ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಸಹಕಾರ ಸಾರಿಗೆ ಸಂಸ್ಥೆಯ ಬಸ್ ಗಳ ಸಂಚಾರವನ್ನು ಪುನರಾರಂಭಿಸಬೇಕೆಂದು ಆಗ್ರಹಿಸಿ ಐವತ್ತು ದಿನಗಳ ಕಾಲ ನಿರಂತರವಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಕಾರ್ಮಿಕರು ಸಂಸ್ಥೆಯ ಪುನರಾರಂಭದ ಕೆಲ ಬೆಳವಣಿಗೆಗಳು ಕಂಡ ಕಾರಣ ಧರಣಿ ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ.
ಇದನ್ನೂ ಓದಿ : ಶೃಂಗೇರಿ: ಸ್ಕೂಲ್ ಟ್ರಿಪ್ ವಾಹನಕ್ಕೆ ಗುದ್ದಿದ ಇನೋವಾ ಕಾರು; ಅದೃಷ್ಟವಶಾತ್ ಮಕ್ಕಳು ಪಾರು
ಏನಿದು ಸಾರಿಗೆ ಸಮಸ್ಯೆ ?
ಮಲೆನಾಡಿನ ಅನೇಕ ಭಾಗಗಳನ್ನು ಸಂಪರ್ಕಿಸುತ್ತಿದ್ದ ಸಹಕಾರ ಸಾರಿಗೆ ಸಂಸ್ಥೆಯ ಬಸ್ ಗಳು ಸಂಚಾರ ನಿಲ್ಲಿಸಿ ಎರಡು ವರ್ಷಕ್ಕೂ ಅಧಿಕ ಸಮಯ ಕಳೆದಿತ್ತು, ಲಾಕ್ ಡೌನ್, ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಸೇರಿದಂತೆ ಅನೇಕ ಕಾರಣಗಳನ್ನು ನೀಡಿ ಸಂಸ್ಥೆಯು ಸಂಪೂರ್ಣ ನಷ್ಟದಲ್ಲಿದೆ ಎಂಬುದಾಗಿ ತಿಳಿಸಿ ಬಸ್ಸುಗಳ ಸಂಚಾರ ನಿಲ್ಲಿಸಲಾಗಿತ್ತು. ಇದರಿಂದಾಗಿ ಸಂಸ್ಥೆಯನ್ನು ನಂಬಿ ಜೀವನ ನಿರ್ವಹಣೆ ಮಾಡುತ್ತಿದ್ದ 200ಕ್ಕೂ ಅಧಿಕ ಕಾರ್ಮಿಕರ ಕುಟುಂಬ ಬೀದಿಗೆ ಬಂದಿತ್ತು, ಪಿ.ಎಫ್ ಹಣವನ್ನೂ ನೀಡದೇ ಸಂಸ್ಥೆಯ ಸಿಬ್ಬಂದಿಗಳಿಗೆ ವಂಚನೆ ಮಾಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿತ್ತು, ಈ ಹಿನ್ನೆಲೆ ಅನೇಕ ರಾಜ್ಯದ ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಿದರೂ ಕೂಡ ಯಾವುದೇ ಬೆಳವಣಿಗೆಗಳು ಕಾಣದ ಹಿನ್ನೆಲೆ ಸಂಸ್ಥೆಯ ಕಾರ್ಮಿಕರು ನಿರಂತರವಾಗಿ 50 ದಿನಗಳ ಕಾಲ ಸರದಿ ಧರಣಿ ಸತ್ಯಾಗ್ರಹವನ್ನು ನಡೆಸಿದ್ದರು. ಅದರ ಪರಿಣಾಮ ಟಿಸಿಎಸ್ ಸಂಸ್ಥೆಯನ್ನು ಪುನರಾರಂಭ ಮಾಡುವ ಪ್ರಕ್ರಿಯೆಗಳು ಕಂಡ ಹಿನ್ನೆಲೆ ಕಾರ್ಮಿಕರು ತಮ್ಮ ಧರಣಿಯನ್ನು ಹಿಂಪಡೆದಿದ್ದಾರೆ.
ಸಹಕಾರ ಸಾರಿಗೆ ಸಂಸ್ಥೆಯ ಕಾರ್ಮಿಕರ ಬೇಡಿಕೆಯಂತೆ ಸಂಸ್ಥೆಯ ಆಡಳಿತ ಮಂಡಳಿಗೆ ಶೀಘ್ರವಾಗಿ ಚುನಾವಣೆ ನಡೆಸಿ ನೂತನ ಆಡಳಿತ ಮಂಡಳಿಯನ್ನು ರೂಪಿಸಲು ಚುನಾವಣಾ ಪ್ರಕ್ರಿಯೆಯನ್ನು ನಡೆಸುವುದಾಗಿ ಜಿಲ್ಲಾಧಿಕಾರಿಗಳ ಮಾರ್ಗಸೂಚಿ ಮೇಲೆ ಜಿಲ್ಲಾ ಸಹಕಾರ ಉಪನಿಬಂಧಕರು ಆದೇಶ ನೀಡಿದ್ದಾರೆ. ಶ್ರೀ ರಾಮ್ ಫೈನಾನ್ಸ್ ನವರು ಸಂಸ್ಥೆಗೆ ಹಾಕಿರುವ ಬೀಗವನ್ನು ಅತೀ ಶೀಘ್ರದಲ್ಲಿ ತೆರವುಗೊಳಿಸುವ ವಿಶ್ವಾಸವಿದೆ ಹಾಗೂ ಸಂಸ್ಥೆಯ ಪುನರಾರಂಭಕ್ಕೆ ಚಾಲನೆ ದೊರಕುವ ಭರವಸೆಯಿರುವ ಕಾರಣ ನಡೆಸುತ್ತಿದ್ದ ಸರದಿ ಧರಣಿಯನ್ನು ಹಿಂಪಡೆಯುತ್ತಿರುವುದಾಗಿ ಕಾರ್ಮಿಕರು ತಿಳಿಸಿದ್ದಾರೆ.
ನಮ್ಮ ಬೇಡಿಕೆಗಳು ಈಡೇರುವ ಆಶಾಭಾವನೆ ಹಾಗೂ ನಮ್ಮ ಸಮಸ್ಯೆಗೆ ಸ್ಪಂದನೆ ನೀಡಿ ಚುನಾವಣೆ ನಡೆಸುವ ಪ್ರಕ್ರಿಯೆಗಳು ಆರಂಭವಾದ ಕಾರಣ ಸರದಿ ಧರಣಿ ಸತ್ಯಾಗ್ರಹವನ್ನು ಕೈ ಬಿಡುತ್ತಿದ್ದೇವೆ. ಒಂದು ವೇಳೆ ಆಗಸ್ಟ್ 15 ರ ವರೆಗಿನ ಗಡುವಿನೊಳಗೆ ಬೇಡಿಕೆ ಈಡೇರಿಸದೇ ಹೋದಲ್ಲಿ ಮುಖ್ಯಮಂತ್ರಿಗಳ ಮನೆಯ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ - ಹೆಚ್.ಆರ್. ಸಂಜೀವ ಅಧ್ಯಕ್ಷರು ಚಿಕ್ಕಮಗಳೂರು ಜಿಲ್ಲಾ ಟ್ರಾನ್ಸ್ಪೋರ್ಟ್ ಅಂಡ್ ಜನರಲ್ ಮಜ್ದೂರ್ ಸಂಘ ಕೊಪ್ಪ.
ಸಹಕಾರ ಸಾರಿಗೆ ಕಾರ್ಮಿಕರ ಬೇಡಿಕೆಗಳು :
ಈ ವರೆಗಿನ ಸಂಸ್ಥೆಯ ಬಸ್ಸುಗಳ ತೆರಿಗೆ ಹಣವನ್ನು ಮನ್ನಾ ಮಾಡುವುದು
ಸರ್ಕಾರದ ವತಿಯಿಂದ ಸಂಸ್ಥೆಯ ಪುನರಾರಂಭಕ್ಕೆ 12 ಕೋಟಿ ಅನುದಾನವನ್ನು ಮಂಜೂರು ಮಾಡಿಸುವುದು ಅಥವಾ ರಾಜ್ಯ ಅಪೆಕ್ಸ್ ಬ್ಯಾಂಕ್ ನಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದು.
ಈ ಹಿಂದೆ ಸಂಸ್ಥೆಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಇಲಾಖಾ ವತಿಯಿಂದ ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವುದು ಹಾಗೂ ಅವ್ಯವಹಾರ ನಡೆಸಿದವರ ಹಣವನ್ನು ಸಂಬಂಧಿಸಿದವರಿಂದ ವಸೂಲಿ ಮಾಡುವುದು.
ಈ ಬೇಡಿಕೆಗಳನ್ನು ಆಗಸ್ಟ್ 15 2022 ರೊಳಗೆ ಈಡೇರಿಸದೇ ಹೋದಲ್ಲಿ, ಬೆಂಗಳೂರಿನ ಮುಖ್ಯಮಂತ್ರಿಗಳ ನಿವಾಸದ ಎದುರು ಅಥವಾ ಫ್ರೀಡಮ್ ಪಾರ್ಕ್ ನಲ್ಲಿ ಸಹಕಾರ ಸಾರಿಗೆ ಕಾರ್ಮಿಕರು ಹಾಗೂ ಷೇರುದಾರರು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಿದ್ದಾರೆ.





0 Comments