ಕೊಡಗು : (ನ್ಯೂಸ್ ಮಲ್ನಾಡ್ ವರದಿ) ತಮ್ಮ ಕುಟುಂಬ ಸದಸ್ಯರೊಂದಿಗೆ ಖಾಸಗೀ ಭೇಟಿ ನಿಮಿತ್ತ ಕೊಡಗಿಗೆ ಆಗಮಿಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ವಿರಾಜಪೇಟೆಯ ಶಾಸಕರಾದ ಕೆ,ಜಿ ಬೋಪಯ್ಯ ಭೇಟಿ ಮಾಡಿ ಜಿಲ್ಲೆಗೆ ಅವಶ್ಯವಿರುವ ಹಲವು ಅಭಿವೃಧ್ದಿ ಕಾರ್ಯಗಳ ಕುರಿತು ಚರ್ಚೆನಡೆಸಿದರು.

ಸದಾ ಪ್ರವಾಸಿಗರಿಂದ ತುಂಬಿರುವ ಕೊಡಗಿಗೆ ಉತ್ತಮ ಹೆದ್ದಾರಿಗಳ ಅವಶ್ಯಕತೆಯಿದ್ದು, ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಸಲುವಾಗಿ ಹೆಚ್ಚಿನ ಸಹಕಾರವನ್ನು ನೀಡುವಂತೆ ಕೇಂದ್ರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ವಿರಾಜಪೇಟೆ ಶಾಸಕರಾದ ಕೆ.ಜಿ ಬೋಪಯ್ಯ ಕೋರಿದರು. ಈ ಕುರಿತು ಮಡಿಕೇರಿಯ ಖಾಸಗೀ ರೆಸಾರ್ಟ್ನಲ್ಲಿ ತಂಗಿದ್ದ ಕೇಂದ್ರ ಸಚಿವರೊಂದಿಗೆ ಸುದೀರ್ಘ ಒಂದು ಗಂಟೆಗಳ ಕಾಲ ಚರ್ಚೆನಡೆಸಿದ ಅವರು ಈ ಭಾಗಕ್ಕೆ ಅವಶ್ಯವಿರುವ ಅನೇಕ ವಿಷಯಗಳ ಕುರಿತು ಚರ್ಚಿಸಿದರು. ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಈ ವಿಷಯಗಳ ಕುರಿತಾಗಿ ಫ್ರಸ್ತಾವನೆ ಸಲ್ಲಿಕೆಯಾದ ತಕ್ಷಣದಲ್ಲಿ ಆದ್ಯತೆಯ ಮೇರೆಗೆ ಅನುದಾನ ಬಿಡುಗಡೆ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. 

ಬೋಪಯ್ಯ ಅವರ ಕಾರ್ಯವೈಖರಿಗೆ ಕೇಂದ್ರ ಸಚಿವರಿಂದ ಮೆಚ್ಚುಗೆ : 

ವಿರಾಜಪೇಟೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ ಬಗ್ಗೆ ಮತ್ತು ಆಗಿನ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಗಡ್ಕರಿಯವರು ಮಾತಿನ ನಡುವೆ ಉಲ್ಲೇಖಿಸಿ, ಈ ಸಂದರ್ಭದಲ್ಲಿ ಬೋಪಯ್ಯ ಅವರು ತೆಗೆದುಕೊಂಡ ಉತ್ತಮ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯರವರ ಸೇವೆ ಹಾಗೂ ಕೊಡವರು ಸೈನ್ಯಕ್ಕೆ ನೀಡುತ್ತಿರುವ ಕೊಡುಗೆಯನ್ನು ಮುಕ್ತ ಕಂಠದಿAದ ಪ್ರಶಂಶಿಸಿದರು ಹಾಗೂ ಸೇನೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಕೊಡಗಿನ ವೀರರ ಕುರಿತು ಹೆಮ್ಮೆ ವ್ಯಕ್ತಪಡಿಸಿದರು. ಇದೇ ಸಂದರ್ಭ ಶಾಸಕ ಬೋಪಯ್ಯ ಅವರು ಸಚಿವರಿಗೆ ಶಾಲು ಹೊದಿಸಿ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು, ಶಾಸಕರಿಂದ ಕೊಡಗಿನ ಜೇನು ತುಪ್ಪ, ಕಾಳು ಮೆಣಸು, ಏಲಕ್ಕಿ ಮತ್ತು ಕಾಫಿಯನ್ನು ಸ್ವೀಕರಿಸಿದ ಗಡ್ಕರಿಯವರು ಸ್ವತಃ ಜೇನುತುಪ್ಪವನ್ನು ಸವಿದು ಅದರ ತಾಜಾತನ ಮತ್ತು ಗುಣಮಟ್ಟವನ್ನು ಕೊಂಡಾಡಿದರು. 

ಕೊಡಗಿನ ಕಿತ್ತಳೆ ಬಗ್ಗೆ ಶಾಸಕರಿಂದ ಮಾಹಿತಿ ಬಯಸಿದ ಸಚಿವರು, ಕೊಡಗಿನಲ್ಲಿ ಕಿತ್ತಳೆ ಇಳುವರಿ ಕ್ಷೀಣಿಸುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಸಚಿವರು, ಕೊಡಗಿನಲ್ಲಿ ಕಿತ್ತಳೆ ಪುನಶ್ಚೇತನಕ್ಕೆ ನಾಗ್ಪುರ ಮಾದರಿ ಕಿತ್ತಳೆಗೆ  ಪೂರಕ ವಾತಾವರಣ ಸೃಷ್ಟಿ ಮತ್ತು ತಳಿ ಸಂವರ್ಧನೆ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಶಾಸಕರಿಗೆ ಸಲಹೆ ನೀಡಿದರು. ಕೊಡಗಿನ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಎಲ್ಲಾ ಸಹಕಾರವನ್ನು ನೀಡುವುದಾಗಿ ತಿಳಿಸಿದ ಕೇಂದ್ರ ಸಚಿವರಿಗೆ ಶಾಸಕರು ಧನ್ಯವಾದಗಳನ್ನು ತಿಳಿಸಿದರು.