ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ) ಅನಧಿಕೃತವಾಗಿ ನರಸಿಂಹರಾಜಪುರದ ಕಡಹೀನ ಬೈಲು ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗಿರುವ ಶಿಲುಬೆಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನರಸಿಂಹರಾಜಪುರ ಘಟಕ ಈ ಹಿಂದೆ ಬೃಹತ್ ಪ್ರತಿಭಟನೆ ಹಾಗೂ ಕರಗುಂದ ಚಲೋ ನಡೆಸಿತ್ತು ಹಾಗೂ ಅಧಿಕಾರಿಗಳಿಗೆ ಗಡುವು ನೀಡಿತ್ತು ಈ ಹೋರಾಟದ ಬಳಿಕದಲ್ಲಿ ಇದೀಗ ಪ್ರಸ್ತುತ ಜಿಲ್ಲಾಡಳಿತವೇ ಶಿಲುಬೆಯನ್ನು ತೆರವುಗೊಳಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕಡಹಿನಬೈಲು ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಶಿಲುಬೆಯ ನಿರ್ಮಾಣವಾಗಿದೆ ಎಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ಕರಗುಂದ ಚಲೋಗೆ ಕರೆನೀಡಿ ಅಂತೆಯೇ ಅಂದು ಬೃಹತ್ ಪ್ರತಿಭಟನೆ ನಡೆಸಿದ್ದರು, ಈ ಸಂದರ್ಭದಲ್ಲಿ ಅಧಿಕಾರಿಗಳು ನಿರ್ದಿಷ್ಟ ದಿನದ ಗಡುವನ್ನು ಕೇಳಿದ್ದರು, ಹಾಗೂ ಜಾಗದ ಕುರಿತಾಗಿ ಸೂಕ್ತ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ನಿಗದಿತವಾದ ದಿನ ಕಳೆದರೂ ಕೂಡ ಯಾವುದೇ ಕ್ರಮಗಳನ್ನು ಕೈಗೊಳ್ಳದೆಯಿದ್ದ ಪರಿಣಾಮ ಕ್ರಮ ಆಗ್ರಹ ಚಲೋ ಎಂಬ ಅಭಿಯಾನವನ್ನು ನರಸಿಂಹರಾಜಪುರದ ತಾಲೂಕು ಕಚೇರಿ ಎದುರು ನಡೆಸಿದ್ದರು.
ವಿಶ್ವ ಹಿಂದೂ ಪರಿಷತ್ ಬಜರಂಗದಳದ ಹೋರಾಟಕ್ಕೆ ಸಂದ ಜಯ ಇದಾಗಿದೆ, ಇಂತಹ ಹೋರಾಟಗಳಲ್ಲಿ ಬಜರಂಗದಳ ಸದಾ ಮುನ್ನೆಲೆಯಲ್ಲಿರುತ್ತದೆ, ಇಂತಹ ವಿಚಾರಗಳ ಮೇಲೆ ಜಿಲ್ಲಾಡಳಿತ ಸೂಕ್ತ ನಿಗಾವಹಿಸಬೇಕು - ಆರ್. ಡಿ ಮಹೇಂದ್ರ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಚಿಕ್ಕಮಗಳೂರು.
ಈ ಸಂದರ್ಭದಲ್ಲಿ ಪ್ರತಿಭಟನಾ ನಿರತರಿಗೆ ಈ ಕುರಿತಾದ ಮಾಹಿತಿ ನೀಡಿದ್ದ ತಹಶೀಲ್ದಾರ್, ಈ ಜಾಗವು ಕಿರು ಅರಣ್ಯ ವ್ಯಾಪ್ತಿಗೆ ಸೇರುತ್ತದೆ. ಈ ಸ್ಥಳದಲ್ಲಿ ನಿರ್ಮಾಣ ಮಾಡಿರುವ ಶಿಲುಬೆಯನ್ನು ತೆರವು ಮಾಡಲು ಚರ್ಚಿನ ಮುಖ್ಯಸ್ಥರಿಗೆ ಕೆಲ ಸಮಯ ಗಡುವು ನೀಡಲಾಗಿದೆ ಎಂದಿದ್ದರು. ಆದರೆ ಅವರು ತೆರವುಗೊಳಿಸದ ಕಾರಣ ನಿನ್ನೆ ಸ್ಥಳಕ್ಕೆ ಖುದ್ದಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಂಬಂದಿಸಿದ ಇಲಾಖೆಯ ಅಧಿಕಾರಿಗಳು ತೆರವುಗೊಳಿಸಲು ಮುಂದಾದಾಗ, ಚರ್ಚ್ ಕಮಿಟಿಯವರೇ ಅನಧಿಕೃತವಾಗಿ ನಿರ್ಮಾಣಗೊಂಡಿದ್ದ ಶಿಲುಬೆಯನ್ನು ತೆರವುಗೊಳಿಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.





0 Comments