ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ)  ಕಲುಷಿತ ನೀರು ಸೇವಿಸಿ ಕೂಲಿ ಕಾರ್ಮಿಕನೋರ್ವ  ಮೃತಪಟ್ಟಿರುವ  ಪ್ರಕರಣ ಬೆಳಕಿಗೆ ಬಂದಿದೆ. 

ಇದನ್ನೂ ಓದಿ : ಕಳಪೆ ಕಾಮಗಾರಿಯಿಂದ ಸೇತುವೆ ಕುಸಿತ ; ಸಾರ್ವಜನಿಕರ ಆರೋಪ

ಶಿವಮೊಗ್ಗದ ಮಂಡ್ಲಿ-ಕಲ್ಲೂರು ಕೈಗಾರಿಕಾ ಪ್ರದೇಶದ ಬಳಿಯ ಶಾರದಾ ನಗರದಲ್ಲಿನ ರಘು ಅವರ ಕುಟುಂಬ ಶಾರದಾ ನಗರದ ಮುಖ್ಯರಸ್ತೆಯಲ್ಲಿ ವಾಸವಿದ್ದಾರೆ. ಫ್ಯಾಕ್ಟರಿಯಲ್ಲಿ ವೆಲ್ಡಿಂಗ್ ಮೆಕ್ಯಾನಿಕ್ ಆಗಿದ್ದ ರಘು ಕೆಲಸ ಅರಸಿ ದಶಕಗಳ ಹಿಂದೆ ಒಡಿಶಾದಿಂದ ಶಿವಮೊಗ್ಗಕ್ಕೆ ಬಂದಿದ್ದರು.  ಜೂನ್ 12 ರಂದು ಸಂಜೆ ವಾಂತಿ ಭೇದಿಯಿಂದ ತೀವ್ರ ಅಸ್ವಸ್ಥಗೊಂಡಿದ್ದ ರಘು ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಶಿಫಾರಸ್ಸಿನಂತೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಂದ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕಲುಷಿತ ನೀರು ಸೇವಿಸಿದ್ದ ಕಾರ್ಮಿಕ ರಘು ಅವರ ಪತ್ನಿ ಅನುಸೂಯಾ ಅವರಿಗೂ ವಾಂತಿ ಆಗಿದೆ. ಅವರು ಸ್ಥಳೀಯ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಕಾವ್ಯ ಅಕ್ಕನ ಮನೆಯಲ್ಲಿ ಓದುತ್ತಿದ್ದು, ಮಗ ಕಾರ್ತಿಕ್ ಕೆಲಸದ ಮೇಲೆ ಹೊರಗೆ ಹೋಗಿದ್ದರಿಂದ ಅವರಿಗೆ ತೊಂದರೆಯಾಗಿಲ್ಲ ಎಂದು ಅನುಸೂಯಾ ಹೇಳಿದರು.

ಈ ಭಾಗದಲ್ಲಿ  ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿರುವ ಹಿನ್ನೆಲೆ, ಜೆಸಿಬಿಯಿಂದ ಚರಂಡಿ ದುರಸ್ತಿ ವೇಳೆ ಪಕ್ಕದಲ್ಲಿಯೇ ಹಾಯ್ದು ಹೋಗಿರುವ  ಪೈಪ್ ಒಡೆದು ಚರಂಡಿಯಲ್ಲಿನ ಕೈಗಾರಿಕೆಯ ತ್ಯಾಜ್ಯ ಕುಡಿಯುವ ನೀರಿನ ಪೈಪ್‌ನಲ್ಲಿ ಸೇರಿಕೊಂಡಿದೆ ಎಂದು ಸಾರ್ವಜನಿಕರಿಂದ ಕೇಳಿ ಬಂದಿದೆ.

ರಾಜ್ಯದ ಅನೇಕ ಭಾಗಗಳಲ್ಲಿ ಈ ರೀತಿಯ ನೀರಿನ ಸಮಸ್ಯೆ ತಲೆದೋರಿದ್ದು, ಘಟನಾ ಕುರಿತಂತೆ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಸಂಬಂಧ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಂಡು, ಸಾರ್ವಜನಿಕರಿಗೆ ಯಾವುದೇ ಸಮಸ್ಯೆಗಳುಂಟಾಗದಂತೆ ನೋಡಿಕೊಳ್ಳಬೇಕೆಂದು ಸಾರ್ವಜನಿಕರು ಕೋರಿದ್ದಾರೆ.

ಸಿಲಿಂಡರ್ ಸ್ಫೋಟ ; ಓರ್ವ ಬಾಲಕಿ ಸೇರಿದಂತೆ ಇಬ್ಬರಿಗೆ ಗಾಯ : 

ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ಬೀರೂರಿನಲ್ಲಿ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಬೀರೂರಿನ ಯರೇಹಳ್ಳಿಯಲ್ಲಿ ಮಂಗಳವಾರ ಮಧ್ಯಾಹ್ನ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಸಂಭವಿಸಿದ ಸ್ಫೋಟದ ತೀವ್ರತೆಗೆ ಮನೆಯ ಛಾವಣಿ ಹೆಂಚುಗಳು ಹಾರಿದೆ.

ಮರುಳಸಿದ್ದಪ್ಪ, ಹಾಗೂ ಚೈತನ್ಯ ಎಂಬ ಇಬ್ಬರು ಗಾಯಾಳುಗಳು. ಮರುಳಸಿದ್ದಪ್ಪ ಅಡುಗೆ ಮಾಡಲೆಂದು ಗ್ಯಾಸ್ ಸ್ಟೌವ್  ಹಚ್ಚಲು ಮುಂದಾದಾಗ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಗೆ ಬೆಂಕಿ ಹೊತ್ತಿಕೊಂಡಿದೆ. 

ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : https://forms.gle/APPtk8M3ZDk2oMka6

ಗಾಬರಿಗೊಂಡು ಹೊರಗೆ ಓಡುವಾಗ ಬಾಗಿಲ ಬಳಿ ಬರುವಷ್ಟರಲ್ಲಿಯೇ ಸಿಲಿಂಡರ್ ಸ್ಫೋಟಿಸಿ ಭುಜಕ್ಕೆ ಸುಟ್ಟ ಗಾಯವಾಗಿದೆ. ಸ್ಫೋಟದ ತೀವ್ರತೆಗೆ ಜಗುಲಿಯಲ್ಲಿ ಆಟವಾಡುತ್ತಿದ್ದ  ಚೈತನ್ಯಾಳ ತಲೆಯ ಮೇಲೆ  ಹೆಂಚುಗಳು ಬಿದ್ದು ಆಕೆಗೂ ಕೂಡ ಗಂಭೀರ ಗಾಯಗಳಾಗಿದೆ. 

ಘಟನೆ ನಡೆಯುತ್ತಿದ್ದಂತೆ ಅಗ್ನಿಶಾಮಕದಳಕ್ಕೆ ಸ್ಥಳೀಯರು ಕರೆ ಮಾಡಿ ತಿಳಿಸಿದ್ದು ಕೂಡಲೇ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಗಾಯಾಳುಗಳನ್ನು ತಕ್ಷಣವೇ ಬೀರೂರು ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಹುಲ್ಲೇಹಳ್ಳಿ ಪಿಡಿಒ ಮಂಜುನಾಥ್ ಮತ್ತು ಗ್ರಾಪಂ ಸದಸ್ಯ ಎಂ.ಲಕ್ಷ್ಮಣಪ್ಪ ಹಾನಿ ಪರಿಶೀಲನೆ ನಡೆಸಿದ್ದಾರೆ.

ಈ ರೀತಿಯ ಘಟನೆಗಳನ್ನು ಎದುರಿಸುವ ಸಲುವಾಗಿ ಇಲಾಖೆಯು ಅನೇಕ ಕಾರ್ಯಾಗಾರಗಳನ್ನು ನಡೆಸುತ್ತಿದ್ದು ಈ ಕಾರ್ಯಾಗಾರಗಳಲ್ಲಿ ಸಾರ್ವಜನಿಕರು ಭಾಗಿಯಾಗಿ ತುರ್ತು  ಸಂದರ್ಭದಲ್ಲಿ ಎದುರಾಗಬಹುದಾದ ದೊಡ್ಡ ಆಪತ್ತನ್ನು ಕೊಂಚಮಟ್ಟಿಗಾದರೂ ಎದುರಿಸಲು ಸಿದ್ಧರಾಗಬಹುದು.