ಕೊಪ್ಪದ ಶಿಕ್ಷಕನನ್ನು ಮರು ನೇಮಕ ಮಾಡುವಂತೆ ಆಗ್ರಹ
ಕಳೆದ ಕೆಲ ದಿನಗಳ ಹಿಂದಷ್ಟೇ ವಿದ್ಯಾರ್ಥಿಯ ಬೆನ್ನಿಗೆ ಬಾಸುಂಡೆ ಬರುವಂತೆ ಹೊಡೆದ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಕೊಪ್ಪ ತಾಲೂಕಿನ ಬಾಳಗಡಿ ಶಾಲಾ ಶಿಕ್ಷಕನನ್ನು ಮರಳಿ ನೇಮಕ ಮಾಡಬೇಕೆಂದು ಆಗ್ರಹಿಸಿ ಸ್ಥಳೀಯರು ಬಿಇಒ ಅವರಿಗೆ ಮನವಿ ಸಲ್ಲಿಸಿದ್ದಾರೆ. ಶಾಲೆಯಲ್ಲಿ 130 ವಿದ್ಯಾರ್ಥಿಗಳಿದ್ದು ಶಿಕ್ಷಕರ ಕೊರತೆಯಿಂದ ಅವರ ಕಲಿಕೆಗೆ ತೊಂದರೆ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಅಮಾನತು ಮಾಡಿರುವ ಶಿಕ್ಷಕನನ್ನು ಮರಳಿ ನೇಮಕ ಮಾಡಬೇಕೆಂದು ಸಾರ್ವಜನಿಕರು ಕೋರಿದ್ದಾರೆ.
ಮೇಯಲೆಂದು ತೆರಳಿದ್ದ ಹಸು ವಿದ್ಯುತ್ ತಗುಲಿ ಸಾವು :
ಹಸುವೊಂದು ಮೆಯಲೆಂದು ತೆರಳಿದ ಸಂದರ್ಭದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ದುರ್ಮರಣವನ್ನಪ್ಪಿರುವ ಘಟನೆ ಮೂಡಿಗೆರೆಯಲ್ಲಿ ನಡೆದಿದೆ. ಕೊಟ್ಟಿಗೆಹಾರದ ತೂಫಾನ್ ಮಂಜು ನಾಯ್ಕ್ ಎಂಬುವವರಿಗೆ ಸೇರಿದ ಸಿಂಧಿ ಹಸು ಸಾವನ್ನಪ್ಪಿದ್ದು ಮೆಸ್ಕಾಂ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಮಕ್ಕಳು ಹಾಗೂ ಸಾರ್ವಜನಿಕರು ತಿರುಗಾಡುವ ಈ ಸ್ಥಳದಲ್ಲಿ ಯಾರಿಗಾದರೂ ಅಪಾಯ ಉಂಟಾದರೆ ಯಾರು ಹೊಣೆ ಎಂದು ಸಾರ್ವಜನಿಕರು ಕಿಡಕಾರಿದರು ಹಾಗೂ ಇಲಾಖೆ ಈ ಕುರಿತು ಗಮನಹರಿಸಬೇಕು ಎಂದರು.
ಮಲೆನಾಡಿನಲ್ಲಿ ಮತ್ತೆ ರಿಂಗಾದ ಸ್ಯಾಟಲೈಟ್ ಫೋನ್ :
ಕೆಲ ತಿಂಗಳುಗಳ ಹಿಂದಷ್ಟೇ ಮಲೆನಾಡು ಭಾಗದಲ್ಲಿ ರಿಂಗಣಿಸಿದ್ದ ಸ್ಯಾಟಲೈಟ್ ಫೋನ್ ಗಳು, ಮತ್ತೆ ಮಲೆನಾಡಿನಲ್ಲಿ ರಿಂಗಣಿಸಿವೆ. ಚಿಕ್ಕಮಗಳೂರಿನ ಕಡೂರು ಬೀರೂರು ಮಧ್ಯದ ದಟ್ಟ ಅಡವಿಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ರಿಂಗಣಿಸಿರುವ ಕುರಿತು ಮಾಹಿತಿ ಬೇಹುಗಾರಿಕಾ ಏಜೆನ್ಸಿಗಳಿಗೆ ಲಭ್ಯವಾಗಿದೆ. ಮಂಗಳೂರು ಹಾಗೂ ಉತ್ತರಕನ್ನಡದ ಹಲವು ಭಾಗಗಳಲ್ಲೂ ಸ್ಯಾಟಲೈಟ್ ಫೋನ್ ರಿಂಗಣಿಸಿದ್ದು ಈ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಸಿ.ಟಿ ರವಿ ವಾಗ್ದಾಳಿ :
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು RSS ವಿರುದ್ಧವಾಗಿ ಆರಂಭಿಸಿರುವ ಚಡ್ಡಿ ಸುಡುವ ಅಭಿಯಾನದ ಕುರಿತಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಇಂದು ತೀವ್ರವಾಗಿ ವಾಗ್ದಾಳಿ ನಡೆಸಿದರು. ಹೆಡ್ಗೆವಾರ್ ಓರ್ವ ದೇಶಪ್ರೇಮಿ ಭಾರತ್ ಮಾತಾ ಕೀ ಜೈ ಎನ್ನುವವರನ್ನು ಕಂಡರೆ ಕಾಂಗ್ರೆಸ್ಸಿಗರಿಗೆ ಉರಿ ಹತ್ತುತ್ತದೆ, ಅವರಿಗೆ ಮಾಡಲು ಕೆಲಸವಿಲ್ಲ ಚಡ್ಡಿ ಸುಟ್ಟಿಕೊಂಡಿರಲಿ, ನಮ್ಮ ಹಳೆಯ ಚಡ್ಡಿಗಳು ಕೂಡ ಇದಾವೆ ಅದನ್ನು ಕಳುಹಿಸುತ್ತೇವೆ ಎಂದರು.
ಚಿಕ್ಕಮಗಳೂರಿನಾದ್ಯಂತ ವಿಶ್ವ ಪರಿಸರ ದಿನಾಚರಣೆ :
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಅಭಿಯಾನ ಯಶಸ್ವಿಯಾಗಿ ನಡೆದಿದ್ದು ಚಿಕ್ಕಮಗಳೂರಿನ ವಿವಿಧ ಭಾಗಗಳಲ್ಲಿ ಗ್ರಾಮ ಪಂಚಾಯತ್ ನ ಅಧ್ಯಕ್ಷರು ಹಾಗೂ ಸದಸ್ಯರು ಗಿಡ ನೆಡುವುದರ ಮೂಲಕ ಗಿಡಗಳ ಸಂರಕ್ಷಣೆಯ ಕುರಿತಾಗಿ ಮಾತನಾಡಿದರು. ಅಂತೆಯೇ ಪರಿಸರ ಪ್ರೇಮಿಗಳು ಪರಿಸರ ದಿನಾಚರಣೆಯನ್ನು ಆಚರಿಸಿದರು.



0 Comments