ಹಾಸನ : (ನ್ಯೂಸ್ ಮಲ್ನಾಡ್ ವರದಿ) ಮಾರುತಿ ಕಾರು ಹಾಗೂ ಕ್ಯಾಂಟರ್ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ದಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ವರದಿಯಾಗಿದೆ.

ಹಾಸನದ ಆಲೂರು ತಾಲೂಕಿನ ಆಲೂರು ಈಶ್ವರಹಳ್ಳಿ ಕೂಡಿಗೆ ಬಳಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮುಂಜಾನೆ 4.30 ರ ಆಸುಪಾಸಿನಲ್ಲಿ ಮಾರುತಿ 800 ಹಾಗೂ ಕ್ಯಾಂಟರ್ ವಾಹನದ ನಡುವೆ  ಈ ಅವಘಡ ಸಂಭವಿಸಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಓರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. 

ಮೃತರನ್ನು ಆಂಜನಪ್ಪ ಹಾಗೂ ಕಾರ್ತಿಕ್ ಎಂದು ಗುರುತಿಸಲಾಗಿದೆ. ಇನ್ನೂ ಮೂವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಘಟನಾ ಸ್ಥಳಕ್ಕೆ ಆಲೂರು ಠಾಣೆಯ ಪೊಲೀಸರು ಭೇಟಿ ನೀಡಿದ್ದು ಈ ಸಂಬಂಧ ಪರಿಶೀಲನೆ ನಡೆಸುತ್ತಿದ್ದಾರೆ.