ಶೃಂಗೇರಿ : (News Malnad Special Desk) ಚಾರ್ಲಿ 777 ಚಿತ್ರದ ನಾಯಕಿ ಸಂಗೀತಾ ಶೃಂಗೇರಿ, ದೇವಿಕಾ ಆಗಿ ಚಿತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ಈ ಹಿಂದೆ ಹರಹರ ಮಹಾದೇವ ಧಾರಾವಾಹಿಯಲ್ಲಿ ಪಾರ್ವತಿಯಾಗಿ ನಟಿಸಿದ್ದ ಸಂಗೀತ ಎಲ್ಲರ ಮನೆ ಮಾತಾಗಿದ್ದರು.
ರಿಲೀಸ್ ಆದ ಒಂದೇ ದಿನದಲ್ಲಿ ಬಹಳಷ್ಟು ಸದ್ದು ಮಾಡುತ್ತಿರುವ ಕನ್ನಡದ ಚಿತ್ರ ಚಾರ್ಲಿ 777 ನಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸಿರುವ ಸಂಗೀತಾ, ಈ ಚಿತ್ರಕ್ಕಾಗಿಯೆ ಎರಡು ವರ್ಷಗಳಿಂದ ಬೇರಾವುದೇ ಚಿತ್ರವನ್ನು ಒಪ್ಪಿಕೊಂಡಿಲ್ಲ.
ಭಾರತೀಯ ವಾಯುಸೇನೆಯ ಮಾಜಿ ಸೈನಿಕ ಶಿವಕುಮಾರ್ ಕೆ ಹಾಗೂ ಭವಾನಿ ದಂಪತಿಗಳ ಪುತ್ರಿಯಾದ ಸಂಗೀತಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಹರಹರ ಮಹಾದೇವ ಧಾರಾವಾಹಿಯಲ್ಲಿ ಸತಿ, ದಾಕ್ಷಾಯಿಣಿಯಾಗಿ ಪಾತ್ರ ನಿರ್ವಹಿಸಿ ಗುರುತಿಸಿಕೊಂಡಿದ್ದರು.
ಚಾರ್ಲಿ ಚಿತ್ರದ ಕುರಿತು ಹಂಚಿಕೊಂಡಿರುವ ಅವರು ಈ ಚಿತ್ರದಲ್ಲಿ ದೇವಿಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ, ನಿರ್ವಹಿಸಿದ ಪಾತ್ರದ ಕುರಿತು ತೆರೆಯ ಮೇಲೆ ಕಂಡಾಗ ಬಹಳಷ್ಟು ಖುಷಿಯಾಯಿತು, ನನ್ನ ಮೇಲೆ ನನಗೇ ಹೆಮ್ಮೆ ಮೂಡಿತು ರಕ್ಷಿತ್ ಶೆಟ್ಟಿ ಅವರೊಂದಿಗಿನ ಅಭಿನಯ ಹೊಸತೊಂದು ಅನುಭವವನ್ನು ನೀಡಿದೆ ಎಂದರು.
ಶೃಂಗೇರಿ ಯುವತಿಯು ಒಂದು ಅದ್ಭುತವಾದ ಚಿತ್ರದಲ್ಲಿ ನಟನೆ ಮಾಡಿ ಪ್ರೇಕ್ಷಕರ ಮನಸನ್ನು ಗೆದ್ದಿರುವುದು ಮಲೆನಾಡಿಗರು ಅತ್ಯಂತ ಖುಷಿಪಡುವಂತಾಗಿದೆ. ಸಂಗೀತಾ ಅವರ ಮುಂದಿನ ಚಿತ್ರಗಳು ಸದಾ ಯಶಸ್ಸಿನಿಂದ ಕೂಡಿರಲಿ ಎಂದು ಪ್ರೇಕ್ಷಕರು ಹಾಗೂ ಸ್ಥಳೀಯರು ತುಂಬು ಮನಸ್ಸಿನಿಂದ ಹಾರೈಸಿದ್ದಾರೆ.





0 Comments