ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ ಯೋಜನೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಶಾಸಕರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಕೊಪ್ಪದಲ್ಲಿ ಪ್ರತಿಭಟನೆ ನಡೆಸಿದರು.

ಅಗ್ನಿಪಥ್ ಯೋಜನೆಯ ಅಡಿಯಲ್ಲಿ ಭಾರತೀಯ ಸೇನೆಗೆ ಸೇರುವ ಯುವಕ, ಯುವತಿಯರಿಗೆ ಅನ್ಯಾಯವಾಗುತ್ತಿದೆ, ಈ ಕೂಡಲೇ ಯೋಜನೆಯನ್ನು ಪುನರ್‌ ಪರಿಶೀಲಿಸಬೇಕು ಈ ಯೋಜನೆಯಿಂದಾಗಿ ಯುವ ಜನತೆಗೆ ಅನಾನುಕೂಲಗಳೇ ಹೆಚ್ಚಾಗುತ್ತಿದೆ. ಅಗ್ನಿಪಥ್ ದೇಶದ್ರೋಹಿ ಯೋಜನೆಯಾಗಿದೆ ಎಂದು ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ ಮಾತನಾಡಿದರು. ದೇಶದಲ್ಲಿ ರಾಜ್ಯದಲ್ಲಿ ಸೌಹಾರ್ದತೆಯನ್ನು ಕೆದಡುವ ಸಲುವಾಗಿ ಈ ಯೋಜನೆಯನ್ನು ತರಲಾಗುತ್ತಿದೆ, ಯುವಕ ಯುವತಿಯರಿಗೆ ಉದ್ಯೋಗ ನೀಡುವುದಾಗಿ ಹುಸಿ ಭರವಸೆ ನೀಡಿ ಯುವಕರ ಭವಿಷ್ಯವನ್ನು ಹಾಳು ಮಾಡಲಾಗುತ್ತಿದೆ ಎಂದು ಹರಿಹಾಯ್ದರು.


ಯುವಕರಿಗೆ ಹಿಜಾಬ್, ಹಲಾಲ್, ಶಾಲುಗಳು ಮುಂತಾದವುಗಳನ್ನು ನೀಡಲಾಗುತ್ತಿದೆಯೇ ಹೊರತು ಉದ್ಯೋಗ ರೂಪಿಸುವ ಯಾವುದೇ ಯೋಜನೆಗಳು ಮೋದಿ ಸರ್ಕಾರದಿಂದ ಬರುತ್ತಿಲ್ಲ, ಮೋದಿ ಹೊರಡಿಸುವ ಎಲ್ಲಾ ಯೋಜನೆಗಳನ್ನು ಉತ್ತಮ ಎಂದು ಇಲ್ಲಿನ ಕಾರ್ಯಕರ್ತರು ಹೇಳುತ್ತಾರೆ ಆದರೆ ಅವುಗಳಿಂದಾಗಿ ಯಾರಿಗೆ ಉಪಯೋಗವಾಗಿದೆ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ, ಯಾವುದೇ ರಾಜಕಾರಣಿಗಳ ಮಕ್ಕಳು ನಾಲ್ಕು ವರ್ಷಗಳ ಕಾಲ ದುಡಿಯಲು ಅಗ್ನಿಪಥ್ ನ ಅಡಿಯಲ್ಲಿ ತೆರಳುವುದಿಲ್ಲ. ಬಡವರ ಮಕ್ಕಳು ಉದ್ಯೋಗವನ್ನರಸಿ ಹೋಗುತ್ತಾರೆ ನಾಲ್ಕು ವರ್ಷಗಳ ನಂತರದಲ್ಲಿ ಅವರ ಬಳಿಯೂ ಉದ್ಯೋಗವಿರುವುದಿಲ್ಲ ಆಗ ಒದ್ದಾಡಬೇಕಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ಆಕ್ರೋಶ ಹೊರಹಾಕಿದರು.



ಈ ಪ್ರತಿಭಟನೆಯಲ್ಲಿ ಶಾಸಕ ಟಿ.ಡಿ ರಾಜೇಗೌಡ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.