ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನದಾಗಿ ಮುಂಗಾರು ಮಳೆ ಆಗುವ ಮುನ್ಸೂಚನೆ ಇರುವುದರಿಂದ ಚಿಕ್ಕಮಗಳೂರು ಜಿಲ್ಲಾಡಳಿತ ಈ ಬಾರಿ ಮಲೆನಾಡಿನಾದ್ಯಂತ  ಹೈ ಅಲರ್ಟ್ ಘೋಷಣೆ ಮಾಡಿದೆ. 

 ಇದನ್ನೂ ಓದಿ :  ಚಿಕ್ಕಮಗಳೂರಿನಲ್ಲೊಬ್ಬ ‘ಬುಲ್ಡೋಜರ್ ಬಾಬ’

ಮಳೆಗಾಲದ ಸಂದರ್ಭದಲ್ಲಿ ಅಬ್ಬರದ ಮಳೆಯಾಗುವ ಹಾಗೂ ಹೆಚ್ಚು ಹಾನಿಗೀಡಾಗುವ ಮಲೆನಾಡು ಹಾಗೂ ಅರೆಮಲೆನಾಡು ಭಾಗದಲ್ಲಿ ಈ ಬಾರಿ ಯಾವುದೇ ದೊಡ್ಡ ಮಟ್ಟದ ತೊಂದರೆಗಳು ಉಂಟಾಗದಂತೆ, ಸುರಕ್ಷತಾ ಕ್ರಮಗಳನ್ನು ಹಾಗೂ ಅಗತ್ಯ ಮುಂಜಾಗ್ರತೆಯನ್ನು ಜಿಲ್ಲಾಡಳಿತ ಕೈಗೊಂಡಿದೆ. 

ಈ ಬಾರಿಯ ಮುಂಗಾರು ಮಳೆಯನ್ನು ಎದುರಿಸಲು 83 ಟ್ರ್ಯಾಕ್ಟರ್, 155 ಟಿಪ್ಪರ್, 65 ಹಿಟಾಚಿ, 64 ಜೆಸಿಬಿ ಗಳನ್ನು ತುರ್ತು ಕಾರ್ಯಾಚರಣೆಗಾಗಿ ಜಿಲ್ಲಾಡಳಿತ ಸಜ್ಜು ಮಾಡಿಕೊಂಡಿದೆ. ಇದಲ್ಲದೇ 77 ಅಪಾಯದಲ್ಲಿರುವ ಗ್ರಾಮಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಚಿಕ್ಕಮಗಳೂರಿನಲ್ಲಿ 05, ಮೂಡಿಗೆರೆ 33, ನರಸಿಂಹರಾಜಪುರ 21, ಕೊಪ್ಪ 06, ಶೃಂಗೇರಿಯಲ್ಲಿ 09, ತರೀಕೆರೆಯಲ್ಲಿ 01, ಕಡೂರಿನಲ್ಲಿ 02 ಗ್ರಾಮವನ್ನು ಜಿಲ್ಲಾಡಳಿತ ಅಪಾಯದ ಸ್ಥಳವೆಂದು ಗುರುತುಮಾಡಿದೆ.

ಅಪಾಯ ಎದುರಿಸಲು ತಂಡಗಳ ನಿಯೋಜನೆ : 

ಮಳೆಗಾಲದ ಪ್ರವಾಹದ ಸಂದರ್ಭದಲ್ಲಿ ಜನರನ್ನು ರಕ್ಷಣೆ ಮಾಡಲು ಹಾಗೂ ತುರ್ತು ಸಂದರ್ಭಗಳಲ್ಲಿ ಚುರುಕಾಗಿ ಕಾರ್ಯ ನಿರ್ವಹಿಸುವ ಉದ್ದೇಶದಿಂದ ಜಿಲ್ಲಾದ್ಯಂತ ಹೋಬಳಿವಾರು ತರಬೇತಿ ಹೊಂದಿರುವ 34 ತಂಡವನ್ನು ರಚನೆ ಮಾಡಿದ್ದು 40 ಜನ ಸ್ವಯಂ ಸೇವಕರು, 70 ಈಜು ತಜ್ಞರು, 290 ಹೋಂ ಗಾರ್ಡ್ ಗಳ ನಿಯೋಜನೆಯನ್ನು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 

ಕಳೆದ ಕೆಲ ವರ್ಷಗಳ ಮಳೆಗೆ ಸೂರು ಹಾಗೂ ತೋಟ ಗದ್ದೆಗಳನ್ನು ಕಳೆದುಕೊಂಡಿರುವ ಅನೇಕರು ಇನ್ನೂ ತಮಗೆ ದೊರೆಯದೇ ಇರುವ  ಪರಿಹಾರವನ್ನು ಶೀಘ್ರವಾಗಿ ದೊರೆಯುವಂತೆ ಮಾಡಬೇಕೆಂದು ಕೋರಿದ್ದಾರೆ.


ಜಲಪ್ರವಾಹ ಮತ್ತು ಭೂ ಕುಸಿತ ಉಂಟಾಗಬಹುದಾದ ಸ್ಥಳಗಳನ್ನು ಗುರುತಿಸಿದ ಕೊಡಗು ಜಿಲ್ಲಾಡಳಿತ 

ಕೊಡಗು : ಮಳೆಗಾಲದ ಸಂದರ್ಭದಲ್ಲಿ ಉಂಟಾಗುವ ನೆರೆಯಿಂದ ಹಾಗೂ ಗುಡ್ಡ ಕುಸಿತದಿಂದ ಹನಿಗೀಡಾಗುವ ಪ್ರದೇಶಗಳನ್ನು ಕೊಡಗು ಜಿಲ್ಲಾಡಳಿತ ಗುರುತಿಸಿ ಈ ಸಂಬAಧ ಜನರಿಗೆ ಯಾವುದೇ ರೀತಿಯ ಸಮಸ್ಯೆಗಳುಂಟಾಗದಂತೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವತ್ತ ಸಜ್ಜಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 

ಕೊಡಗು ಜಿಲ್ಲೆಯ ಅನೇಕ ಭಾಗಗಳು ಕಳೆದ ಕೆಲ ವರ್ಷಗಳ ಮಳೆಗೆ ನಲುಗಿದ್ದವು. ಬಹುತೇಕ ಭಾಗಗಳಲ್ಲಿ ಗುಡ್ಡ ಕುಸಿತ ಮುಂತಾದವುಗಳು ಉಂಟಾಗಿ ಜನರ ಬದುಕನ್ನು ಅವರಿಗೆ ಆಶ್ರಯ ಕಲ್ಪಿಸಿದ್ದ ಮನೆಗಳನ್ನು ಬೀದಿಗೆ ತಂದಿತ್ತು. ಈ ಹಿನ್ನೆಲೆ ಈ ಬಾರಿ ಅಂತಹ ಪ್ರಕರಣಗಳು ಮರುಕಳಿಸದ ರೀತಿಯಲ್ಲಿ ಜನರ ಬದುಕನ್ನು ಸುರಕ್ಷಿತವಾಗಿರಿಸುವ ಉದ್ದೇಶದಿಂದ ಜಿಲ್ಲಾಡಳಿತ ಅಂತಹ ಪ್ರದೇಶಗಳನ್ನು ಗುರುತಿಸಿ ಪಟ್ಟಿ ಮಾಡಿದೆ.

ಈ ಬಾರಿ ಕೊಡಗು ಜಿಲ್ಲೆಯಲ್ಲಿ 44 ಕಡೆ ಭೂಕುಸಿತ ಹಾಗೂ 43 ಕಡೆಯಲ್ಲಿ ಜಲಪ್ರವಾಹದ ಸ್ಥಳಗಳನ್ನು ಜಿಲ್ಲಾಡಳಿತ ಗುರುತಿಸಿದೆ, ಹೀಗಾಗಿ, ಕೊಡಗಿನ ಜನತೆ ಆತಂಕದಲ್ಲಿಯೇ ಜೀವನ ಕಳೆಯುವಂತಾಗಿದೆ. ಜಿಲ್ಲೆಯ 5 ತಾಲೂಕುಗಳ 10 ಹೋಬಳಿಯ 100 ಕಡೆಯಲ್ಲಿ ಜಲಕಂಟಕ ಎದುರಾಗುವ ಸೂಚನೆಯನ್ನು ಅಧಿಕಾರಿಗಳ ತಂಡ ನೀಡಿದ್ದು ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸುರಕ್ಷತಾ ಕಾರ್ಯವನ್ನು ಆರಂಭಿಸಿದೆ.

ಮಳೆಗಾಲದಲ್ಲಿ ಆತಂಕದಿಂದ ಜೀವನ ನಿರ್ವಹಣೆ ಮಾಡಬೇಕಿರುವ ಅಸುರಕ್ಷಿತ ಭಾಗಗಳ ಜನರಿಗೆ ನೊಟೀಸ್ ನೀಡಿ ಸುರಕ್ಷಿತವಾಗಿರುವ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುವಂತೆ ವ್ಯವಸ್ಥೆ ಕಲ್ಪಿಸಲಾಗುವುದು. ಜನರ ಸುರಕ್ಷತೆಯ ದೃಷ್ಟಿಯಿಂದ ಈಗಾಗಲೇ ಸಿದ್ಧತೆಗಳನ್ನು ಜಿಲ್ಲಾಡಳಿತ ಆರಂಭಿಸಿದೆ, ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿಗಳು ಸೇರಿದಂತೆ ಅಗ್ನಿ ಶಾಮಕದಳ, ಪೊಲೀಸ್ ಇಲಾಖೆ ಎಲ್ಲರನ್ನು ಸೇರಿಸಿ ತಂಡದ ರಚನೆ ಮಾಡುವ ಮೂಲಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ನೆರೆ ಪರಿಹಾರಕ್ಕೆ ಸಂತ್ರಸ್ತರ ಆಗ್ರಹ :
ಈ ಹಿಂದೆ 2018 ರಲ್ಲಿ ನೆರೆಹಾನಿಗೀಡಾಗಿದ್ದ ಸಂತ್ರಸ್ತರಿಗೆ ಇದುವರೆಗೂ ಯಾವುದೇ ಪರಿಹಾರಗಳು ಒದಗಿಲ್ಲ, ಈ ಕುರಿತಾಗಿ ಅಧಿಕಾರಿಗಳು ಗಮನಹರಿಸಬೇಕು, ನಿವೇಶನವನ್ನು ಗುರುತಿಸಿ ಸಮಯ ಕಳೆದರೂ ಇದುವರೆಗೆ ಯಾವುದೇ ರೀತಿಯ ಪ್ರಕ್ರಿಯೆ ನಡೆದಿಲ್ಲ, ಚುರುಕಾಗಿ ಈ ಪ್ರಕ್ರಿಯೆಗಳು ಆರಂಭವಾಗಬೇಕೆಂದು ಸಂತ್ರಸ್ತರು ಕೋರಿದ್ದಾರೆ.