ಕಳಸ : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುಂಬಳಡಿಕೆಯಲ್ಲಿ ಟೆಂಟ್ ನಲ್ಲಿ ವಾಸಿಸುತ್ತಿರುವ ವಸತಿರಹಿತರು ಹಕ್ಕು ಪತ್ರಗಳು ದೊರೆಯುವವರೆಗೂ ಹೋರಾಟ ನಡೆಸುವ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಿದ್ದಾರೆ.
ಇದನ್ನೂ ಓದಿ : ಮನೆ ಬೀಗ ಒಡೆದು ಹಣ, ಚಿನ್ನಾಭರಣ ದೋಚಿದ ಖದೀಮರು
ಇಂದು ಕಳಸದ ತಾಲೂಕು ಕಛೇರಿ ಎದುರು ಪ್ರತಿಭಟಿಸಿದ ನಿವೇಶನರಹಿತರು ಮಾವಿನಕೆರೆ ಗ್ರಾಮದ 153 ರಲ್ಲಿ ಅತಿವೃಷ್ಟಿ ಸಂತ್ರಸ್ತರಿಗೆ ನಿವೇಶನ ಒದಗಿಸುವ ಸಲುವಾಗಿ ಜಾಗವನ್ನು ಮಂಜೂರು ಮಾಡಲಾಗಿತ್ತು. ಈ ಸರ್ವೇ ನಂಬರ್ ನ ಉಳಿಕೆ ಭೂಮಿಯಲ್ಲಿ ಸುತ್ತಮುತ್ತಲಿನ ನಿವೇಶನರಹಿತರು ಟೆಂಟ್ ನಿರ್ಮಾಣ ಮಾಡಿಕೊಂಡು ವರ್ಷಗಳೇ ಉರುಳಿದ್ದರೂ ಶಾಸಕರಿಂದ ಸ್ಥಳೀಯ ಜನಪ್ರತಿನಿಧಿಗಳವರೆಗೂ ಭರವಸೆಗಳು ಲಭಿಸಿದೆ ಆದರೆ ಈಡೇರಿಲ್ಲ ಎಂದರು.
ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಾರೆ, ಜಾಗಕ್ಕೆ ಹಕ್ಕುಪತ್ರ ನೀಡುವ ಭರವಸೆಯನ್ನು ನೀಡುತ್ತಾರೆ ಆದರೆ ಉತ್ತಮ ರೀತಿಯ ಬೆಳವಣಿಗೆಗಳು ಕಾಣುತ್ತಿಲ್ಲ, ಮಕ್ಕಳು, ಮಹಿಳೆಯರು ಸೇರಿದಂತೆ ವೃದ್ದರು ಇಲ್ಲಿ ವಾಸಿಸುತ್ತಾರೆ ಆದರೆ ಕುಡಿಯುವ ನೀರು, ವಿದ್ಯುತ್ ಸಂಪರ್ಕವಿಲ್ಲ ಇದರಿಂದಾಗಿ ತೀವ್ರತರಹವಾದ ಸಮಸ್ಯೆಗಳು ಎದುರಾಗಿದೆ. ಸರ್ಕಾರ ನಮ್ಮ ಸಮಸ್ಯೆಯನ್ನು ಕೇಳುತ್ತಿಲ್ಲ, ಚುನಾವಣೆಯ ಸಂದರ್ಭದಲ್ಲಿ ಮಾತ್ರ ಮತಯಾಚಿಸಲು ಬರುತ್ತಾರೆ ನಮಗೆ ನ್ಯಾಯ ದೊರಕಬೇಕು - ಕುಸುಮಾ, ನಿವಾಸಿ
ಕಳೆದ 3 ವರ್ಷದಿಂದ ಕುಂಬಳಡಿಕೆಯ ಸರ್ವೇ ನಂಬರ್ 153 ರಲ್ಲಿ ವಸತಿರಹಿತರು ಟೆಂಟ್ ಗಳನ್ನು ನಿರ್ಮಾಣ ಮಾಡಿಕೊಂಡು ವಾಸಮಾಡುತ್ತಿದ್ದು ಹಕ್ಕುಪತ್ರ ನೀಡುವ ಹಾಗೂ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಆಶ್ವಾಸನೆಗಳು ಹಾಗೆಯೇ ಉಳಿದಿದೆ ಹೊರತು ಯಾವುದೇ ಪ್ರಕ್ರಿಯೆಗಳು ಮುಂದುವರೆದಿಲ್ಲ ಎಂದು ನಿವೇಶನರಹಿತರು ತಮ್ಮ ಅಳಲನ್ನು ವ್ಯಕ್ತಪಡಿಸಿದರು ಹಕ್ಕುಪತ್ರ ಹಾಗೂ ನಿವೇಶನರಹಿತರಿಗೆ ನಿವೇಶನ ದೊರೆಯುವವರೆಗೂ ನಿರಂತರ ಹೋರಾಟ ನಡೆಸುವ ಎಚ್ಚರಿಕೆಯನ್ನು ಈ ಸಂದರ್ಭದಲ್ಲಿ ನೀಡಿದರು.
ಚಿಕ್ಕಮಗಳೂರು ಪೋಲಿಸ್ ಅಧಿಕಾರಿಗಳ ಸಮ್ಮುಖದಲ್ಲಿ ಅಪಾರ ಪ್ರಮಾಣದ ಗಾಂಜಾ ನಾಶ :
ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡಿದ್ದ ಅಪಾರ ಪ್ರಮಾಣದ ಗಾಂಜಾವನ್ನು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನವಾದ ನಿನ್ನೆ ಪೊಲೀಸ್ ಅಧಿಕಾರಿಗಳು ನಾಶಪಡಿಸಿದ್ದಾರೆ.
ನಶೆಭರಿತ ವಸ್ತುಗಳನ್ನು ಸೇವನೆ ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಉದ್ದೇಶದಿಂದ ಕಾರ್ಯಾಚರಣೆಯನ್ನು ಆರಂಭಿಸಿದ್ದ ಚಿಕ್ಕಮಗಳೂರಿನ ಪೊಲೀಸರು, ನಶೆಯಲ್ಲಿದ್ದವರಂತೆ ಕಂಡುಬರುತ್ತಿದ್ದ ಅನುಮಾನಾಸ್ಪದ ವ್ಯಕ್ತಿಗಳನ್ನು ಕರೆತಂದು ವೈದ್ಯಕೀಯ ತಪಾಸಣೆಗೊಳಪಡಿಸಿ ಮಾದಕ ವಸ್ತುಗಳನ್ನು ಸೇವಿಸಿರುವುದು ಧೃಢಪಟ್ಟಲ್ಲಿ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತಿದ್ದಾರೆ
ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ 190.7 ಕೆ.ಜಿ ಗಾಂಜಾವನ್ನು ಹಾಸನದ ಕೈಗಾರಿಕಾ ಪ್ರದೇಶದಲ್ಲಿ ಜಿಲ್ಲಾ ಮಾದಕ ವಸ್ತು ವಿಲೇವಾರಿ ಅಧಿಕಾರಿಗಳ ಸಮ್ಮುಖದಲ್ಲಿ ನಾಶಪಡಿಸಲಾಗಿದೆ.
ಶಿವಮೊಗ್ಗದಲ್ಲೂ ಈ ಸಂಬಂಧ ಕಾರ್ಯಾಚರಣೆ ನಡೆಸಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು ನಿನ್ನೆ ಅಧಿಕಾರಿಗಳ ಸಮ್ಮುಖದಲ್ಲಿ ನಾಶಪಡಿಸಿದ್ದಾರೆ. ಒಟ್ಟು ವಶಪಡಿಸಿಕೊಳ್ಳಲಾಗಿದ್ದ 193 ಕೆ.ಜಿ 498 ಗ್ರಾಂ ತೂಕದ ಗಾಂಜಾದ ಮೌಲ್ಯ 38,07,450 ಎಂದು ಅಂದಾಜಿಸಲಾಗಿದ್ದು ಮಾಚೇನಹಳ್ಳಿಯ ಸಮೀಪವಿರುವ ಶುಶೃತ ಬಯೋಮೆಡಿಕಲ್ ವೇಸ್ಟ್ ಮ್ಯಾನೇಜ್ಮೆಂಟ್ ಆವರಣದಲ್ಲಿ ನಾಶಮಾಡಲಾಗಿದೆ.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಮಾದಕ ವಸ್ತುಗಳ ವಿಲೇವಾರಿ ಸಮಿತಿಯ ಅಧಿಕಾರಿಗಳು ಹಾಗೂ ಸದಸ್ಯರುಗಳು ಹಾಜರಿದ್ದರು.






0 Comments