ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಅರಣ್ಯ ಇಲಾಖೆಯ ವ್ಯಾಪ್ತಿಗೆ ಸೇರಿದ ಜಾಗದಲ್ಲಿ ಮನೆ ಕಟ್ಟಲಾಗಿದೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಮನೆ ತೆರವುಗೊಳಿಸಿದ್ಧು,. ಅದೇ ಸ್ಥಳದಲ್ಲಿ ದಲಿತ ಸಂಘರ್ಷ ಸಮಿತಿಯ ವತಿಯಿಂದ ಮನೆ ನಿರ್ಮಾಣ ಮಾಡಿ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿ ಆಕ್ರೋಶ ಹೊರಹಾಕಿರುವ ಘಟನೆ ಕೊಪ್ಪ ತಾಲೂಕಿನಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನಿಲುವಾಗಿಲು ಪಂಚಾಯತ್ ವ್ಯಾಪ್ತಿಯ ಗಾಳಿಮರದ ಓರ್ವ ವಯಸ್ಸಾದ ದಲಿತ ಮಹಿಳೆ ಬೆಳ್ಳಮ್ಮ ಎಂಬುವವರು ಮನೆಯೊಂದನ್ನು ನಿರ್ಮಿಸಿಕೊಂಡಿದ್ದರು, ಜಾಗವು ಅರಣ್ಯ ಇಲಾಖೆಗೆ ಸೇರಿದ್ದೆಂದು ತಿಳಿಸಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮನೆಯನ್ನು ಸಂಪೂರ್ಣ ನೆಲಸಮ ಮಾಡಿದ್ದಾರೆ ಹಾಗೂ ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ನಾಶ ಮಾಡಿದ್ದಾರೆ ಇದು ಮಹಿಳೆಗೆ ಆದ ಅನ್ಯಾಯವೆಂದು ದಲಿತ ಸಂಘರ್ಷ ಸಮಿತಿಯ ಶೃಂಗೇರಿ ಕ್ಷೇತ್ರದ ಅಧ್ಯಕ್ಷರಾದ ಸುರೇಶ್ ಆರೋಪಿಸಿದ್ದಾರೆ. ಈ ಸಂಬಂಧ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪ್ರತಿಭಟಿಸಿದ್ದಾರೆ. 

ಮನೆ ನಿರ್ಮಾಣ ಮಾಡಿದ ಜಾಗವು ಅರಣ್ಯ ಇಲಾಖೆಯ ವ್ಯಾಪ್ತಿಗೆ ಸೇರಿದೆ, ಜಾಗವನ್ನು ಅತಿಕ್ರಮಣ ಮಾಡಿದ ಕಾರಣ ಮನೆಯನ್ನು ತೆರವು ಮಾಡಲಾಗಿದೆ, ಈ ಪ್ರಕರಣದ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು - ಅನಿಲ್ ಡಿಸೋಜ, ವಲಯ ಅರಣ್ಯಾಧಿಕಾರಿ

ಇದಲ್ಲದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಚಿಕ್ಕಮಗಳೂರು, ಕೊಪ್ಪ ತಾಲೂಕು ಇವರ ಸಹಯೋಗದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ತೆರವುಗೊಳಿಸಿದ್ದ ಮನೆಯನ್ನು ಪುನಃ ಅದೇ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಮನೆಯು ಕಂದಾಯ ವ್ಯಾಪ್ತಿಗೆ ಸೇರುತ್ತದೆ ಆದರೂ ಅಧಿಕಾರಿಗಳು ಅರಣ್ಯ ಇಲಾಖೆಗೆ ಸೇರುತ್ತದೆ ಎಂದು ನಾಶ ಮಾಡಿರುವುದಕ್ಕೆ ನಮ್ಮ ವಿರೋಧವಿದೆ. ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮನೆಯನ್ನು ಪುನರ್ ನಿರ್ಮಾಣ ಮಾಡಿಕೊಟ್ಟಿದ್ದೇವೆ, ಒಂದೂವರೆ ಲಕ್ಷ ಮೌಲ್ಯದ ವಸ್ತುಗಳು ನಾಶವಾಗಿದೆ ಎಂದು ಆರೋಪ ಮಾಡಿದ್ದಾರೆ. 

ಮನೆಯನ್ನು ಅದೇ ಸ್ಥಳದಲ್ಲಿ ಕಟ್ಟಿಕೊಡುವುದರ ಜೊತೆಗೆ, ಮನೆಗೆ ಅವಶ್ಯಕವಿರುವ ಅಗತ್ಯ ಸಾಮಾಗ್ರಿಗಳನ್ನು ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳೇ ಪೂರೈಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷರು, ಕ್ಷೇತ್ರಾಧ್ಯಕ್ಷರು, ಕ್ಷೇತ್ರ ಉಸ್ತುವಾರಿ ಅಧ್ಯಕ್ಷರು ತಾಲೂಕು ಹಾಗೂ ಜಿಲ್ಲಾ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಗುಂಪುಗುಂಪಾಗಿ ಪ್ರತ್ಯಕ್ಷವಾದ ಕಾಡಾನೆಗಳು ; ಸಾರ್ವಜನಿಕರಲ್ಲಿ ಮೂಡಿದ ಆತಂಕ :

ಕೊಡಗು : ಗುಂಪು ಗುಂಪಾಗಿ ಕಾಡಾನೆಗಳು ಕೊಡಗಿನ ರಸ್ತೆಯಲ್ಲಿ ಓಡಾಟ ನಡೆಸುವುದನ್ನು ಕಂಡು ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ.

ವಿರಾಜಪೇಟೆ ತಾಲೂಕಿನ ತಿತಿಮತಿ ಅಬ್ಬೂರುಕಟ್ಟೆ ಸಮೀಪದ ರಾಜ್ಯ ಹೆದ್ದಾರಿಯಲ್ಲಿ  ಬೆಳಗ್ಗೆ ಕಾಡಾನೆಗಳು ಓಡಾಡುತ್ತಿರುವುದು ಸಾರ್ವಜನಿಕರಿಗೆ ಕಂಡಿದೆ. ಆನೆಗಳು ಒಂದೆಡೆಯಿಂದ ಇನ್ನೊಂದೆಡೆಗೆ ಓಡುವ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದರೆ, ಅನೇಕರು ಆನೆಗಳ ಓಡಾಟವನ್ನು ಕಂಡು ಭಯಕ್ಕೀಡಾಗಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಕಾಫಿ ತೋಟಕ್ಕೆ ಬಂದ ಆನೆಗಳನ್ನು ಕಾಡಿಗಟ್ಟಿದರೂ ಅವುಗಳು ಮತ್ತೆ ಆಹಾರ ಅರಸಿ ತೋಟಗಳಿಗೆ ಲಗ್ಗೆ ಇಡುತ್ತಿವೆ. ಇದರಿಂದ ಕಾಫಿ ಬೆಳೆಗಾರರಿಗೆ ಸಮಸ್ಯೆಯಾಗುತ್ತಿದೆ. ಬೆಳೆದ ಬೆಳೆಗಳನ್ನು ಆನೆಗಳು ಹಾಳು ಮಾಡುತ್ತಿವೆ ಎಂದು ಸಾರ್ವಜನಿಕರು ತಮ್ಮಗೋಳನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ನಿರಂತರವಾಗಿ ಆನೆಗಳು ಈ ಭಾಗದ ಕೃಷಿಕರಿಗೆ ಸಮಸ್ಯೆ ನೀಡುತ್ತಲೇಬಂದಿವೆ. ಅತಿವೃಷ್ಟಿ, ಅನಾವೃಷ್ಟಿ, ವಿವಿಧ ಬಗೆಯ ರೋಗಗಳಿಂದ ಜನರು ತಮ್ಮ ತೋಟಗಳಲ್ಲಿ ಬೆಳೆಯನ್ನು ರಕ್ಷಿಸಿಕೊಂಡು ಬರುತ್ತಿದ್ದರೆ ಇತ್ತ ಆನೆದಾಳಿಯು ಬೆಳೆದ ಬೆಳೆಯನ್ನು ಸಂಪೂರ್ಣವಾಗಿ ನಾಶಮಾಡುತ್ತಿದೆ. 

ಆನೆಗಳನ್ನು ನಾಡಿನಿಂದ ಕಾಡಿಗಟ್ಟುವ ಕ್ಷಿಪ್ರ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡಬೇಕು, ಜನರಿಗೆ ಹಾಗೂ ಬೆಳೆದ ಬೆಳೆಗಳಿಗೆ ಯಾವುದೇ ರೀತಿಯ ಸಮಸ್ಯೆಗಳು ಆನೆ ದಾಳಿಯಿಂದ ಉಂಟಾಗದಂತೆ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕೆಂದು ಸಾರ್ವಜನಿಕರು ಕೋರಿದ್ದಾರೆ.