ಚಿಕ್ಕಮಗಳೂರು : ಸಿಲಿಂಡರ್ ಸ್ಫೋಟ ಇಬ್ಬರಿಗೆ ಗಾಯ

ಚಿಕ್ಕಮಗಳೂರು ಜಿಲ್ಲೆಯ ಬೀರೂರಿನ ಯರೇಹಳ್ಳಿಯಲ್ಲಿ ಮಂಗಳವಾರ ಮಧ್ಯಾಹ್ನ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಸಂಭವಿಸಿದ ಸ್ಫೋಟದ ತೀವ್ರತೆಗೆ ಮನೆಯ ಛಾವಣಿ ಹೆಂಚುಗಳು ಹಾರಿದೆ.ಮರುಳಸಿದ್ದಪ್ಪ, ಹಾಗೂ ಚೈತನ್ಯ ಎಂಬ ಇಬ್ಬರು ಗಾಯಾಳುಗಳು. ಮರುಳಸಿದ್ದಪ್ಪ ಅಡುಗೆ ಮಾಡಲೆಂದು ಗ್ಯಾಸ್ ಸ್ಟೌವ್ ಹಚ್ಚಲು ಮುಂದಾದಾಗ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಗೆ ಬೆಂಕಿ ಹೊತ್ತಿಕೊಂಡಿದೆ. ಗಾಬರಿಗೊಂಡು ಹೊರಗೆ ಓಡುವಾಗ ಬಾಗಿಲ ಬಳಿ ಬರುವಷ್ಟರಲ್ಲಿಯೇ ಸಿಲಿಂಡರ್ ಸ್ಫೋಟಿಸಿ ಭುಜಕ್ಕೆ ಸುಟ್ಟ ಗಾಯವಾಗಿದೆ. ಸ್ಫೋಟದ ತೀವ್ರತೆಗೆ ಜಗುಲಿಯಲ್ಲಿ ಆಟವಾಡುತ್ತಿದ್ದ ಚೈತನ್ಯಾಳ ತಲೆಯ ಮೇಲೆ ಹೆಂಚುಗಳು ಬಿದ್ದು ಆಕೆಗೂ ಕೂಡ ಗಂಭೀರ ಗಾಯಗಳಾಗಿದೆ. ಘಟನೆ ನಡೆಯುತ್ತಿದ್ದಂತೆ ಅಗ್ನಿಶಾಮಕದಳಕ್ಕೆ ಸ್ಥಳೀಯರು ಕರೆ ಮಾಡಿ ತಿಳಿಸಿದ್ದು ಕೂಡಲೇ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಬೀರೂರು ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. 

ಗೃಹ ಸಚಿವರಿಂದ ಪೊಲೀಸ್ ವೃತ್ತ ಉದ್ಘಾಟನೆ :

ಇಂದು ಚಿಕ್ಕಮಗಳೂರಿನಲ್ಲಿ ನಡೆದ ಪೊಲೀಸ್ ವೃತ್ತದ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯದ ಗೃಹಸಚಿವ ಆರಗ ಜ್ನಾನೇಂದ್ರ ಪಾಲ್ಗೊಂಡು ಉದ್ಘಾಟನೆ ನಡೆಸಿದರು. ಅವರೊಂದಿಗೆ ಈ ಸಂದರ್ಭದಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ, ಎಂಎಲ್ಸಿ ಎಂ.ಕೆ ಪ್ರಾಣೇಶ್, ಜಿಲ್ಲಾಧಿಕಾರಿಗಳಾದ ಕೆ. ಎನ್ ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.ಈ ಸಂದರ್ಭದಲ್ಲಿ ನಕ್ಸಲ್ ನಿಗ್ರಹ ಪಡೆಯ ಕುರಿತಾಗಿ ಮಾತನಾಡಿದ ಅವರು ಸಂಪೂರ್ಣವಾಗಿ ನಕ್ಸಲರ ಚಟುವಟಿಕೆಗಳು ನಿಯಂತ್ರಣಕ್ಕೆ ಬರುವವರೆಗೆ ನಕ್ಸಲ್ ನಿಗ್ರಹ ಪಡೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ, ಅನೇಕರು ಶರಣಾಗತರಾಗಿದ್ದಾರೆ, ಅನೇಕರ ಬಂಧನವಾಗಿದೆ. ನಮ್ಮ ರಾಜ್ಯದಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚರಣೆಗಳು ಆರಂಭವಾದಾಗ ಬೇರೆಡೆಗೆ ತೆರಳುತ್ತಾರೆ ಬೇರೇಕಡೆಗಳಲ್ಲಿ ಕಾರ್ಯಾಚರಣೆ ನಡೆಯುವ ವೇಳೆ ಮರಳಿ ಈ ಭಾಗಕ್ಕೆ ಬರುತ್ತಾರೆ ಈ ಕುರಿತು ಹೆಚ್ಚಿನ ನಿಗಾವಹಿಸಲಾಗಿದೆ ಎಂದರು. ಕಾನೂನು ಗಾಂಧಿ ಕುಟುಂಬಕ್ಕೊಂದು ಇತರರಿಗೊಂದು ಎಂಬಂತೆ ಇಲ್ಲ, ಈ ನೆಲದ ಕಾನೂನನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕು. E.D ವಿಚಾರಣೆಗೆ ವಿರೋಧಿಸಿ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸುತ್ತಿದ್ದಾರೆ ಇವರಿಗೆ ದೇಶದ ಕಾನೂನಿನ ಮೇಲೆ ಗೌರವವಿಲ್ಲ, ಇವರನ್ನು ಜನ ಬಹಳ ತುಚ್ಚವಾಗಿ ನೋಡುತ್ತಿದ್ದಾರೆ ಜನರ ವಿಶ್ವಾಸವನ್ನು ಕಾಂಗ್ರೆಸ್ ಕಳೆದುಕೊಂಡಿದೆ ಎಂದು ಛಾಟಿ ಬೀಸಿದರು. 


ಶೃಂಗೇರಿ : ಜನತಾ ಪಕ್ಷದ ಅಧಿಕಾರ ಪದಗ್ರಹಣ ಸಮಾರಂಭ 

ಶೃಂಗೇರಿಯ ಕೆವಿಆರ್ ರಸ್ತೆಯಲ್ಲಿರುವ ಹೋಟೆಲ್ ಅದ್ವೈತ್ ಲ್ಯಾನ್ಸರ್ ನ ಸಭಾಂಗಣದಲ್ಲಿ ಆಯೋಜಿಸಿದ್ದ ಕ್ಷೇತ್ರ ಜನತಾ ಪಕ್ಷದ ಅಧಿಕಾರ ಪದಗ್ರಹಣ ಸಮಾರಂಭದಲ್ಲಿ ಕ್ಷೇತ್ರದ ಅಭಿವೃದ್ದಿಯ ಕುರಿತು ಮಾತನಾಡಿದ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಸಿ ರಾಜೇಂದ್ರ ಕ್ಷೇತ್ರದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಶಾಸಕರು ಹಾಗೂ ಸಂಸದರು ವಿಫಲರಾಗಿದ್ದಾರೆ. ಅತ್ಯವಶ್ಯಕವಾದ ನೂರು ಹಾಸಿಗೆಗಳ ಆಸ್ಪತ್ರೆ, 110 ಕೆ.ವಿ ವಿದ್ಯುತ್ ಸ್ಥಾವರ, ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿರುವ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ದಿ ಕುರಿತಾದ ಸಮಸ್ಯೆ, 24 ಗಂಟೆ ಕುಡಿಯುವ ನೀರು ಸೇರಿದಂತೆ ಈ ಭಾಗದ ಜನರಿಗೆ ಗಂಭೀರವಾಗಿ ಕಾಡುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ, ಅವರ ನಿರ್ಲಕ್ಷ್ಯದಿಂದಾಗಿ ಅನೇಕ ಸಮಸ್ಯೆಗಳು ತಲೆದೋರಿದೆ ಎಂದರು. ಅಂತೆಯೇ ಈ ಬಾರಿ ಜನರು ಮೂರೂ ಪಕ್ಷಗಳನ್ನು ಬದಿಗಿಟ್ಟು ನಮ್ಮ ಜನತಾ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂಬ ಧೃಢ ವಿಶ್ವಾಸವಿದೆ ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷವೂ ಸಂಪೂರ್ಣ ಬಹುಮತಗಳಿಸಲು ಸಾಧ್ಯವಿಲ್ಲ ಕನಿಷ್ಠ 23 ಶಾಸಕರನ್ನು ಈ ಬಾರಿ ವಿಧಾನಸಭೆಗೆ ಕಳುಹಿಸುವುದು ಜನತಾ ಪಕ್ಷದ ಧೃಢ ಸಂಕಲ್ಪವಾಗಿದೆ ಎಂದರು ಹಾಗೂ ಈ ನಿಟ್ಟಿನಲ್ಲಿ ಸಂಪೂರ್ಣವಾಗಿ ಶ್ರಮವಹಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಸಿ ರಾಜೇಂದ್ರ, ರಾಜ್ಯ ಉಪಾಧ್ಯಕ್ಷ ಹೊನ್ನೇಗೌಡ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ರಜಿತ್ ಗೌಡ ಬೇಸೂರು, ಮೈಸೂರು ಜಿಲ್ಲಾಧ್ಯಕ್ಷ ರಾಮಕೃಷ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


ಬಾಳೆಹೊನ್ನೂರು : ಜೆಡಿಎಸ್ ಮುಖಂಡ ಜಿನ್ನುಪೂಜಾರಿ ನಿಧನ

ಜೆ.ಡಿ.ಎಸ್ ಪಕ್ಷದ ಮುಖಂಡ ಬಾಳೆಹೊನ್ನೂರಿನ ಜಿನ್ನು ಪೂಜಾರಿಯವರು ದೈವಾಧೀನರಾಗಿದ್ದಾರೆ. ಎನ್ ಆರ್ ಪುರ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾಗಿದ್ದ ಜಿನ್ನು ಪೂಜಾರಿಯವರು, ಹಲವಾರು ಸಾಮಾಜಿಕ ಕೆಲಸಗಳಲ್ಲಿ, ಅಭಿವೃದ್ಧಿ ಕಾರ್ಯಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಕೊಂಡು ಜನಹಿತಕ್ಕಾಗಿ ಶ್ರಮಿಸಿದ್ದರು, ರಾಜಕೀಯದಲ್ಲಿ ಜೆ.ಡಿ.ಎಸ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದ ಅವರು ಮಲೆನಾಡ ಗಾಂಧಿ ಎಂದೇ ಹೆಸರುವಾಸಿಯಾಗಿರುವ ಹೆಚ್.ಜಿ ಗೋವಿಂದೇಗೌಡರ ಅನುಯಾಯಿಯಾಗಿದ್ದರು. ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿ ಅವರು ಶೃಂಗೇರಿ ಕ್ಷೇತ್ರಕ್ಕೆ ಬಂದ ನಂತರವೂ ಜೆಡಿಎಸ್ ಪಕ್ಷ ಸಂಘಟನೆ ಕಟ್ಟುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅನಾರೋಗ್ಯದಿಂದ ಅಗಲಿರುವ ಜಿನ್ನು ಪೂಜಾರಿಯವರ ಕುರಿತು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಸೇರಿದಂತೆ ಅನೇಕ ಪಕ್ಷದ ಮುಖಂಡರು, ಆತ್ಮೀಯರು ಹಾಗೂ ಅಪಾರವಾದ ಗೆಳೆಯರ ಬಳಗ, ಕುಟುಂಬಸ್ಥರು ದುಃಖ ವ್ಯಕ್ತಪಡಿಸಿದ್ದಾರೆ.


ಗಬ್ಬಾನೆ ಭೂತಾರಾಯನ ಸನ್ನಿಧಿಗೆ ಆಣೆ ಪ್ರಮಾಣಕ್ಕಾಗಿ ಪಂಥಾಹ್ವಾನ :

ಶೃಂಗೇರಿಯ ಗಾಂಧೀ ಮೈದಾನದ ಟೆಂಡರ್ ಪ್ರಕ್ರಿಯೆಗೆ ಮಾಜಿ ಶಾಸಕ ಡಿ.ಎನ್ ಜೀವರಾಜ್ ಜಿಲ್ಲಾಧಿಕಾರಿಗಳ ಬಳಿಯಲ್ಲಿ ಮಾತನಾಡಿ ಟೆಂಡರ್ ನ್ನು ದೊರಕಿಸಿ ಕೊಟ್ಟಿದ್ದಾರೆಂದು ಶಬರೀಶ್ ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ, ಮಾಜಿ ಶಾಸಕರು ಜಿಲ್ಲಾಧಿಕಾರಿಗಳ ಬಳಿ ಮಾತನಾಡಿ ಪಾರ್ಕಿಂಗ್ ಟೆಂಡರ್ ನ್ನು ವಹಿಸಿಕೊಟ್ಟಿದ್ದಾರೆ ಎಂದು ಶಬರೀಷ್ ಗಬ್ಬಾನೆ ದೇವರ ಸನ್ನಿಧಿಗೆ ಬಂದು ಪ್ರಮಾಣ ಮಾಡಲಿ ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷ ಹರೀಶ್ ಶೆಟ್ಟಿ ಪಂಥಾಹ್ವಾನ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು ಒಂದು ವೇಳೆ ಮಾಜಿ ಶಾಸಕರೇ ಜಿಲ್ಲಾಧಿಕಾರಿಗಳ ಬಳಿ ಮಾತನಾಡಿ ಶಬರೀಶ್ ಪರ ವಕಾಲತ್ತು ವಹಿಸಿದ್ದು ನಿಜವೇ ಆದಲ್ಲಿ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಈ ಸಂದರ್ಭದಲ್ಲಿ ಘೋಷಿಸಿದರು.


ಶಿವಮೊಗ್ಗ : 

ಕಲುಷಿತ ನೀರು ಸೇವಿಸಿ ಕಾರ್ಮಿಕನ ಸಾವು :

ಶಿವಮೊಗ್ಗದ ಮಂಡ್ಲಿ-ಕಲ್ಲೂರು ಕೈಗಾರಿಕಾ ಪ್ರದೇಶದ ಬಳಿಯ ಶಾರದಾ ನಗರದಲ್ಲಿನ ರಘು ಅವರ ಕುಟುಂಬ ಶಾರದಾ ನಗರದ ಮುಖ್ಯರಸ್ತೆಯಲ್ಲಿ ವಾಸವಿದ್ದಾರೆ. ಫ್ಯಾಕ್ಟರಿಯಲ್ಲಿ ವೆಲ್ಡಿಂಗ್ ಮೆಕ್ಯಾನಿಕ್ ಆಗಿದ್ದ ರಘು ಕೆಲಸ ಅರಸಿ ದಶಕಗಳ ಹಿಂದೆ ಒಡಿಶಾದಿಂದ ಶಿವಮೊಗ್ಗಕ್ಕೆ ಬಂದಿದ್ದರು. ಜೂನ್ 12 ರಂದು ಸಂಜೆ ವಾಂತಿ ಭೇದಿಯಿಂದ ತೀವ್ರ ಅಸ್ವಸ್ಥಗೊಂಡಿದ್ದ ರಘು ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಶಿಫಾರಸ್ಸಿನಂತೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಂದ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಲುಷಿತ ನೀರು ಸೇವಿಸಿದ್ದ ಕಾರ್ಮಿಕ ರಘು ಅವರ ಪತ್ನಿ ಅನುಸೂಯಾ ಅವರಿಗೂ ವಾಂತಿ ಆಗಿದೆ. ಅವರು ಸ್ಥಳೀಯ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಕಾವ್ಯ ಅಕ್ಕನ ಮನೆಯಲ್ಲಿ ಓದುತ್ತಿದ್ದು, ಮಗ ಕಾರ್ತಿಕ್ ಕೆಲಸದ ಮೇಲೆ ಹೊರಗೆ ಹೋಗಿದ್ದರಿಂದ ಅವರಿಗೆ ತೊಂದರೆಯಾಗಿಲ್ಲ ಎಂದು ಅನುಸೂಯಾ ಹೇಳಿದರು.

ಈ ಭಾಗದಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿರುವ ಹಿನ್ನೆಲೆ, ಜೆಸಿಬಿಯಿಂದ ಚರಂಡಿ ದುರಸ್ತಿ ವೇಳೆ ಪಕ್ಕದಲ್ಲಿಯೇ ಹಾಯ್ದು ಹೋಗಿರುವ ಪೈಪ್ ಒಡೆದು ಚರಂಡಿಯಲ್ಲಿನ ಕೈಗಾರಿಕೆಯ ತ್ಯಾಜ್ಯ ಕುಡಿಯುವ ನೀರಿನ ಪೈಪ್‌ನಲ್ಲಿ ಸೇರಿಕೊಂಡಿದೆ ಎಂದು ಸಾರ್ವಜನಿಕರಿಂದ ಕೇಳಿ ಬಂದಿದೆ.


ಸಾರ್ವಜನಿಕರಿಗೆ ಕಂಡಿದ್ದ ಚಿರತೆ ಸೆರೆ :

ಶಿವಮೊಗ್ಗ : ಜಿಲ್ಲೆಯ ಭದ್ರಾವತಿಯ ವಿಐಎಸ್‌ಎಲ್‌ ಕ್ವಾಟರ್ಸ್ ಆವರಣದಲ್ಲಿ ಇಂದು ಬೆಳಗ್ಗೆ ಚಿರತೆಯ ಓಡಾಟವನ್ನು ಸಾರ್ವಜನಿಕರು ಕಂಡು ಆತಂಕಕ್ಕೀಡಾಗಿದ್ದರು. ಕಾಣಿಸಿಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಅತೀ ವೇಗದ ಕಾರ್ಯಾಚರಣೆಯ ಮೂಲಕ ಸೆರೆಹಿಡಿದು ಜನರ ಆತಂಕವನ್ನು ನೀಗಿಸಿದ್ದಾರೆ. ಇಂದು ಬೆಳಿಗ್ಗೆ ಕಾಣಿಸಿಕೊಂಡಿದ್ದ ಚಿರತೆಯನ್ನು ಶಿವಮೊಗ್ಗದ ವನ್ಯಜೀವಿ ವಿಭಾಗದ ವೈದ್ಯ ಡಾ. ವಿನಯ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಅರವಳಿಕೆ ನೀಡಿದ ಬಳಿಕ, ಚಿರತೆಯನ್ನು ಬೋನ್ ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ. ಇದರಲ್ಲೂ ಡಾ.ವಿನಯ್ ಅವರು ಯಾವುದೇ ಅಂಜಿಕೆಯಿಲ್ಲದೆ ಧೈರ್ಯ ತೋರಿ 10 ಮೀ. ಅಂತರದಲ್ಲೇ ಚಿರತೆಗೆ ಅರವಳಿಕೆ ಮದ್ದು ನೀಡಿದ್ದಾರೆ. ಚಿರತೆ ಸೆರೆಸಿಕ್ಕಿದ್ದರಿಂದ ಆತಂಕಕ್ಕೊಳಗಾಗಿದ್ದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಸೆರೆಯಾದ ಚಿರತೆ ಸುಮಾರು 5-6 ವರ್ಷದ ಗಂಡು ಚಿರತೆಯಾಗಿದ್ದು, ಅದಕ್ಕೆ ನೀಡಿರುವ ಅರವಳಿಕೆ ಇಳಿದ ನಂತರದಲ್ಲಿ, ಹಿರಿಯ ಅಧಿಕಾರಿಗಳ ನಿರ್ದೇಶನದ ಬಳಿಕ ಭದ್ರಾ ಅಭಯಾರಣ್ಯದ ವ್ಯಾಪ್ತಿಯ ಕಾಡಿಗೆ ಬಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.