ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಓರ್ವ ಅನಾರೋಗ್ಯಪೀಡಿತ ವೃದ್ದ ಮಹಿಳೆಗೆ ಅಮ್ಮಾ ಫೌಂಡೇಶನ್ ಮುಖೇನ ಸಂಸ್ಥಾಪಕ ಸುಧಾಕರ್ ಎಸ್ ಶೆಟ್ಟಿ ಅವರ ಪುತ್ರ ಪವನ್ ಸುಧಾಕರ್ ಶೆಟ್ಟಿ ನೆರವಿನ ಭರವಸೆ ನೀಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಾನೂರು ಕಟ್ಟಿನಮನೆ ವ್ಯಾಪ್ತಿಯ ದಲಿತ ಮಹಿಳೆ ರಾಧಮ್ಮ ಹಾಗೂ ಅವರ ಮೊಮ್ಮಕ್ಕಳಿಗೆ ಅಗತ್ಯವಾಗಿ ಬೇಕಿರುವ ಸೌಲಭ್ಯಗಳನ್ನು ಒದಗಿಸುವುದಾಗಿ ಹಾಗೂ ಕಡ್ಲೆಮಕ್ಕಿ ಅಂಗನವಾಡಿ ಮಕ್ಕಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಪವನ್ ಸುಧಾಕರ್ ಶೆಟ್ಟಿ ಅವರು ತಿಳಿಸಿದ್ದಾರೆ. 

ಬಾಳೆಹೊನ್ನೂರು ಭೀಮ್ ಆರ್ಮಿ ಸಂಘಟನೆಯು ಈ ಹಿಂದೆ ವೃದ್ದೆ ರಾಧಮ್ಮ ಅವರು ತನ್ನೆರಡು ಅಂಗವಿಕಲ ಮೊಮ್ಮಕ್ಕಳೊಂದಿಗೆ ಬಹಳ ಕಷ್ಟದ ಜೀವನವನ್ನು ನಡೆಸುತ್ತಿರುವುದನ್ನು ಅಮ್ಮಾ ಫೌಂಡೇಶನ್ ಗಮನಕ್ಕೆ ತಂದಿದ್ದು, ಈ ಕುರಿತಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಅಮ್ಮ ಫೌಂಡೇಶನ್ ಸಂಸ್ಥಾಪಕರಾದ ಸುಧಾಕರ್ ಎಸ್ ಶೆಟ್ಟಿ ಅವರ ಪುತ್ರ ಪವನ್ ಶೆಟ್ಟಿ ಅವರು ಭರವಸೆ ನೀಡಿದ್ದಾರೆ. 

ಈ ಭಾಗದ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಅಮ್ಮ ಫೌಂಡೇಶನ್ ಮುಖಾಂತರ ಮಾಡಲಿದ್ದೇವೆ, ಮಲೆನಾಡು ಭಾಗದ ಜನರ ಸಮಸ್ಯೆಗಳಿಗೆ ಸುಧಾಕರ್ ಎಸ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸೂಕ್ತವಾದ ಪರಿಹಾರವನ್ನು ಒದಗಿಸುವ ಎಲ್ಲಾ ಕಾರ್ಯಗಳನ್ನು ನಡೆಸಲಾಗುವುದು ಎಂದರು. 

ಈ ಕುರಿತಾಗಿ ಭೀಮ್ ಆರ್ಮಿಯ ಹೋಬಳಿ ಅಧ್ಯಕ್ಷರಾದ ಎಂ.ಆರ್ ಸುಬ್ರಮಣ್ಯ ಸೇರಿದಂತೆ, ಬಾಳೆಹೊನ್ನೂರು ಹಾಗೂ ನರಸಿಂಹರಾಜಪುರ ತಾಲೂಕು ಸಮಿತಿಯ ಪದಾಧಿಕಾರಿಗಳು ಪವನ್ ಕುಮಾರ್ ಶೆಟ್ಟಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.