಂದಾಗಿ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಕೊಪ್ಪ : ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಉಚಿತ ದಂತ ತಪಾಸಣಾ ಶಿಬಿರ :
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಎ.ಬಿ ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ಮಂಗಳೂರು ಹಾಗೂ ಶ್ರೀ ಶಾರದಾ ಧನ್ವಂತರಿ ಆಸ್ಪತ್ರೆ ಶೃಂಗೇರಿ ಇವರ ಆಶ್ರಯದಲ್ಲಿ ನಡೆಯಿತು. ಈ ಶಿಬಿರದಲ್ಲಿ 300 ಕ್ಕೂ ಅಧಿಕ ಜನರು ಪಾಲ್ಗೊಂಡು ತಮ್ಮ ಸಮಸ್ಯೆಯ ಕುರಿತು ವೈದ್ಯರಲ್ಲಿ ತಿಳಿಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡರು. ಶಿಬಿರದಲ್ಲಿ ಪಾಲ್ಗೊಂಡ 100 ಕ್ಕೂ ಅಧಿಕ ರೋಗಿಗಳಿಗೆ ಸ್ಥಳದಲ್ಲಿಯೇ ದಂತಕ್ಕೆ ಸಂಬಂಧಿಸಿದ ಎಲ್ಲಾ ಅಗತ್ಯ ಚಿಕಿತ್ಸೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಾರ್ವಜನಿಕ ಆಸ್ಪತ್ರೆ ಕೊಪ್ಪದಲ್ಲಿ ನಡೆದ ಈ ಶಿಬಿರದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಾನವಿ, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಮಹೇಂದ್ರ ಕಿರೀಟಿ, ಜಿಲ್ಲಾ ನೋಡಲ್ ಅಧಿಕಾರಿ ಡಾ. ಶ್ರೀನಿವಾಸ್ ಮತ್ತು ಎ.ಬಿ ಶೆಟ್ಟಿ ಕಾಲೇಜಿನ 25 ಕ್ಕಿಂತಲೂ ಹೆಚ್ಚು ದಂತವೈದ್ಯರು ಉಪಸ್ಥಿತರಿದ್ದರು.

ಮೂಡಿಗೆರೆ : ಲಂಚ ಪಡೆಯುತ್ತಿದ್ದ ಅಧಿಕಾರಿ ಎಸಿಬಿ ಅಧಿಕಾರಿಗಳ ಬಲೆಗೆ 
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಕಛೇರಿಯಲ್ಲಿ ಸೂಪರ್ ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಕಾಶ್ ಎಂಬ ಅಧಿಕಾರಿಯು, ಗೋಣಿಬೀಡು ಗ್ರಾಮದ ಮಹೇಶ್ ಎಂಬುವವರಿಂದ ಬರೋಬ್ಬರಿ ಒಂದು ಲಕ್ಷ ರೂಪಾಯಿ ಹಣ ಪಡೆಯುವಾಗ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ಪ್ರಕಾಶ್ ನ್ನು ಸೆರೆಹಿಡಿದಿದ್ದಾರೆ. ಈ ಕಾರ್ಯಾಚರಣೆಯು ಮೂಡಿಗೆರೆಯ ತಾಲೂಕು ಕಛೇರಿ ಬಳಿಯಲ್ಲಿ ನಡೆದಿದ್ದು, ಎಸಿಬಿ ಎಸ್ಪಿ ಸೈಮನ್, ಇನ್ಸ್ಪೆಕ್ಟರ್ ಅನಿಲ್ ರಾಥೋಡ್ ಭಾಗಿಯಾಗಿದ್ದರು. ಈ ಸಂಬಂಧ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

ಚಿಕ್ಕಮಗಳೂರು : ಬುರ್ಖಾದಲ್ಲಿ ಬಂದು ಹಾಲು ಕದ್ದ ಖದೀಮರು 
ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಪಟ್ಟಣಕ್ಕೆ ಬೈಕ್ ನಲ್ಲಿ ಬುರ್ಖಾ ಧರಿಸಿ ಆಗಮಿಸಿದ ಇಬ್ಬರು ಕಳ್ಳರು ಪಟ್ಟಣದ ಅಂಗಡಿ ಮುಂಭಾಗದಲ್ಲಿಟ್ಟಿದ್ದ ಹಾಲಿನ ಕ್ರೇಟ್ ಗಳಿಂದ ಹಾಲನ್ನು ಕದ್ದು ಸ್ಥಳದಿಂದ ಪರಾರಿಯಾಗಿದ್ದಾರೆ. ಲೀಟರ್ ಹಾಲಿನಲ್ಲಿ ದೊರೆಯುವುದು ಕೇವಲ ರೂಪಾಯಿಗಳ ಲಾಭ ಆದರೆ ಈ ಕಳ್ಳರು ಎಗರಿಸಿರುವ ಹಾಲಿನ ಪ್ರಮಾಣದಿಂದ ನಷ್ಟ ಅನುಭವಿಸಿರುವ ಮಾಲೀಕರು ತಮಗೆ ಕಳ್ಳರ ಕೃತ್ಯದಿಂದ ಉಂಟಾಗಿರುವ ನಷ್ಟದ ಕುರಿತು ತಿಳಿಸಿದ್ದಾರೆ. ಈ ಹಿಂದಿನಿಂದಲೂ ಈ ಭಾಗದಲ್ಲಿ ನಡೆಯುತ್ತಿದ್ದ ಕಳ್ಳತನದ ನಿಯಂತ್ರಣಕ್ಕಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿತ್ತು ಆದರೆ ಕ್ಯಾಮೆರಾ ಅಳವಡಿಕೆಯ ನಂತರವೂ ಕೂಡ ಕಳ್ಳರು ತಮ್ಮ ಕೈಚಳಕವನ್ನು ಮುಂದುವರೆಸಿರುವುದು ನಮ್ಮನ್ನು ಇನ್ನಷ್ಟು ಆತಂಕಕ್ಕೀಡುಮಾಡಿದೆ ಎಂದರು.

ಕೊಡಗು : ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ಮೃತಪಟ್ಟ ಕಾಡಾನೆ 
ನಾಡಿಗೆ ಬಂದಿದ್ದ ಕಾಡಾನೆಯೊಂದನ್ನು ಮರಳಿ ಕಡಿಗಟ್ಟುವ ಕಾರ್ಯಾಚರಣೆ ನಡೆಯುವ ವೇಳೆಯಲ್ಲಿ ಅನೆಯೊಂದು ದಾರುಣವಾಗಿ ಮೃತಪಟ್ಟ ದುರ್ಘಟನೆ ಸಂಭವಿಸಿದೆ. 
ಮಡಿಕೇರಿ ತಾಲೂಕಿನ ಮರಂದೋಡ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಸಾರ್ವಜನಿಕರ ಸಹಕಾರದೊಂದಿಗೆ ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಆರಂಭಿಸಿ ಕಾರ್ಯಾಚರಣೆ ನಡೆಸುತ್ತಿದ್ದರು. ಬಂದೂಕಿನಿಂದ ಅರವಳಿಕೆ ಮದ್ದನ್ನು ಹಾರಿಸಲಾಯಿತು. ಈ ಸಮಯದಲ್ಲಿ ಕುಸಿದು ಬಿದ್ದ ಆನೆ ಮೃತಪಟ್ಟಿದೆ.

ಶಿವಮೊಗ್ಗ : ವೃದ್ದೆಯನ್ನು ಜೋಲಿಯ ಮೂಲಕ ಆಸ್ಪತ್ರೆಗೆ ಹೊತ್ತೊಯ್ದ ಯುವಕ
ಅನಾರೋಗ್ಯಕ್ಕೆ ಒಳಗಾದ ವೃದ್ಧೆಯೊಬ್ಬರನ್ನು ಆಸ್ಪತ್ರೆಗೆ ಸೇರಿಸಲು ಸಂಪರ್ಕ ರಸ್ತೆ ಹಾಗೂ ಆಂಬ್ಯುಲೆನ್ಸ್‌ ವಾಹನ ಸೌಲಭ್ಯವಿಲ್ಲದೇ, ಜೋಲಿಯ ಮೂಲಕ ಹೊತ್ತೊಯ್ಯುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಸಾಗರ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತದದ ವೈಫಲ್ಯ ಕಣ್ಣಿಗೆ ಕಟ್ಟುವಂತಿದೆ. ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೆ ಏರಿರುವ ಕಾರ್ಗಲ್‌ ಜೋಗ್‌ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂತಹ ದುರವಸ್ಥೆ ಕಂಡುಬಂದಿದೆ


ಶಿವಮೊಗ್ಗ : ಅವೈಜ್ಞಾನಿಕ ಆಸ್ತಿ ತೆರಿಗೆ ಹೆಚ್ಚಳ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ ಅವರ ನೇತೃತ್ವದಲ್ಲಿ ಶಿವಮೊಗ್ಗ ಪಾಲಿಕೆ ಮುಂದೆ ಪ್ರತಿಭಟನೆ ನಡೆಸಿದರು. ಆಸ್ತಿ ತೆರಿಗೆ ಅವೈಜ್ಞಾನಿಕವಾಗಿ ನಿರ್ಧರಿಸಲಾಗಿದ್ದು, ಇದರಿಂದ ತೆರಿಗೆದಾರರ ಮೇಲೆ ಹೊರೆಯಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜನರ ಹಿತವನ್ನ ಸಂಪೂರ್ಣ ಕಡೆಗಣಿಸಲಾಗಿದೆ. ತಕ್ಷಣವೇ ತೆರಿಗೆ ವಾಪಸ್ ಪಡೆಯಬೇಕು. ಹಳೆಯ ತೆರಿಗೆಯನ್ನೇ ಮುಂದುವರಿಸಬೇಕು ಎಂದು ಪಾಲಿಕೆ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ತೀರ್ಥಹಳ್ಳಿ: ಧರೆಗುರುಳಿದ ಮರ ಕೆಲಕಾಲ ಟ್ರಾಫಿಕ್ ಜಾಮ್ 
ಮರ ಧರೆಗುರುಳಿದ ಪರಿಣಾಮ ಆಗುಂಬೆ ಘಾಟಿಯಲ್ಲಿ ಕೆಲಕಾಲ ವಾಹನ ಸಂಚಾರ ಬಂದ್ ಆದ ಘಟನೆ ನಡೆದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮರವನ್ನು ತೆರವುಗೊಳಿಸಿದ್ದಾರೆ. ಮರ ಬಿದ್ದ ಪರಿಣಾಮ ಘಾಟಿಯಲ್ಲಿ ಕೆಲ ಸಮಯ ಟ್ರಾಫಿಕ್ ಜಾಮ್ ಉಂಟಾಗಿತ್ತು.

ತೀರ್ಥಹಳ್ಳಿ : ಎನ್.ಎಸ್.ಯು.ಐ ನಡೆ ಖಂಡನಾರ್ಹ
ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರ ನಿವಾಸದ ಮೇಲೆ ಎನ್ಎಸ್ ಯುಐ ಕಾರ್ಯಕರ್ತರು ನಡೆಸಿದ ದಾಳಿಯನ್ನು ಗೃಹಸಚಿವ ಆರಗ ಜ್ಞಾನೇಂದ್ರ ಖಂಡಿಸಿದ್ದಾರೆ, ನೆಲೆ ಕಳೆದುಕೊಂಡ ಕಾಂಗ್ರೆಸ್ ಪಕ್ಷ ಇಂಥ ನೀಚ ಕೃತ್ಯಕ್ಕೆ ಕುಮ್ಮಕ್ಕು ನೀಡಿದ್ದು. ರಾಜ್ಯ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಹಾಸನ : ನಡುರಸ್ತೆಯಲ್ಲಿ ಜೆಡಿಎಸ್ ನಗರಸಭೆ ಸದಸ್ಯನ ಭೀಕರ ಹತ್ಯೆ :
ಹಾಸನ ನಗರಸಭೆಯ ಜೆಡಿಎಸ್ ಬೆಂಬಲಿತ ಸದಸ್ಯ ಪ್ರಶಾಂತ್ ಅವರನ್ನು ಕೆಲ ಕಿಡಿಗೇಡಿಗಳು ಬೈಕ್ ನ ಮೂಲಕ ಹಿಂಬಾಲಿಸಿ ಹತ್ಯೆ ಗೈದಿದ್ದಾರೆ. ನಗರಸಭೆ ಸದಸ್ಯ ಪ್ರಶಾಂತ್ ಬೈಕ್ನಲ್ಲಿ ತೆರಳುತ್ತಿದ್ದಾಗ ಹಾಸನದ ಜವೇನಹಳ್ಳಿ ಮಠದ ರಸ್ತೆಯಲ್ಲಿ ಇಂದು ರಾತ್ರಿಯ ವೇಳೆ ಈ ಘಟನೆ ನಡೆದಿದೆ. ಘಟನೆ ಕುರಿತು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಿಂದ ಮತ್ತು ಪ್ರಶಾಂತ್ ಆಪ್ತ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.